ಮೆಕ್ಕೆಜೋಳ ಖರೀದಿ ಹಣ ವಿಳಂಬ ಖಂಡಿಸಿ ರೈತರ ಪ್ರತಿಭಟನೆ
ಹಿರೇಕೆರೂರು: ಬೆಂಬಲ ಬೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಮೆಕ್ಕೆಜೋಳ ಖರೀದಿ ಮಾಡಿದ್ದು, ಸಕಾಲಕ್ಕೆ ರೈತರಿಗೆ ಹಣ ಪಾವತಿಸಬೇಕೆಂದು ಆಗ್ರಹಿಸಿ ರೈತಸಂಘದ ತಾಲೂಕು ಘಟಕದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನೆಡಸಿದರು.
ಈ ಸಂರ್ದಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ವಿ. ಕೆಂಚಳ್ಳೇರ ಮಾತನಾಡಿ, ತಾಲೂಕಿನ ರೈತರು ಎಪಿಎಂಸಿಯಲ್ಲಿ ಕಳೆದ ಮೂರು ತಿಂಗಳಿಂದ ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ತಿಂಗಳುಗಟ್ಟಲೆ ಹಗಲಿರುಳೆನ್ನದೆ ಸರದಿಯಲ್ಲಿ ಕಾಯ್ದು ಮಾರಾಟ ಮಾಡಿದ್ದು, ಇದುವರೆಗೂ ರೈತರಿಗೆ ಹಣ ನೀಡದೆ ಇರುವುದರಿಂದ ಆರ್ಥಿಕ ಸಂಕಷ್ಟ ಎದುರಿಸುತಿದ್ದಾರೆ. ಕೃಷಿ ಖರ್ಚು, ಮನೆತನದ ನಿರ್ವಹಣೆ, ಕೈಗಡ ಸಾಲ ಹೀಗೆ ಅನೇಕ ತೊಂದರೆಗಳಿಗೆ ಸಿಲುಕಿದ್ದು, ಇದೀಗ ಬ್ಯಾಂಕ್ಗಳು ಮಾ. 31 ರೊಳಗೆ ಸಾಲ ಮರುಪಾವತಿಸಲು ಒತ್ತಾಯಿಸುತ್ತಿದ್ದು, ಇಷ್ಟೆಲ್ಲ ತೊಂದರೆಗಳಿದ್ದರೂ ಸರ್ಕಾರ ರೈತರಿಗೆ ಪಾವತಿಸಬೇಕಾದ ಹಣವನ್ನು ಕೊಡದೆ ವಿಳಂಬ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸರ್ಕಾರವೇ ಇಲ್ಲವೇನೋ ಎನ್ನುವಂತಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆಸಿದ್ದು, ಸರ್ಕಾರ ಹಾಗೂ ರಾಜಕೀಯ ವ್ಯಕ್ತಿಗಳ ಮಧ್ಯದಲ್ಲಿ ರೈತರು ಸಂಪೂರ್ಣವಾಗಿ ನಲುಗಿ ಹೋಗಿದ್ದಾರೆ. ಒಂದು ವಾರದಲ್ಲಿ ರೈತರಿಗೆ ಪಾವತಿಸಬೇಕಾದ ಹಣವನ್ನು ಪಾವತಿಸದಿದ್ದಲ್ಲಿ ರೈತ ಸಂಘ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲೆಯ ಏಳು ತಾಲೂಕುಗಳ 12626 ರೈತರಿಂದ ರು. 172.32 ಕೋಟಿ ಮೌಲ್ಯದ 1280 ದಶಲಕ್ಷ ಟನ್ ಮೆಕ್ಕೆಜೋಳ ಖರೀದಿ ಮಾಡಲಾಗಿದೆ. ಅದರಲ್ಲಿ 2504 ರೈತರಿಗೆ ರು. 