ದಕ್ಷಿಣ ಕನ್ನಡ

ಅಂಬರೀಶ್ ಶೆಟ್ಟಿಗೆ 'ದಿವಾಣ ಭೀಮ ಭಟ್‌' ಪ್ರಶಸ್ತಿ: ಏ. 13ರಂದು ಪ್ರದಾನ

Published On :

ಮೂಲ್ಕಿ: ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗುರು ದಿ. ದಿವಾಣ ಭೀಮ ಭಟ್ ಜನ್ಮ ಶತಮಾನೋತ್ಸವ ಅಂಗವಾಗಿ ದಿವಾಣ ಭೀಮ ಭಟ್ ಪ್ರತಿಷ್ಠಾನ, ಕಿನ್ನಿಗೋಳಿ ಯುಗಪುರುಷ ಹಾಗೂ ಯಕ್ಷ ಲಹರಿಯ ಸಂಯುಕ್ತಾಶ್ರಯದಲ್ಲಿ ಏ. 13ರಂದು ಯುಗಪುರುಷದ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹವ್ಯಾಸಿ ಯಕ್ಷಗಾನ ಭಾಗವತ ಅಂಬರೀಶ್ ಶೆಟ್ಟಿಗೆ 'ದಿವಾಣ ಭೀಮ ಭಟ್‌' ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು. ಕಿನ್ನಿಗೋಳಿ ಯುಗಪುರುಷದ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕಾರ್ಯಕ್ರಮ ಸಮಿತಿ ಅಧ್ಯಕ್ಷರನ್ನಾಗಿ ಹಿಮ್ಮೇಳ ಕಲಾವಿದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರನ್ನು ಆಯ್ಕೆ ಮಾಡಲಾಗಿದೆ. ಬಲಿಪ ನಾರಾಯಣ ಭಾಗವತರ ಸಹಿತ ಹಿರಿಯ ಕಲಾವಿದರ ಕೂಡುವಿಕೆಯಲ್ಲಿ ಕರ್ಣಾಜುನ ಯಕ್ಷಗಾನ ತಾಳಮದ್ದಳೆ ನಡೆಸಲು ನಿರ್ಧರಿಸಲಾಯಿತು.

ಇಂದಿನಿಂದ ಸಸಿಹಿತ್ಲು ವರ್ಷಾವಧಿ ನಡಾವಳಿ
ಮೂಲ್ಕಿ: ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದಲ್ಲಿ ವರ್ಷಾವಧಿ ನಡಾವಳಿ ಮತ್ತು ಭರಣಿ ಮಹೋತ್ಸವ 24ರಿಂದ 30ರವರೆಗೆ ಜರಗಲಿದೆ. 24ರಂದು ಬೆಳಗ್ಗೆ ನಾಗತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಬಲಿ ಉತ್ಸವ, ಕಂಚಿಲು ಸೇವೆ, ಉರುಳು ಸೇವೆ, ಹರಕೆ ತುಲಾಭಾರ, 25ರಂದು ಬೆಳಗ್ಗೆ ಧ್ವಜಾರೋಹಣ, ರಾತ್ರಿ ಮಹಾಪೂಜೆ, 26ರಂದು ರಾತ್ರಿ ಪೂತಾಲಂಬಲಿ, ಮೂರ್ತಿ ದರ್ಶನ, ಪುಷ್ಪಕಳ ಹರಕೆ, 28ರಂದು ರಾತ್ರಿ ತಾಳಪ್ಪೋಲಿ ಬಲಿ ಉತ್ಸವ, ಮೂರ್ತಿ ದರ್ಶನ ನಡೆಯುವುದು. 29ರ ರಾತ್ರಿ ಮೂಡನಡೆ ಬಲಿ ಉತ್ಸವ, ಕಂಚಿಲು ಸೇವೆ, ಉರುಳು ಸೇವೆ, ಅಮೃತ ಕಲಶ, ತೂಟೆದಾರ, 30ರಂದು ಬೆಳಗ್ಗೆ ಧ್ವಜಾವರೋಹಣ, ಭಂಡಾರ ನಿರ್ಗಮನ, 31ರಂದು ರಾತ್ರಿ ಕದಿಕೆ ಭಂಡಾರ ಮನೆಯಲ್ಲಿ ಪೊಯಿಕಣ್ಣ ದೈವ ಮತ್ತು ಇತರ ದೈವಗಳ ತಂಬಿಲ ಜರಗಲಿದೆ.

