ಮಿಡಿದ ಅಂತಃಕರಣ ಧರ್ಮ ಮೀರಿದ ಸಹಾಯ
ವಿಶೇಷ ವರದಿ
ಉಪ್ಪಿನಂಗಡಿ: ಮಾನವೀಯ ಅಂತಃಕರಣ ಎಲ್ಲರಲ್ಲೂ ಇದ್ದೇ ಇದೆ. ಜಾತಿ, ಮತಗಳ ಸಂಕುಚಿತ ಚಿಂತನೆ ಎಷ್ಟೇ ಇದ್ದರೂ ವ್ಯಕ್ತಿಯೊಬ್ಬನಿಗೆ ಸಂಕಷ್ಟ ಎದುರಾದರೆ ಎಲ್ಲರ ಮನಸ್ಸು ಸಂಕುಚಿತತೆಯನ್ನು ಮೀರಿ ವರ್ತಿಸುತ್ತದೆ ಎನ್ನುವುದಕ್ಕೆ ಶನಿವಾರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದ ಅಗ್ನಿ ಅನಾಹುತ ಸಾಕ್ಷಿಯಾಯಿತು.
ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣ ಪರಿಸರದ ಸೂರಪ್ಪ ಕಂಪೌಂಡ್ನಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಎಲ್ಲೆಡೆಯಿಂದ ತರುಣ ಸಮೂಹವೇ ರಕ್ಷಣೆಗಾಗಿ ಧಾವಿಸಿಬಂತು. ಬಂದವರೇ ಸುತ್ತಮುತ್ತಲಿನ ಎಲ್ಲ ಜಲ ಮೂಲಗಳನ್ನು ಪತ್ತೆ ಹಚ್ಚಿ, ಕಾರ್ಯ ಸಾಧ್ಯವಾದ ಶೈಲಿಯಿಂದ ಅಗ್ನಿಗಾಹುತಿಯಾಗಿರುವ ಕಟ್ಟಡಕ್ಕೆ ನೀರು ಹಾಯಿಸುವ ಯತ್ನಗಳನ್ನು ಮಾಡುತ್ತಲೇ ಇದ್ದರು. ನಿಯಂತ್ರಣಕ್ಕೆ ಬಾರದಿದ್ದಾಗ ಬೆಂಕಿ ವ್ಯಾಪಿಸಿದ್ದ ಕಟ್ಟಡದ ಛಾವಣಿ ಏರಿ ಹೆಂಚು ಹುಡಿ ಮಾಡಿಯೂ ನೀರು ಹಾಯಿಸಲು ಮುಂದಾಗಿದ್ದರು.
ಬಜರಂಗದಳ, ಕೆಎಫ್ಡಿ ಕಾರ್ಯಕರ್ತರು: ಇಲ್ಲಿ ಕಾರ್ಯೋನ್ಮುಖರಾಗಿದ್ದ ಯುವಕರಲ್ಲಿ ಬಹುತೇಕರು ಬಜರಂಗದಳ, ಕೆಎಫ್ಡಿ ಸಂಘಟನೆಗಳ ಕಾರ್ಯಕರ್ತರಾಗಿದ್ದವರು. ವೇದಿಕೆಗಳಲ್ಲಿ ಪರಸ್ಪರ ಬೆಂಕಿಯುಗುಳುವ ಭಾಷಣ ಮಾಡುವ ಪ್ರಸಂಗಗಳನ್ನೇ ಕಾಣುತ್ತಿದ್ದರೆ, ಇಲ್ಲಿ ಉಭಯ ಸಂಘಟನೆಗಳ ಕಾರ್ಯಕರ್ತರು ಬೆಂಕಿ ನಂದಿಸಲು ಪರಸ್ಪರ ಒಗ್ಗೂಡಿ ಶ್ರಮಿಸುತ್ತಿದ್ದುದ್ದು ಕಂಡುಬಂತು. ನೀರು ಹಸ್ತಾಂತರಿಸುವುದು, ಬೆಂಕಿ ನಂದಿಸುವುದು, ಅಪಾಯವನ್ನು ಲೆಕ್ಕಿಸದೆ ಕಟ್ಟಡಕ್ಕೆ ಮುನ್ನುಗ್ಗಿರುವುದು ಎಲ್ಲವೂ ಉಭಯ ಕಾರ್ಯಕರ್ತರಿಂದ ಒಗ್ಗೂಡಿ ನಡೆದ ವಿದ್ಯಮಾನಗಳಾಗಿದ್ದವು.
ನಾಯಕರೆನಿಸಿದವರು ಎಂತಹದ್ದೇ ಭಾವನೆ ಮೂಡಿಸಲಿ, ಅದೆಷ್ಟೇ ದ್ವೇಷ ಭಾವ ಮೂಡಿಸಲಿ, ಮನುಷ್ಯನ ಅಂತರಂಗದಲ್ಲಿ ನೆಲೆ ನಿಂತ ಮಾನವೀಯ ಮಿಡಿತ ಯಾವುದೋ ಮನುಷ್ಯನ ನೋವಿನಲ್ಲಿ ಪ್ರತಿಸ್ಪಂದಿಸುತ್ತದೆ ಎನ್ನುವುದಕ್ಕೆ ಶನಿವಾರ ರಾತ್ರಿಯ ಉಪ್ಪಿನಂಗಡಿ ಘಟನೆಯೇ ಸಾಕ್ಷಿಯಾಗಿದೆ.
ಪಕ್ಷ, ಧರ್ಮ ಮೀರಿದ ಅಂತಃಕರಣ: ಶನಿವಾರ ರಾತ್ರಿ ಬಜರಂಗದಳ ಆಶ್ರಯದಲ್ಲಿ ಉಪ್ಪಿನಂಗಡಿಯಲ್ಲಿ ಶನಿಪೂಜೆ ಕಾರ್ಯಕ್ರಮ ನಡೆಯುತ್ತಿದ್ದರೂ, ಅಗ್ನಿ ಅನಾಹುತದ ಸುದ್ದಿ ತಿಳಿಯುತ್ತಿದ್ದಂತೆ ಬಹಳಷ್ಟು ಕಾರ್ಯಕರ್ತರು ದುರಂತ ಸ್ಥಳಕ್ಕೆ ಧಾವಿಸಿ ಬಂದಿದ್ದರು. ಅದೇ ರೀತಿ, ಕೆಎಫ್ಡಿ ಮತ್ತಿತರ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರೂ ಧಾವಿಸಿ ಬಂದು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ್ದರು. ಅಪಾಯಕ್ಕೀಡಾದ ಮನೆ ಕಾಂಗ್ರೆಸ್ ಬೆಂಬಲಿತರ ಮನೆ ಎಂದು ಬಜರಂಗದಳ ಕಾರ್ಯಕರ್ತರು ಮೌನವಾಗಿರಲಿಲ್ಲ, ಅದು ಹಿಂದೂ ಮನೆ ಎಂದು ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರೂ ತಟಸ್ಥರಾಗಿರಲಿಲ್ಲ. ಎಲ್ಲರಲ್ಲೂ ನಮ್ಮವನೆಂಬ ಭಾವನೆಯ ನೆಲೆಯಲ್ಲಿ ಯುದ್ಧೋಪಾದಿಯ ಪ್ರಯತ್ನಗಳೇ ಎದ್ದು ಕಾಣಿಸಿಸುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

