ದಕ್ಷಿಣ ಕನ್ನಡ

ನೀವು ಸುಮ್ಮನಿರುವುದಕ್ಕೇ ಪೂಜಾರಿ ಮಾತಾಡೋದು!

Published On :

ಮಂಗಳೂರು: 'ಪೂಜಾರಿ ಜಾಸ್ತಿ ಮಾತನಾಡುತ್ತಾರೆ ಹೇಳ್ತಾರೆ, ನೀವೆಲ್ಲ (ಕಾಂಗ್ರೆಸಿಗರು, ಕಾರ್ಯಕರ್ತರು) ಮಾತನಾಡದೆ ಇರುವುದರಿಂದಲೇ ನಾನು ಹೆಚ್ಚು ಮಾತನಾಡಬೇಕಾಗಿದೆ' ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.
 ಪುರಭವನದಲ್ಲಿ ಸೋಮವಾರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಕೆಟ್ಟ ಆಡಳಿತವನ್ನು ನೀವೆಲ್ಲಾ ಮನೆ ಮನೆಗೆ ಹೋಗಿ ಹೇಳಬೇಕು. ಕೇಂದ್ರದಲ್ಲಿ ಕೋಟ್ಯಂತರ ಹಗರಣ ನಡೆಯುವುದಾಗಿ ಹೇಳುತ್ತಾರೆ. ಕೋಟಿಗಟ್ಟಲೆ ನಷ್ಟವನ್ನು ಕಾಲ್ಪನಿಕವಾಗಿ ಅಂದಾಜಿಸುತ್ತಾರೆ.
 ನನ್ನ ಬಳಿ ಇರುವ ಪೆನ್ ಈಗ ಹರಾಜಿಗಿಡುತ್ತೇನೆ. ಮುಂದಿನ ವರ್ಷ ಇದೇ ಪೆನ್ ಹರಾಜಿಗಿಟ್ಟರೆ 150 ಹೆಚ್ಚು ಬೆಲೆ ಬರುತ್ತಿತ್ತು. ಅಷ್ಟು ಹಣ ನಷ್ಟವಾಯಿತು ಎಂಬ ಲೆಕ್ಕಾಚಾರದಂತೆ ಕೇಂದ್ರದ ಹಗರಣಗಳ ಕಾಲ್ಪನಿಕ ನಷ್ಟವನ್ನೇ ಪ್ರಚಾರ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರ ಮುಂದೆ ಉದಾಹರಣೆ ಸಹಿತ ವಿವರಿಸಿದರು.
 ಬಿಜೆಪಿಯ ಕೋಮುವಾದಿ ಗುಣ ಮತ್ತು ರೈತರ ಭೂಮಿಯನ್ನು ಶ್ರೀಮಂತರಿಗೆ ನೀಡಿ ರೈತರನ್ನು ನಿರ್ಗತಿಕರನ್ನಾಗಿ ಮಾಡುವ ವಿಚಾರ ಎಲ್ಲರಿಗೂ ಹೇಳಬೇಕು. ಶ್ರೀಮಂತರಿಗೆ ಉದ್ಯಮಿಗಳಿಗೆ ರೈತರ ಭೂಮಿಯನ್ನು ಕೊಟ್ಟು ನಿರ್ಗತಿಕರನ್ನಾಗಿ ಮಾಡಿದ್ದಾರೆ. ಗುಜರಾತ್‌ನಲ್ಲಿ ಸ್ವರ್ಗ ಇದೆ ಎಂದು ಸುಳ್ಳೇ ಹೇಳುತ್ತಿದ್ದಾರೆ ಅಲ್ಲಿರುವುದು ನರಕ ಎಂದು ವಿಶ್ಲೇಷಿಸಿದರು.  
ಮನುಷ್ಯ ತಿನ್ನುವ ಹುಲಿ:  ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಗೋ ಸಂರಕ್ಷಣೆ ಘೋಷಣೆ ಕೂಗುವ ಬಿಜೆಪಿಯವರು ಈಗ ಹುಲಿ ಮುಂದೆ ಇಟ್ಟು ಪ್ಲೆಕ್ಸ್‌ನಲ್ಲಿ ಹಾಕುತ್ತಿದ್ದಾರೆ. ಬಂಡಿಪುರದಲ್ಲಿ ಮನುಷ್ಯನನ್ನು ತಿನ್ನುವ ಹುಲಿ ಇತ್ತು ಅದನ್ನು ರಮಾನಾಥ ರೈಗಳು ಹಿಡಿದಿದ್ದಾರೆ. ಬಿಜೆಪಿ ಹುಲಿ ಬಹುಷಃ ಮನುಷ್ಯನನ್ನೇ ತಿನ್ನುವ ಹುಲಿ ಇರಬೇಕು. ಈ ಹುಲಿ ಮೋದಿಯನ್ನು ತಿನ್ನುತ್ತದೆಯೋ ಬಿಜೆಪಿಯನ್ನು ತಿನ್ನುತ್ತದೆಯೋ ನೋಡಬೇಕು ಎಂದು ವ್ಯಂಗ್ಯವಾಡಿದರು.
 ಚುನಾವಣೆ ಪ್ರಚಾರಕ್ಕೆ ಮನೆ ಮನೆಗೆ ಹೋದಾಗ ಕೆಲವರು ಐದು ವರ್ಷದ ಬಳಿಕ ಈಗ ಬಂದಿದ್ದೀರಾ ಎಂದು ಕೇಳುವುದುಂಟು. ಅಂಥವರಿಗೆ ನಿಮಗೆ ಮನೆ ಸಿಗಲಿಲ್ವಾ? ಶಾಲೆ, ಆಗಿಲ್ವೆ, ಅಂಗನವಾಡಿ ಆಗಿಲ್ವೇ, ಲೈಟ್ ಬಂದಿಲ್ವೇ, ನೀರು ಬಂದಿಲ್ವೇ ಎಂದು ಉತ್ತರಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ಮಾಡಿದರು. ಉಭಯ ಜಿಲ್ಲೆಗಳಲ್ಲಿ ಈಗ ಇರುವ ಎಲ್ಲ ನಾಯಕರಿಗೆ ಜನಾರ್ದನ ಪೂಜಾರಿಯೇ ಪ್ರೇರಣೆ ಎಂದು ಸೊರಕೆ ಹೇಳಿದರು.
 ಉಸ್ತುವಾರಿ ಸಚಿವ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಶಾಸಕ ಜೆ.ಆರ್.ಲೋಬೊ, ಶಾಸಕ ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ ಇದ್ದರು.

