ಭಕ್ತಿಯೊಂದಿಗೆ ನಂಬಿಕೆ ಇದ್ದರೆ ಉನ್ನತ ಸ್ಥಾನ'
ಪುತ್ತೂರು: ಮನುಷ್ಯ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಬೇಕಾದರೆ ಭಕ್ತಿಯ ಜೊತೆಗೆ ನಂಬಿಕೆಯೂ ಬಹಳ ಮುಖ್ಯ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವಸ್ಥಾನ, ದೈವಸ್ಥಾನ, ನಾಗಬನ ಮುಂತಾದ ಶ್ರದ್ಧಾ ಕೇಂದ್ರಗಳು ಮಾನವನ ಬದುಕಿಗೆ ಆಧಾರವಾಗಿದ್ದು, ಈ ಕ್ಷೇತ್ರಗಳ ಅಭಿವೃದ್ಧಿ ಕಾರ್ಯ ನಡೆದಾಗ ಮಾನಸಿಕ ನೆಮ್ಮದಿ ಲಭಿಸುತ್ತದೆ. ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಮಾತ್ರವಲ್ಲದೆ ಧರ್ಮ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಪರಸ್ಪರ ವಿಶ್ವಾಸ ಮತ್ತು ನಂಬಿಕೆಯನ್ನು ಬೆಳೆಸಿಕೊಳ್ಳುವ ಪ್ರಜಾತಂತ್ರ ವ್ಯವಸ್ಥೆ ಅನಿವಾರ್ಯವಾಗಿದ್ದು, ಹಣ, ಐಶ್ವರ್ಯಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯವಾಗಿದೆ. ಈ ದೃಷ್ಟಿಯಿಂದ ನಾವಿಂದು ಧಾರ್ಮಿಕ ಕ್ಷೇತ್ರಕ್ಕೆ ವಿಶೇಷ ಒತ್ತು ಕೊಡಬೇಕಾಗಿದೆ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಮನುಷ್ಯನಿಗೆ ಎಷ್ಟೇ ಸಿಕ್ಕಿದರೂ ತೃಪ್ತಿ ಎಂಬುದು ಇಲ್ಲ. ಆಸೆಯ ಜೊತೆಗೆ ದುರಾಸೆ ಹೆಚ್ಚುತ್ತಿದೆ. ಇದರಿಂದಾಗಿ ಅಶಾಂತಿ ಉಂಟಾಗುತ್ತಿದೆ. ಆದರೆ, ದೇವತಾರಾಧನೆಯಿಂದ ಶಾಂತಿ, ನೆಮ್ಮದಿ ಲಭ್ಯವಾಗುತ್ತದೆ ಎಂದು ಹೇಳಿದರು.
ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ .ಕೆ.ಎಸ್ ಅವರು ಅಧ್ಯಕ್ಷತೆ ವಹಿಸಿದ್ದರು.
ನವೀಕೃತ ಚಿನ್ಮಯೀ ಸಭಾಂಗಣವನ್ನು ಮೈಸೂರಿನ ಉದ್ಯಮಿ ಪ್ರಭಾಕರ ಶೆಟ್ಟಿ, ಅನ್ನಛತ್ರವನ್ನು ಕೋಡಿಂಬಾಡಿ ರೈ ಎಸ್ಟೇಟ್ನ ಗಿರಿಜಾ .ಎಸ್ ರೈ, ಪಾಕಶಾಲೆಯನ್ನು ರತ್ನಾವತಿ ಸುಂದರ ಶೆಟ್ಟಿ ಮಠಂತಬೆಟ್ಟು, ವಿಶ್ರಾಂತಿ ಕೊಠಡಿಯನ್ನು ಮಂಗಳೂರು ಕೆನರಾ ಮೆಡಿಕಲ್ ಮಾಲೀಕ ಪಿ.ಕೆ.ಎಸ್. ಗೌಡ ಉದ್ಘಾಟಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಶೇಖರ .ಜೆ, ಡಿ.ವಿ. ಸದಾನಂದ ಗೌಡ ಅವರ ಪತ್ನಿ ಡಾಟಿ ಸದಾನಂದ ಗೌಡ ಮತ್ತು ಶ್ರೀನಿವಾಸ ರೈ ಮಠಂತಬೆಟ್ಟು ಇದ್ದರು.
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ನಾಯಕ್ ನಿಡ್ಯ ವಂದಿಸಿದರು. ಕರುಣಾಕರ ಸಾಮಾನಿ ಸಂಪಿಗೆದಡಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

