ಪಂಕ್ತಿ ಭೇದ ವಿವಾದ ಪರಿಹರಿಸಿ: ಬಂಟರ ಸಂಘ ಒತ್ತಾಯ
ಮಂಗಳೂರು: ಕಾಣಿಯೂರು ಮಠಾಧೀಶರ ಮೇಲೆ ಬಂಟ ಸಮುದಾಯಕ್ಕೆ ಗೌರವವಿದೆ. ಪಂಕ್ತಿಬೇಧ ವಿಚಾರ ಸೂಕ್ಷ್ಮವಾಗಿದ್ದು, ಸಂಘರ್ಷದ ಬದಲು ಸಮಾಲೋಚನೆ ಮಾಡಿ ಪರಿಹಾರ ಕಂಡು ಹುಡುಕುವ ಅಗತ್ಯವಿದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಸ್ಪಷ್ಟಪಡಿಸಿದ್ದಾರೆ. ಉಡುಪಿ ಕೃಷ್ಣಮಠದಲ್ಲಿ ಇತ್ತೀಚೆಗೆ ಊಟಕ್ಕೆ ಕುಳಿತ ಬಂಟ ಮಹಿಳೆಯನ್ನು ಎಬ್ಬಿಸಿದ ವಿಷಯದಲ್ಲಿ ಜಾತಿಯೊಂದೇ ಪ್ರಮುಖವಲ್ಲ. ಮಾನವೀಯತೆ ಹಾಗೂ ಆತ್ಮಗೌರವದ ವಿಷಯವೂ ಒಳಗೊಂಡಿದೆ. ಧರ್ಮವನ್ನು ರಕ್ಷಿಸಬೇಕಾದ ಕ್ಷೇತ್ರದಲ್ಲಿ ಇಂಥ ಘಟನೆ ನಡೆಯಲೇಬಾರದು. ಜಾತಿಯ ಹೆಸರಿನಲ್ಲಿ ಯಾರಿಗೂ ಅವಮಾನ ಮಾಡುವುದು ಸರಿಯಲ್ಲ ಎಂದರು.
ಕಾಣಿಯೂರು ಮಠಾಧೀಶರ ಮೇಲೆ ಗೌರವವಿದ್ದು, ಮುಂದೆ ಯಾವುದೇ ಮಠದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಇಂಥ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಇದ್ದು, ಸಮಾಜದಲ್ಲಿ ಬದಲಾವಣೆಯ ಹರಿಕಾರರಾಗಬೇಕು ಎಂದು ಅಜಿತ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
23ರಿಂದ ಕಥಾ ರಚನೆ ಕಮ್ಮಟಕ್ಕೆ ಆಹ್ವಾನ
ಉಡುಪಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೇ 23ರಿಂದ 25ರವರೆಗೆ ಕಥಾ ರಚನೆ ಕಮ್ಮಟ ಕೋಟದ ಕಾರಂತ ಥೀಂ ಪಾರ್ಕ್ನಲ್ಲಿ ನಡೆಯಲಿದೆ. ಕಮ್ಮಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸೇರಿದಂತೆ ಯುವ ಬರಹಗಾರರು ತಮ್ಮ ಹೆಸರನ್ನು ಮೇ 18ರೊಳಗೆ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾಧ್ಯಕ್ಷರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸುಜ್ಞಾನ ಮಣೂರು, ಕೋಟ, ಉಡುಪಿ - 576220 ಇಲ್ಲಿಗೆ ಕಳುಹಿಸಿ ನೋಂದಾಯಿಸಬೇಕು. ಸಂಖ್ಯೆ ಸೀಮಿತವಾಗಿರುವುದರಿಂದ ಮೊದಲು ಬಂದವರಿಗೆ ಆದ್ಯತೆ. ಹೆಚ್ಚಿನ ವಿವರಗಳಿಗೆ ದೂ. 9242039645 ಅಥವಾ 9600006090 ಸಂಪರ್ಕಿಸಬಹುದು ಎಂದು ಉಡುಪಿ ಜಿಲ್ಲಾ ಕಸಾಪ ಪ್ರಕಟಣೆ ತಿಳಿಸಲಾಗಿದೆ.
ಮಾಡಿನಿಂದ ಬಿದ್ದು ಕಾರ್ಮಿಕ ಸಾವು
ಪುತ್ತೂರು: ಮನೆಯ ಛಾವಣಿ ಶೀಟು ದುರಸ್ತಿ ಮಾಡುತ್ತಿದ್ದ ವೇಳೆ ಛಾವಣಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅರಿಯಡ್ಕ ಗ್ರಾಮದ ಅಮೈ ನಿವಾಸಿ ಕೃಷ್ಣ ರೈ ಪುತ್ರ ಮನೀಶ್ ರೈ (21) ಮೃತರು. ಪುತ್ತೂರಿನ ಖಾಸಗಿ ವರ್ಕ್ ಶಾಪ್ ಒಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಮೇ 3 ರಂದು ದರ್ಬೆ ಬಳಿ ಮನೆ ಮಾಡಿನ ಶೀಟು ದುರಸ್ತಿ ಪಡಿಸುತ್ತಿದ್ದ ವೇಳೆ ಕೆಳಗೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಗರ ಪೊಲೀಸರಿಗೆ ದೂರು ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

