ಬೈಕ್ ಗರಿಷ್ಠ ವೇಗ ದಾಖಲೆಗೆ ಯತ್ನಿಸಿದ ವೈದ್ಯ ವಿದ್ಯಾರ್ಥಿ ರುಂಡ ಬೇರ್ಪಟ್ಟು ಸಾವು
ಮಂಗಳೂರು: ಅತಿ ವೇಗದ ಬೈಕ್ ಚಲಾಯಿಸುವ ಹುಚ್ಚಾಟಕ್ಕೆ ವೈದ್ಯಕೀಯ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟಿದ್ದಾನೆ. ತಣ್ಣೀರುಬಾವಿ ಬಳಿ ಭಾನುವಾರ ಬೆಳಗ್ಗಿನ ಜಾವ ಬೈಕ್ನ ಗರಿಷ್ಠ ಮಿತಿಯನ್ನು ಮುಟ್ಟಬೇಕು ಎಂಬ ಉದ್ದೇಶದಿಂದ ಅತ್ಯಂತ ವೇಗವಾಗಿ ಚಲಾಯಿಸಿದ್ದು, ನಿಯಂತ್ರಣ ತಪ್ಪಿ ಮರಕ್ಕೆ ಬೈಕ್ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ದೇಹದಿಂದ ಸಂಪೂರ್ಣವಾಗಿ ತಲೆ ಬೇರ್ಪಟ್ಟು ಕೆಲವು ಅಡಿಗಳ ದೂರದಲ್ಲಿ ಬಿದ್ದಿದೆ. ಮೃತಪಟ್ಟ ವಿದ್ಯಾರ್ಥಿ ರೋಹಿತ್ (23) ಕೇರಳ ಮೂಲದವರು. ನಗರದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ಕಮಿಷನರ್ ಆರ್. ಹಿತೇಂದ್ರ, ಅಪರಾಧ ವಿಭಾಗ ಡಿಸಿಪಿ ವಿಷ್ಣುವರ್ಧನ್ ಸ್ಥಳಕ್ಕೆ ಭೇಟಿ ನೀಡಿದರು. ಕೊಲೆ ವದಂತಿ: ಆರಂಭದಲ್ಲಿ ಯುವಕನನ್ನು ಕೊಲೆ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ದೇಹ ಬಿದ್ದ ರೀತಿ, ಮೂಳೆಗಳಲ್ಲ ಮುರಿದಿರುವುದು, ಬೈಕ್ ಬಿದ್ದಿರುವುದು ಅಪಘಾತಕ್ಕೆ ಪುಷ್ಟಿ ನೀಡಿತು. ಮಿತಿ ಮೀರಿದ ವೇಗದಲ್ಲಿ ಬೈಕ್ ಚಲಾಯಿಸಿದ ಪರಿಣಾಮ ಮರಕ್ಕೆ ಬೈಕ್ ಡಿಕ್ಕಿಯಾಗಿದೆ. ಆದ್ದರಿಂದಲೇ ದೇಹದಿಂದ ತಲೆ ತುಂಡಾಗಿದೆ ಎಂದು ಪಣಂಬೂರು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ತಣ್ಣೀರುಬಾವಿ, ಪಣಂಬೂರು ಪರಿಸರದಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಹುಚ್ಚು ಹೆಚ್ಚಿದ್ದು, ಅನೇಕ ವಿದ್ಯಾರ್ಥಿಗಳು ಈ ಭಾಗದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಬಾಲಕಿ ಮೇಲೆ ಭಾವನಿಂದ ಅತ್ಯಾಚಾರ
ಉಪ್ಪಿನಂಗಡಿ: ಮನೆಗೆ ಮಲಗಲು ಬರುತ್ತಿದ್ದ, ಪಕ್ಕದ ಮನೆಯ ನಿವಾಸಿ, ಮಾವನ ಅಪ್ರಾಪ್ತ ವಯಸ್ಕ ಮಗಳ ಮೇಲೆಯೇ ಅತ್ಯಾಚಾರ ನಡೆಸಿದ ಘಟನೆ ಕೌಕ್ರಾಡಿ ಗ್ರಾಮದ ಬದಿಯಡ್ಕದಲ್ಲಿ ನಡೆದಿದೆ. ನೆರೆಮನೆಯಲ್ಲಿದ್ದ ಅತ್ತೆಯ ಮನೆಗೆ ರಾತ್ರಿ ವೇಳೆ ಮಲಗಲು ಹೋಗುತ್ತಿದ್ದ 17 ವರ್ಷದ ಬಾಲಕಿ ಮೇಲೆ ಆಕೆಯ ಆತ್ತೆಯ ಮಗ ನಾಗೇಶ್ ಎಂಬಾತ ಅತ್ಯಾಚಾರ ನಡೆಸಿದ್ದಾರೆ. ನಾಗೇಶ್ ಕುಡಿತದ ಚಟ ಹೊಂದಿದ್ದು, ಮನೆಗೆ ಬರುವಾಗ ಕುಡಿದು ಬರುವುದಲ್ಲದೆ, ತಾಯಿಗೂ ಮದ್ಯ ಕುಡಿಸಿ ಬಾಲಕಿ ಮೇಲೆ ಸತತವಾಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ವಿಷಯ ಬಹಿರಂಗ ಪಡಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ. ಪರಿಣಾಮ ಬಾಲಕಿ ಗರ್ಭವತಿಯಾಗಿರುವುದಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಅಪಘಾತ: ಬೈಕ್ ಸವಾರ ಸಾವು
ಬ್ರಹ್ಮಾವರ: ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಧರ್ಮಾವರ ಅಡಿಟೋರಿಯಂ ಸಮೀಪ ರಾ.ಹೆ.ಯಲ್ಲಿ ಬಸ್ ಹಾಗೂ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಜಿ ಪೆರುಮಾಳ್ ಮೃತರು. ಬಸ್ ಚಾಲಕ ಚಂದ್ರ ಎಂಬಾತ ಬಸ್ಸನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಜಿ ಪೆರುಮಾಳ್ ರಸ್ತೆಗೆ ಬಿದ್ದಿದ್ದು, ಅವರ ಮೇಲೆ ಬಸ್ನ ಟಯರ್ ಹರಿದು ತೀವ್ರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಜಾನ್ಸನ್ ಕ್ರಾಸ್ತ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆ ಆತ್ಮಹತ್ಯೆ
ಕಾಪು: ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಲಾರು ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತರು ರಿಂಕಿ. ಇವರು ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಶನಿವಾರ ರಾತ್ರಿ ರಿಂಕಿ ಹಾಗೂ ಇವರ ಪತಿ ಸಂತೋಷ್ ಸಿಂಗ್ ಊಟ ಮಾಡಿ ಮಲಗಿದ್ದು, ಭಾನುವಾರ ಬೆಳಗ್ಗಿನ ಜಾವ ಸಂತೋಷ್ ಸಿಂಗ್ ಎದ್ದು ನೋಡಿದಾಗ ರಿಂಕಿ ಅವರು ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪದೇ ಪದೇ ಹೊಟ್ಟೆ ನೋವು ಕಾಣಿಸುತ್ತಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತಿ ಸಂತೋಷ ಸಿಂಗ್ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ಉಪ್ಪಿನಂಗಡಿ: ಗುಂಡ್ಯ ಎಂಬಲ್ಲಿ ಹೆದ್ದಾರಿ ಬಳಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಸುಮಾರು 35 ರಿಂದ ನಲ್ವತ್ತು ವರ್ಷ ಪ್ರಾಯದ ಗಂಡಸು ಶವವು ಸಾವನ್ನಪ್ಪಿ ಹತ್ತು ಹದಿನೈದು ದಿನಗಳು ಕಳೆದಿರುವ ಸಾಧ್ಯತೆ ಇದೆ. ಸಾವು ಸಹಜವೋ ಅಥವಾ ಕೊಲೆಯೋ ಎಂಬ ಶಂಕೆಯಿಂದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

