ದಕ್ಷಿಣ ಕನ್ನಡ

'1000 ಮೆ.ವ್ಯಾ.ವಿದ್ಯುತ್ ಖರೀದಿಗೆ ಶೀಘ್ರವೇ ಟೆಂಡರ್‌'

Published On :

ಉಡುಪಿ:  ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೋರದಿರುವಂತೆ 1,000 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆದು ಕ್ರಮಕೈಗೊಳ್ಳುತ್ತೇವೆ, ಮಾತ್ರವಲ್ಲ ದಾಮೋದರ ವ್ಯಾಲಿಯಿಂದ 450 ಮೆಗಾ ವ್ಯಾಟ್ ವಿದ್ಯುತ್ ಖರೀದಿಗೆ ಮಂಗಳವಾರ ಸಹಿ ಮಾಡಲಾಗುವುದು ಎಂದು ರಾಜ್ಯ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ಹೊಸಂಗಡಿ ಸಮೀಪದ ವಾರಾಹಿ ಜಲವಿದ್ಯುತ್ ಯೋಜನಾ ಘಟಕಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪರೀಕ್ಷೆ-ವಿದ್ಯುತ್ ಕಡಿತವಿಲ್ಲ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ರಾಜ್ಯದ ಯಾವ ಭಾಗದಲ್ಲಿಯೂ ಲೋಡ್‌ಶೆಡ್ಡಿಂಗ್ ಮಾಡಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ತೊಂದರೆಯಾಗಿದೆ ಬಿಟ್ಟರೆ, ಬೇರೆ ಎಲ್ಲೂ ಲೋಡ್‌ಶೆಡ್ಡಿಂಗ್ ಆಗಿಲ್ಲ. ರೈತರಿಗೆ ದಿನದ 7 ಗಂಟೆಗಳ ಕಾಲ ವಿದ್ಯುತ್ ನೀಡುವ ಆಶ್ವಾಸನೆ ಈಗಾಗಲೇ ನೀಡಿದ್ದು, ರಾತ್ರಿ 3 ಗಂಟೆ ಹಾಗೂ ಹಗಲು 4 ಗಂಟೆ ತ್ರಿಫೇಸ್ ವಿದ್ಯುತ್ ನೀಡುವುದಾಗಿ ಸಚಿವರು ತಿಳಿಸಿದರು. ಬೇರೆ ರಾಜ್ಯದಿಂದ ಅದೇ ದರ ಅಥವಾ ಕಡಿಮೆ ದರದಲ್ಲಿ ವಿದ್ಯುತ್ ನೀಡಲು ಒಪ್ಪಿದರೆ, ಬೇರೆ ರಾಜ್ಯದಿಂದಲೂ ವಿದ್ಯುತ್ ಖರೀದಿ ಮಾಡಲಾಗುವುದು. ಜಲವಿದ್ಯುತ್, ಸೋಲಾರ್ ಹಾಗೂ ಪವನ ವಿದ್ಯುತ್ ಉತ್ಪಾದಿಸುವ ಕೆಲ ಕಂಪನಿಗಳು ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿವೆ. ಆದರೆ, ಈ ಒಪ್ಪಂದ ಕೇವಲ ಕಾಗದಕ್ಕೆ ಸಿಮೀತವಾಗಿದೆ ಬಿಟ್ಟರೆ, ಕಾರ್ಯರೂಪಕ್ಕೆ ತಂದಿಲ್ಲ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡವರ ಪೈಕಿ ಕೆಲವರು 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿಕೊಡಬೇಕಾದಲ್ಲಿ ಕೇವಲ 40 ರಿಂದ 50 ಮೆಗಾವ್ಯಾಟ್ ಉತ್ಪಾದನೆ ಮಾಡುತ್ತಿದ್ದಾರೆ. ಈಗಾಗಲೇ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅಂತವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದರು.
ನಾಗಾರ್ಜುನ ವಿದ್ಯುತ್ ಸ್ಥಾವರದಿಂದ ಪರಿಸರ ಮಾಲಿನ್ಯವಾಗುತ್ತಿರುವ ದೂರುಗಳು ಹೆಚ್ಚು ಬಂದಿವೆ. ಈ ಪ್ರದೇಶಕ್ಕೆ ನಿರಂತರ ಜ್ಯೋತಿ ಯೋಜನೆಯಡಿ  24 ಗಂಟೆ ವಿದ್ಯುತ್ ನೀಡುವುದಕ್ಕೆ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.

