ಜಿಲ್ಲಾ ಪಂಚಾಯಿತಿ ಅಧ್ಯಕ್ಷತೆ: ಆಶಾ, ಸುನಿತಾ ಶೆಟ್ಟಿ ಪೈಪೋಟಿ
ಮಂಗಳೂರು: ದ.ಕ. ಜಿಲ್ಲಾ ಪಂಚಾಯ್ತಿ ಕೊನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. 20 ತಿಂಗಳ ಆಡಳಿತಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಲಿದೆ.
ಈ ಮೊದಲು ಹಿಂದುಳಿದ ವರ್ಗ ಎ ಮಹಿಳೆ ಮತ್ತು ಸಾಮಾನ್ಯ ಮೀಸಲಾತಿ ಎಂದು ನಿಗದಿಯಾಗಿತ್ತು. ಈಗ ಸಾಮಾನ್ಯ ಮಹಿಳೆ ನಿಗದಿಯಾಗಿರುವುದರಿಂದ ಬಿಜೆಪಿ ಪಾಳಯದ ಎಲ್ಲ ಮಹಿಳಾ ಸದಸ್ಯರು ಅರ್ಹರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲರಿಗೂ ಅವಕಾಶವಿದೆ.
ಒಟ್ಟು 35 ಸದಸ್ಯರಿರುವ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ 24 ಹಾಗೂ 11 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. ಇದು ಕೊನೆ ಅವಧಿಯಾದ್ದರಿಂದ ಉತ್ತಮ ರೀತಿಯಲ್ಲಿ ಆಡಳಿತ ನಡೆಸುವವರನ್ನು ಅಧ್ಯಕ್ಷಗಾದಿಗೆ ಕೂರಿಸಬೇಕಾದ ಅನಿವಾರ್ಯತೆ ಪಕ್ಷಕ್ಕಿದೆ. ಪರಿಷ್ಕೃತ ಮೀಸಲಾತಿ ಪ್ರಕಟವಾಗಿರುವುದರಿಂದ ಬಿಜೆಪಿಗೆ ಹೇಳುವಂಥ ಕಷ್ಟವಾಗದು.
ಇಬ್ಬರೊಳಗೆ ಪೈಪೋಟಿ: ಈ ಅವಧಿಯಲ್ಲಿ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿರುವ ಆಶಾ ತಿಮ್ಮಪ್ಪ ಈ ಬಾರಿ ಬೆಳ್ಳಾರೆಯಿಂದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಮೂರನೇ ಬಾರಿಗೆ ಆಯ್ಕೆಯಾಗಿ ಹಿರಿಯ ಸದಸ್ಯೆಯಾಗಿರುವ ಇವರು ಸಹಜವಾಗಿಯೇ ಅಧ್ಯಕ್ಷಗಾದಿಗೆ ಅರ್ಹರು. ಈ ಹಿಂದೆ ಸಾಮಾನ್ಯ ಸ್ಥಾನ ಬಂದಿದ್ದಾಗ ಇವರು ಪೈಪೋಟಿ ನಡೆಸುತ್ತಿದ್ದರೂ ಅಧ್ಯಕ್ಷಗಾದಿ ಸಿಕ್ಕಿದ್ದು ಶೈಲಜಾ ಭಟ್ಗೆ. ಆಗ ಅಸಮಾಧಾನ ಹೊಂದಿದ್ದರೂ, ಪಕ್ಷ ನಿಲವಿಗೆ ಬದ್ಧರಾಗಿ ಸುಮ್ಮನಿದ್ದರು. ಈಗ ಸಾಮಾನ್ಯ ಮಹಿಳೆ ಮೀಸಲು ಬಂದಿರುವುದರಿಂದ ಇವರಿಗೆ ಬಯಸದೇ ಬಂದ ಭಾಗ್ಯ. ಆದರೆ ಮೂಡುಬಿದಿರೆ ಕ್ಷೇತ್ರದಿಂದ ಆಯ್ಕೆಯಾದ ಸುನಿತಾ ಸುಚರಿತ ಶೆಟ್ಟಿ ಇವರಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ. ಯಾಕೆಂದರೆ ಜಿಲ್ಲೆಯ ಬೆಳ್ತಂಗಡಿ, ವಿಟ್ಲ ಕ್ಷೇತ್ರಗಳಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ಮೂಡುಬಿದಿರೆ ಕಡೆಗೆ ಪಕ್ಷ ಮುಖಂಡರು ದೃಷ್ಟಿ ಹರಿಸಿದರೂ ಅಚ್ಚರಿ ಇಲ್ಲ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಸಹೋದರಿ ಈಶ್ವರಮಂಗಲದ ಸಾವಿತ್ರಿ ಶಿವರಾಮ್ ಹೆಸರು ಪ್ರಸ್ತಾಪವಾದರೆ ಅಚ್ಚರಿಯಿಲ್ಲ.
ಮಾಜಿ ಅಧ್ಯಕ್ಷೆ ಶೈಲಜಾ ಭಟ್, ಮಾಜಿ ಉಪಾಧ್ಯಕ್ಷೆ ಧನಲಕ್ಷ್ಮಿಗೆ ಮತ್ತೆ ಅವಕಾಶ ಸಿಗದು. ಬೆಳ್ತಂಗಡಿಯ ದೇವಕಿ ಸ್ನಾತಕೋತ್ತರ ಪದವೀಧರೆ. ಪುದುವಿನ ಜಯಶ್ರೀ, ಕಿನ್ನಿಗೋಳಿಯ ಆಶಾ ಸುವರ್ಣ, ಚಂದ್ರಕಲಾ, ಗಿರಿಜಾ ಬಂಟ್ವಾಳ, ನಳಿನಿ ಸಂಗಬೆಟ್ಟು, ಪಾಣಾಜೆಯ ಮೀನಾಕ್ಷಿ ಮಂಜುನಾಥ ಕೂಡ ಅರ್ಹರು.
ಉಪಾಧ್ಯಕ್ಷ ಸ್ಥಾನಕ್ಕೆ ಕೋಟೆಕಾರಿನ ಸತೀಶ್ ಕುಂಪಲ ಪ್ರಬಲ ಆಕಾಂಕ್ಷಿ. ಕೊಳ್ನಾಡಿನ ಸಂತೋಷ್ ಕುಮಾರ್ ಬೋಳಿಯಾರ್, ಈಶ್ವರ ಕಟೀಲ್, ಸ್ಥಾಯೀ ಸಮಿತಿ ಅಧ್ಯಕ್ಷರಾಗಿರುವ ಪಕೀರ, ಚೆನ್ನಪ್ಪ ಕೋಟ್ಯಾನ್, ನವೀನ್ ಕುಮಾರ್ ಮೇನಾಲ ಹೆಸರು ಕೇಳಿಬರುತ್ತಿದೆ.
ಹಾಲಿ ಅಧ್ಯಕ್ಷ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ರಿತೇಶ್ ಶೆಟ್ಟಿ ಅವಧಿ ಜೂ.7ಕ್ಕೆ ಮುಕ್ತಾಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

