ದಕ್ಷಿಣ ಕನ್ನಡ

ವೇತನಕ್ಕಾಗಿ ಅಧ್ಯಾಪಕ ವೃತ್ತಿ ಬೇಡ: ವಿನಯ ಹೆಗ್ಡೆ

Published On :

ಮಂಗಳೂರು: ವೇತನಕ್ಕಾಗಿ ಅಧ್ಯಾಪಕ ವೃತ್ತಿಗೆ ಸೇರಬಾರದು. ಸರ್ಕಾರಕ್ಕೆ ದಾರಿ ತೋರಿಸುವ ನಿಟ್ಟಿನಲ್ಲಿ ಅಧ್ಯಾಪಕರು ನಡವಳಿಕೆ ತೋರಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯ ಕುಲಾಧಿಪತಿ ಡಾ.ಎನ್.ವಿನಯ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಅವರು ಭಾನುವಾರ ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘದ ರಜತ ಮಹೋತ್ಸವ ವರ್ಷಾಚರಣೆ  ಉದ್ಘಾಟಿಸಿ ಮಾತನಾಡಿದರು. ಪರೀಕ್ಷೆ ಸಮಯ ಬಂದಾಗ ಶಿಕ್ಷಕರು ಬೇಡಿಕೆಯನ್ನು ಎತ್ತಿತೋರಿಸುವುದು ಸರಿಯಲ್ಲ. ಇದರಿಂದ ಮಕ್ಕಳಿಗೆ, ಹೆತ್ತವರಿಗೆ ಅಲ್ಲದೆ ಶಿಕ್ಷಕರಿಗೂ ತೊಂದರೆಯಾಗುತ್ತದೆ. ಸರ್ಕಾರಕ್ಕೆ ಏನೂ ತೊಂದರೆ ಆಗದು. ಈ ಬಗ್ಗೆ ಶಿಕ್ಷಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಶೇ.98 ಶಿಕ್ಷಕರು ವಿದ್ಯಾರ್ಥಿಗಳ ಪರ ಇದ್ದಾರೆ. ಸರ್ಕಾರ ಶಿಕ್ಷಕರಿಗೆ ದಾರಿ ತೋರಿಸುವಂತಾಗಬಾರದು, ಶಿಕ್ಷಕರೇ ಸರ್ಕಾರಕ್ಕೆ ಹಾದಿ ತೋರಿಸಬೇಕು. ಶಿಕ್ಷಕರ ಸಲಹೆಯನ್ನು ಸರ್ಕಾರ ಅಳವಡಿಸುವಂತಾಗಬೇಕು ಎಂದು ಆಶಿಸಿದರು.
ಪ್ರಸ್ತುತ ಕನ್ನಡ ಮಾಧ್ಯಮದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆಂಗ್ಲ ಭಾಷೆಯತ್ತ ಮಕ್ಕಳನ್ನು ಸೇರಿಸಲು ಹೆತ್ತವರು ಒಲವು ತೋರುತ್ತಿದ್ದಾರೆ. ಕನಿಷ್ಠ 5ನೇ ತರಗತಿವರೆಗಾದರೂ ಕನ್ನಡ ಕಲಿಸಬೇಕು. ಎಲ್‌ಎಸ್‌ಎಲ್‌ಸಿ ವರೆಗೆ ಕನ್ನಡಕ್ಕೆ ಉತ್ತೇಜನ ನೀಡಬೇಕು. ಮೇಲಿನ ತರಗತಿಯಲ್ಲಿ ಆಂಗ್ಲ ಭಾಷೆ ಸ್ವಲ್ಪ ಕಷ್ಟವಾದರೂ ನಂತರ ಸರಿಹೋಗುತ್ತದೆ. ಆಧುನಿಕ ಕಾಲಘಟ್ಟಕ್ಕೆ ಸರಿಯಾಗಿ ಕನ್ನಡ ಕಲಿಕೆಯನ್ನು ಹೊಂದಿಸಬೇಕು ಎಂದು ಹೇಳಿದರು.
ಜಾತಿ, ಮತ ಮನೆಗೆ ಸೀಮಿತವಾಗಬೇಕು. ಮಕ್ಕಳು ಜಾತೀಯವನಾಗಿ ಬೆಳೆಯಲು ಪ್ರೋತ್ಸಾಹ ಕೊಡಬಾರದು. ಭಾರತೀಯನಾಗುವಂತೆ ಸಮಾಜದಲ್ಲಿ ಒಂದಾಗುವಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ರೆ.ಫಾ.ವಿಲ್ಸನ್ ವಿ.ಡಿಸೋಜ ರಜತ ಠೇವಣಿಪತ್ರ ಬಿಡುಗಡೆಗೊಳಿಸಿದರು. ಯೇನೆಪೋಯ ವಿಶ್ವವಿದ್ಯಾಲಯ ನಿರ್ದೇಶಕ ಪ್ರೊ.ಸಿಪಿಎಂ ಕುಂಞ, ಸಂಘದ ಸ್ಥಾಪಕ ಅಧ್ಯಕ್ಷ ಸಿ.ಪ್ರಭಾಕರ ಶೆಟ್ಟಿ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ಪಿ.ವೆಂಕ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕಿ ಚಂದ್ರಕಲಾ ನಂದಾವರ ಪ್ರಾಸ್ತಾವಿಕದಲ್ಲಿ, ಸಂಘದಲ್ಲಿ 3550 ಸದಸ್ಯರಿದ್ದು, ರು. 26.29 ಕೋಟಿ ಠೇವಣಿ ಹೊಂದಿದೆ. ಕೇಂದ್ರ ಕಚೇರಿ ವಿಸ್ತರಣೆಗೆ ಉದ್ದೇಶಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.