'ಸೋಲಾರ್ ವಿದ್ಯುತ್-ಗೃಹ ಬಳಕೆ ಬಳಿಕ ಮಾರಾಟ ಅವಕಾಶ'
ಮಂಗಳೂರು:
ಪ್ರತಿಯೊಂದು ಮನೆಯಲ್ಲೂ ಸೋಲಾರ್ ವಿದ್ಯುತ್ ಉತ್ಪಾದಿಸಿ, ದಿನಬಳಕೆಯ ಹೆಚ್ಚುವರಿ ಸೋಲಾರ್ ವಿದ್ಯುತ್‌ನ್ನು ಸರ್ಕಾರವೇ ಖರೀದಿಸುವ ಯೋಜನೆ ಶೀಘ್ರವೇ ಘೋಷಿಸಲಾಗುವುದು ಎಂದು ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳೂರು ಮೆಸ್ಕಾಂ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು. ಸ್ವಂತ ಬಳಕೆ ನಂತರ ಉಳಿಕೆ ವಿದ್ಯುತ್‌ನ್ನು ಕೆಪಿಟಿಸಿಎಲ್ ಖರೀದಿಸಲಿದೆ. ಯೂನಿಟ್‌ಗೆ ರು. 8ರಂತೆ ಖರೀದಿಗೆ ಚಿಂತಿಸಲಾಗಿದೆ. ಸೋಲಾರ್ ಪ್ಯಾನೆಲ್ ಅಳವಡಿಸಲು ಕೇಂದ್ರ ಶೇ.30 ಹಾಗೂ ರಾಜ್ಯ ಶೇ.20 ಸಬ್ಸಿಡಿ ನೀಡಲಿದೆ. ಇದಕ್ಕಾಗಿ ಗ್ರಾಹಕರು ಸೋಲಾರ್ ವಿದ್ಯುತ್‌ಗೆ ಮೀಟರ್ ಅಳವಡಿಸಲು ಸಮ್ಮತಿಸಲಾಗಿದೆ ಎಂದರು.
ಸರ್ಕಾರಿ ಕಚೇರಿಗೆ ಸೋಲಾರ್: ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳು ಸೋಲಾರ್ ವಿದ್ಯುತ್ ಹೊಂದುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದರಿಂದ ಕಚೇರಿ ವೆಚ್ಚದಲ್ಲಿ ಕಡಿತಗೊಳಿಸಲು ಸಾಧ್ಯವಿದೆ ಎಂದರು.
ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಿದವರಿಗೆ ಕೇಂದ್ರ ಹಾಗೂ ರಾಜ್ಯದಿಂದ ಸಬ್ಸಿಡಿ ಮೊತ್ತ ಸಿಗದಿರುವುದು ತನ್ನ ಗಮನಕ್ಕೆ ಬಂದಿಲ್ಲ. ಆದರೆ ಸೋಲಾರ್ ನಿರ್ವಹಣೆಯಾಗದಿದ್ದರೆ, ಈ ಬಗ್ಗೆ ಗ್ರಾಹಕರ ನೆರವಿಗೆ ಮೆಸ್ಕಾಂ ಧಾವಿಸಲಿದೆ ಎಂದರು.
24 ಗಂಟೆಯಲ್ಲಿ ಸಂಪರ್ಕ: ಬೇಸಿಗೆಯಲ್ಲಿ ಎಲ್ಲೆಡೆ ಕುಡಿವ ನೀರಿನ ಅಗತ್ಯವಿರುತ್ತದೆ. ಹೀಗಾಗಿ ಯಾವುದೇ ಸ್ಥಳೀಯ ಸಂಸ್ಥೆಗಳಿಂದ ಕುಡಿವ ನೀರಿಗೆ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದರೆ 24 ಗಂಟೆಯೊಳಗೆ ವಿದ್ಯುತ್ ಸಂಪರ್ಕ ನೀಡಬೇಕು. ತಪ್ಪಿದಲ್ಲಿ ಅಧಿಕಾರಿಯನ್ನು ಹೊಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೊಸ ಹುದ್ದೆ ಮಂಜೂರು: 4 ಜಿಲ್ಲೆ ವ್ಯಾಪ್ತಿ ಹೊಂದಿರುವ ಮೆಸ್ಕಾಂ ಮಂಗಳೂರು ವಿಭಾಗಕ್ಕೆ ಚೀಫ್ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರೇಟ್ (ಸಿಸಿಐ)ಹುದ್ದೆ ಮಂಜೂರು ಮಾಡಲಾಗಿದೆ. ಇದರ ಕಚೇರಿ ಮಂಗಳೂರಿನಲ್ಲಿ ಇರುತ್ತದೆ. ಇದರಿಂದ ದೊಡ್ಡ ಕಟ್ಟಡಗಳು, ದೊಡ್ಡ ಯೋಜನೆಗಳಿಗೆ ಅನುಮತಿಗೆ ಬೆಂಗಳೂರಿಗೆ ಬರುವ ಪ್ರಮೇಯ ತಪ್ಪಲಿದೆ ಎಂದರು.
ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಗೋವಿಂದಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.