ಮಸೂದ್ ಇಬ್ರಾಹಿಂ ಕೈ ಎತ್ತಿಲ್ಲ!
ಎಲ್ಲ ಜಾತಿಯಲ್ಲಿಯೂ ಬಡವರಿಲ್ಲ. ಅವರ ಕಣ್ಣೀರನ್ನು ಒರೆಸಲು ಯಾರೂ ಇಲ್ಲ. ಬ್ರಾಹ್ಮಣರ ಮತ್ತು ಗೌಡಸಾರಸ್ವತ ಬ್ರಾಹ್ಮಣರ ಮೀಸಲಿಗೆ ಪೂಜಾರಿ ಹೋರಾಟ ಮಾಡುತ್ತೇನೆ. ಕಾಂಗ್ರೆಸ್ ಜವಾಬ್ದಾರಿ ಇದೆ. ನಾವಿದ್ದೇವೆ, ದೇಶ ಇದೆ ಎಂದು ತೋರಿಸಿಕೊಡುವುದಾದರೆ ಕೈ ಎತ್ತಿ ನೋಡುವ.. ಎಂದಾಗ ಸಚಿವ ರಮಾನಾಥ ರೈ, ಸೊರಕೆ ಸಹಿತ ವೇದಿಕೆ, ಕೆಳಭಾಗದಲ್ಲಿದ್ದವರು ಕೈ ಎತ್ತಿದರು. ವೇದಿಕೆಯಲ್ಲಿದ್ದ ಕೆ.ಎಂ.ಎಸ್. ಮಸೂದ್, ಮಾಜಿ ಸಂಸದ ಬಿ. ಎ. ಮೊಹಿದ್ದೀನ್ ಕೈ ಎತ್ತಲಿಲ್ಲ.

ಕಲ್ಲಡ್ಕ ಭಟ್-ರೈ ನಡುವೆ...
ಉಸ್ತುವಾರಿ ಸಚಿವ ರಮಾನಾಥ ರೈಗಳು ಕಳೆದ ಬಾರಿ ವಿಧಾನಸಭೆಯಲ್ಲಿ ಸ್ಪರ್ಧಿಸುವಾಗ 'ಸ್ಪರ್ಧೆ ಇರುವುದು ನನ್ನ ಮತ್ತು ಕಲ್ಲಡ್ಕ ಪ್ರಭಾಕರ ಭಟ್ ನಡುವೆ' ಎಂದು ಹೇಳಿದ್ದರು. ಅದೇ ರೀತಿ ಈ ಬಾರಿ ಸ್ಪರ್ಧೆ ಇರುವುದು ನನ್ನ ಮತ್ತು ಮೋದಿ ನಡುವೆ, ನಳಿನ್ ಕುಮಾರ್ ಜತೆ ಅಲ್ಲ ಎಂದು ಪೂಜಾರಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.