ಜೆಡಿಎಸ್ ತೊರೆಯಲು ನಿರ್ಧಾರ
ಯಲ್ಲಾಪುರ: ಅನಿರೀಕ್ಷಿತವೆಂದೇ ಹೇಳಬಹುದಾದ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಯಲ್ಲಾಪುರದ ಸುಮಾರು 17 ಪ್ರಮುಖ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ತಾಲೂಕು ಪ್ರಧಾನ ಕಾರ್ಯದರ್ಶಿ ಅರವಿಂದ ವೆರ್ಣೇಕರ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ವಿ.ಜಿ. ಭಟ್ಟ, ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ವಿ.ಜಿ. ಭಾಗ್ವತ್ ಹರಾಹುರಿ, ವಿಶ್ವೇಶ್ವರ ಕಾರೇಮನೆ, ರಾಮಚಂದ್ರ ಗಣಪೂಮನೆ, ಗೋಪಾಲಕೃಷ್ಣ ಗಾಂವ್ಕರ್, ದತ್ತಾತ್ರೇಯ ಭಟ್ಟ, ವಿಶ್ವೇಶ್ವರ ಸಭಾಹಿತ ಉಪಸ್ಥಿತಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಭಟ್ಟ ವಡ್ರಮನೆ ಈ ಅಚ್ಚರಿಯ ನಿರ್ಧಾರವನ್ನು ಬಹಿರಂಗಗೊಳಿಸಿದರು.
ಪಕ್ಷದ ಕ್ರಿಯಾಶೀಲ ಕಾರ್ಯಕರ್ತರಾದ ಪ್ರಶಾಂತ ಸಭಾಹಿತ, ಭಾಸ್ಕರ ಮಳಿಕ, ಪ್ರಸನ್ನ ದೋಣಿಗದ್ದೆ, ಕೃಷ್ಣ ಕೇಶನ್, ಗೋಪಾಲಕೃಷ್ಣ ಭಾಗ್ವತ ಮಳಲಗಾಂವ, ನಾಗರಾಜ ವೆರ್ಣೇಕರ್, ಅನಂತ ಅಡಕೆಪಾಲ, ಪ್ರಭಾಕರ ಸಾವಗದ್ದೆ ಜೆಡಿಎಸ್ನ ಪ್ರಾಥಮಿಕ ಸದಸ್ಯತ್ವಕ್ಕೆ, ವಿವಿಧ ಹುದ್ದೆಗಳಿಗೆ ರಾಜಿನಾಮೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದರು.
ತುಮುಲ ಬಿಚ್ಚಿಟ್ಟರು: ಇದೀಗ ಪಕ್ಷ ತೊರೆಯಲು ವರಿಷ್ಠರ ಮೇಲಿನ ಅಸಮಾಧಾನವಾಗಲಿ, ಅಗೌರವವಾಗಲಿ ಅಥವಾ ಪಕ್ಷ ಕಡೆಗಣಿಸಿದೆ ಎಂಬ ಅನುಚಿತ ಭಾವನೆಯಾಗಲಿ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಾಮಾಜಿಕ ಅಭಿವೃದ್ಧಿಯ ತುಡಿತವಿರುವ ನಮಗೆ ಅದನ್ನು ಸಾಧಿಸಲು ಒಂದೋ ಅಧಿಕಾರವಿದ್ದಲ್ಲಿ ನಾವಿರಬೇಕು. ಇಲ್ಲವೇ ನಾವಿದ್ದಲ್ಲಿ ಅಧಿಕಾರವಿರಬೇಕು ಎಂದು ಅಂತರಂಗದ ಭಾವನೆಯನ್ನು ತೆರೆದಿಟ್ಟರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಿಂದಲೂ ಹಿಮ್ಮುಖ ಚಲನೆಯತ್ತ ಸಾಗಿರುವ ಜೆಡಿಎಸ್, ಬಿಜೆಪಿಯ ಸಾಂಪ್ರದಾಯಿಕ ಶಕ್ತಿ ಹಾಗೂ ಕಾಂಗ್ರೆಸ್ನ ಅಭಿವೃದ್ಧಿಶೀಲ ನಡೆಗಳ ಎದುರು ಕ್ಷೀಣಗೊಳ್ಳುತ್ತಿದೆ ಎಂಬುದು ವಾಸ್ತವಿಕ ಸತ್ಯ. ಎಲ್ಲೋ ಒಂದೆಡೆ ಜನಸಾಮಾನ್ಯರ ಮನ ಗೆಲ್ಲುವಲ್ಲಿ ನಾವು ವಿಫಲರಾಗಿರುವುದೇ ಪಕ್ಷದ ಕ್ಷೀಣತೆಗೆ ಕಾರಣವಾಗಿರಬಹುದೇ ಎಂದು ಯೋಚಿಸುವಂತಾಗಿದೆ ಎಂದು ಮನದಾಳದ ತುಮುಲವನ್ನು ಬಿಡಿಸಿಟ್ಟರು. ನಾವು ಎಷ್ಟೇ ಪ್ರಾಮಾಣಿಕರಾಗಿದ್ದರೂ, ಜನಸಾಮಾನ್ಯರು ನಮ್ಮನ್ನು ಈ ಪಕ್ಷದಲ್ಲಿ ಒಪ್ಪಿಕೊಳ್ಳುತ್ತಿಲ್ಲ. ನಮಗೂ ಜನಬೆಂಬಲದ ಅವಶ್ಯಕತೆ ಇದ್ದು, ಆ ನಿರೀಕ್ಷೆಯ ಹಿನ್ನೆಲೆಯಲ್ಲಿ ತಮ್ಮ ರಾಜಿನಾಮೆ ಸಮರ್ಥಿಸಿಕೊಂಡ ಅವರು, ಬರುವ ಒಂದೆರಡು ದಿನಗಳಲ್ಲಿ ತಮ್ಮ ಮುಂದಿನ ನಡೆ ಕುರಿತಾಗಿ ತಿಳಿಸುವುದಾಗಿ ಹೇಳಿದರು. ನಮ್ಮನ್ನು ವಿವಿಧ ಪಕ್ಷಗಳ ಅನೇಕ ಪ್ರಮುಖರು ಈಗಾಗಲೇ ಸಂಪರ್ಕಿಸಿದ್ದರೂ, ನಮ್ಮ ನಿಲುವಿನ ಕುರಿತು ನಾವಿನ್ನೂ ಖಚಿತ ತೀರ್ಮಾನ ತೆಗೆದುಕೊಂಡಿಲ್ಲ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳ ಅನೇಕ ಜೆಡಿಎಸ್ ಪ್ರಮುಖರೂ ಇದೇ ರೀತಿಯ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