39 ಕೋಟಿ ಪಾವತಿಸಿದ್ದು ಇನ್ನೂ 10122 ರೈತರಿಗೆ 132.22 ಕೋಟಿ ಪಾವತಿಸಬೇಕು. ಸಕಾಲಕ್ಕೆ ಪಾವತಿಸದೇ ಇರುವುದರಿಂದ ಬಡ್ಡಿ ಸಮೇತ ಹಣ ನೀಡಬೇಕೆಂದರು. ಕಳಪೆ ಹತ್ತಿ ಬೀಜದ ಪರಿಹಾರಕ್ಕೆ ತಾಲೂಕು, ಜಿಲ್ಲಾ ರೈತ ಸಂಘ ಕಳೆದ ಐದು ತಿಂಗಳಿನಿಂದ ಹೋರಾಟ ಮಾಡಿದ್ದು, ರಾಜ್ಯ ಸರ್ಕಾರ ಪ್ರತಿ ಹೆಕ್ಟೇರಗೆ ರು. 6 ಸಾವಿರ ಪಾವತಿಸುವುದಾಗಿ ಭರವಸೆ ನೀಡಿತ್ತು. ಈ ಹಣವನ್ನು ವಿಳಂಬ ಮಾಡದೆ ತಕ್ಷಣ ಬಿಡಗಡೆ ಮಾಡಬೇಕು. ರೈತರ ಪಹಣಿ ತಪ್ಪು ನಮೂದಾದರೆ, ಇಲ್ಲವೆ ಕೆಐಡಿ ದುರಸ್ತಿ ಮಾಡಬೇಕಾದರೆ ತಾಲೂಕಿನ ಸಂಬಂಧಪಟ್ಟ ಅಧಿಕಾರಿ ರೈತರಿಗೆ ಅನಾವಶ್ಯಕ ಕಿರುಕುಳ ಕೊಡುತ್ತಿದ್ದು, ರೈತರು ಅರ್ಜಿ ಸಲ್ಲಿಸಿ 6 ತಿಂಗಳು ಗತಿಸಿದರೂ ಪರಿಹಾರವಾಗುತ್ತಿಲ್ಲ. ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಶೀಲಿಸಿ ಅನುಭವವಿರುವ ಪ್ರಾಮಾಣಿಕ ಅಧಿಕಾರಿ ನೇಮಿಸಬೇಕೆಂದು ಆಗ್ರಹಿಸಿದರು. ಈ ಕುರಿತ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ತುಷಾರ ಹೊಸೂರ ಇವರಿಗೆ ಸಲ್ಲಿಸಿದರು. ತಾಲೂಕು ಗೌರವಾಧ್ಯಕ್ಷ ಸೋಮಶೇಖರಪ್ಪ ಚಪ್ಪರದಹಳ್ಳಿ , ತಾಲೂಕಾಧ್ಯಕ್ಷ ಬಸನಗೌಡ ಗಂಗಪ್ಪನವರ, ಕಾರ್ಯಕರ್ತರಾದ ರುದ್ರಪ್ಪ, ಹನುಮಗೌಡ ನಾಗಪ್ಪನವರ, ಲೋಕಪ್ಪ ಹುಲ್ಲತ್ತಿ, ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ , ಶಂಕರಗೌಡ ಮಕ್ಕಳ್ಳಿ, ಹೂವನಗೌಡ ಮಳವಳ್ಳಿ, ವೆಂಕಟೇಶ ಮೇಲಗಿರಿ, ಶಂಕರಗೌಡ ಶಿರಗಂಬಿಗಂಗಣ್ಣ, ಎಲಿ ಸಿದ್ಧಪ್ಪ ಕುರುಬರ, ಬಸನಗೌಡ ಕೆಂಚಪ್ಪಳವರ, ಸುರೇಶ ಮಾಳಗಿ, ಮಲ್ಲನಗೌಡ ಮಾಳಗಿ, ಪರಮೇಶಪ್ಪ ಪೂಜಾರ, ಹೇಮಾ ಹಳಕಟ್ಟೆ, ಸಿದ್ದಲಿಂಗಪ್ಪ ಹಳಕಟ್ಟಿ, ನಾಗಪ್ಪ ಚಪ್ಪರದಳ್ಳಿ, ಮೊದಲಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