ಹೊಲಿಗೆ ತರಬೇತಿ:ಅರ್ಜಿ ಆಹ್ವಾನ
ಮಂಗಳೂರು: 2013-14ನೇ ಸಾಲಿನಲ್ಲಿ ಕರ್ನಾಟಕ ಜವಳಿ ನೀತಿಯಡಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಉಚಿತವಾಗಿ ಒಂದು ತಿಂಗಳ ಸಿದ್ಧ ಉಡುಪು ತಯಾರಿಕ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾಂತ್ರೀಕೃತ ಹೊಲಿಗೆ ಯಂತ್ರದಲ್ಲಿ ನೀಡಲು ಉದ್ದೇಶಿಸಲಾಗಿದ್ದು, ತರಬೇತಿ ಪಡೆದ ಫಲಾನುಭವಿಗಳಿಗೆ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಉದ್ಯೋಗ ಒದಗಿಸಿಕೊಡಲಾಗುವುದು. ತರಬೇತಿ ಪಡೆದ ಫಲಾನುಭವಿಗಳಿಗೆ ರು.  2 ಸಾವಿರ ಶಿಷ್ಯ ವೇತನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. 5ನೇ ತರಗತಿ ವ್ಯಾಸಂಗ ಮಾಡಿರುವ ಸಾಮಾನ್ಯ ವರ್ಗದ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದ ನಿರುದ್ಯೋಗ ಪುರುಷ ಮತ್ತು ಮಹಿಳೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕುಸುಮಾ ದೇವಾಡಿಗ- 9448770092 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

30ರಂದು ಕಾರ್ಯಾಗಾರ
ಮಂಗಳೂರು: ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷರ ಕಚೇರಿ ವತಿಯಿಂದ ಮಾ. 30 ರಂದು ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರ ನಡೆಯಲಿದೆ ಎಂದು ಜಿಲ್ಲಾಸ್ಪತ್ರೆ ಪ್ರಕಟಣೆ ತಿಳಿಸಿದೆ.

ಹುತಾತ್ಮ ದಿನಾಚರಣೆ: ರಕ್ತದಾನ ಶಿಬಿರ
ದಾಂಡೇಲಿ: ಮಾ.23ರ ಹುತಾತ್ಮ ದಿನಾಚರಣೆ ಪ್ರಯುಕ್ತ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯ ನೇತೃತ್ವದಲ್ಲಿ ಬಂಗೂರ ನಗರದ ಪ.ಪೂರ್ವ ಕಾಲೇಜಿನ ನರ್ಸಿಂಗ್ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಶಿಬಿರವನ್ನು ಉಪನ್ಯಾಸಕ ಎನ್.ವಿ. ಪಾಟೀಲ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ಶಿಬಿರದಲ್ಲಿ ಡಾ. ಎಸ್.ಎ. ಅಗರವಾಲ, ಡಾ. ದಯಾನಂದ ಮತ್ತು ಎಬಿವಿಪಿ ತಾಲೂಕು ಪ್ರಮುಖ ಹರ್ಷವರ್ಧನ ಪಾಟೀಲ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಪ್ರಭು ಅರವಟಿಗಿ ಮುಂತಾದವರಿದ್ದು ನೆರವಾದರು. ವಿವಿಧ ಕಾಲೇಜಿನ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಕರಾಟೆ: ಶ್ವೇತಾ ತೃತೀಯ
ಮುಂಡಗೋಡ: ಶ್ರೀಲಂಕಾದಲ್ಲಿ ಇಂಟರ್ ನ್ಯಾಶನಲ್ ಶೋಟೋಕಾನ್ ಕರಾಟೆ ಅಸೋಸಿಯೇಶನ್ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದ ಶ್ವೇತಾ ಮಹಾವೀರ ಏಗಪ್ಪನವರ್ ತೃತೀಯ ಸ್ಥಾನ ಗಳಿಸಿದ್ದಾಳೆ. ಈಕೆ ಧಾರವಾಡದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.

ಪ್ರತಿಷ್ಠಾಪನಾ ಮಹೋತ್ಸವ
ಅಂಕೋಲಾ: ತಾಲೂಕಿನ ಕಸಬಾ ಕೇಣಿಯ ಶ್ರೀಬ್ರಹ್ಮ ನಾಗದೇವತಾ ಚೌಡೇಶ್ವರಿ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಮಾ. 24ರಂದು ನಡೆಯಲಿದೆ. ಗ್ರಾಮದ ಆಸ್ತಿಕ ಭಕ್ತಾಧಿಗಳ ಆರಾಧ್ಯ ದೇವರಾದ ಶ್ರೀ ಬ್ರಹ್ಮ ನಾಗದೇವತಾ ಚೌಡೇಶ್ವರಿ ದೇವರ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಕಾರ್ಯಕ್ರಮಗಳು ನಡೆಯಲಿವೆ. ಮಹಾಪೂಜೆ ನಂತರ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ.

ಬೈಕ್ ಕಳ್ಳತನ
ಭಟ್ಕಳ: ಭಾನುವಾರ ರಾತ್ರಿ ಇಲ್ಲಿನ ಮನಕುಳಿಯ ವೀರವಿಠ್ಠಲ ರಸ್ತೆಯ ಬಳಿ ನಿಲ್ಲಿಸಲಾಗಿದ್ದ ಹೊಸ ದ್ವಿಚಕ್ರ ವಾಹನ ಕಳ್ಳತನವಾಗಿದೆ. ಬೈಕ್ ದಿನೇಶ್ ಎಂಬುವರಿಗೆ ಸೇರಿದ್ದಾಗಿದ್ದು, ಬೈಕ್‌ಗೆ ಇದುವರೆಗೂ ನಂಬರ್ ಪ್ಲೇಟ್ ಅಳವಡಿಸಲಾಗಿಲ್ಲ.  ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.