ನಳಿನ್ ವಿರುದ್ಧ ಬೆದರಿಕೆ ದೂರು
ಮಂಗಳೂರು: ರಾಜಕೀಯ ತೇಜೋವಧೆಗೆ ಪಕ್ಷೇತರ ಅಭ್ಯರ್ಥಿ ಮತ್ತು ವಕೀಲರು ಷಡ್ಯಂತ್ರ ನಡೆಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಇದೀಗ ಕಟೀಲ್ ವಿರುದ್ಧವೇ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.
ಸಿಟಿ ಸೆಂಟರ್ ಸಮೀಪ ಬಂದ ಇಬ್ಬರು, ಕಟೀಲ್ ವಿರುದ್ಧ ಮಾತನಾಡದಂತೆ ಬೆದರಿಕೆ ಹಾಕಿದ್ದಾರೆ ಎಂದು ಮುಂಬಯಿ ಉದ್ಯಮಿ ಸತೀಶ್ ಶೆಟ್ಟಿ ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಪತ್ನಿಗೆ ಅನೇಕ ಮಂದಿ ಜತೆ ಸಂಪರ್ಕ ಇದೆ. ನಳಿನ್ ಜತೆ ದೂರವಾಣಿಯಲ್ಲಿ ಮಾತನಾಡುತ್ತಾಳೆ, ಅವರಿಗೆ ಸಂಬಂಧ ಕೂಡಾ ಇದೆ ಎಂದು ಸತೀಶ್ ಶೆಟ್ಟಿ ಹೇಳುತ್ತಾರೆ.
ಆದರೆ ಈ ಕುರಿತು ಸತೀಶ್ ಶೆಟ್ಟಿ ಪತ್ನಿ, ಪತಿ ವಿರುದ್ಧವೇ ದೂರಿನ ಸುರಿಮಳೆ ಗೈಯುತ್ತಾರೆ. ಮದುವೆಯಾದ ಬಳಿಕ ವರದಕ್ಷಿಣೆಗೆ ಪೀಡಿಸಿದರು. ನನಗೆ ಬದುಕಲು ಬಿಡುತ್ತಿಲ್ಲ, ಗಂಡನಿಗೆ ಮಕ್ಕಳನ್ನು ಸಾಕುವ ಯೋಗ್ಯತೆ ಇಲ್ಲ ಎನ್ನುವುದು ಪತ್ನಿ ಆರೋಪ. ಬಿಜೆಪಿ ಒಳಗಿನವರೇ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಇಬ್ಬರು ಪ್ರಮುಖರನ್ನು ಉಚ್ಚಾಟಿಸಲಾಗಿತ್ತು. ಉಚ್ಚಾಟನೆ ಬಳಿಕ ಸತೀಶ್ ಶೆಟ್ಟಿ ಬಂದರು ಠಾಣೆಯಲ್ಲಿ ದೂರು ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಜಕೀಯ ದುರುದ್ದೇಶ: ಬಿಜೆಪಿ ಆರೋಪ
ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೇಳಿ ಬಂದ ಆರೋಪ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಜಿಲ್ಲಾ ಬಿಜೆಪಿ ಹೇಳಿದೆ. ರಾಜಕೀಯ ಸ್ವಾರ್ಥ ಸಾಧಿಸಲು ವಿಫಲರಾದ ಸ್ಥಾಪಿತ ಶಕ್ತಿಗಳು ಇಂಥ ಪ್ರಯತ್ನ ನಡೆಸಿದ್ದು, ಚುನಾವಣೆ ಪೂರ್ವದಲ್ಲಿಯೇ ಚಿತಾವಣೆ ಆರಂಭವಾಗಿತ್ತು. ಆಧಾರ ರಹಿತವಾಗಿ ವ್ಯಕ್ತಿಯ ಚಾರಿತ್ರ್ಯ ಹನನ ಮಾಡುವ ಬ್ಲ್ಯಾಕ್ಮೇಲ್ ತಂತ್ರವನ್ನು ಪ್ರಬುದ್ಧ ಜನ ಅರಿತಿದ್ದಾರೆ. ಇಂಥ ಕೃತ್ಯಗಳನ್ನು ಪಕ್ಷ ಸಂಘಟಿತವಾಗಿ ಖಂಡಿಸಿ ವಿರೋಧಿಸುತ್ತದೆ. ಸಂಸದರ ಮಾನಹಾನಿ ಯತ್ನ ನಡೆಯುತ್ತಿದೆ ಎಂದು ಮೊದಲೇ ಅರಿತು ಪೊಲೀಸ್ ದೂರು ನೀಡಿದ್ದು, ಇದರಿಂದ ಭೀತರಾದ ವ್ಯಕ್ತಿಗಳು ಒತ್ತಡ ತಂತ್ರವಾಗಿ ಸಂಸದರ ಮೇಲೆ ಪ್ರಕರಣ ದಾಖಲಿಸುವ ಕಾರ್ಯ ಮಾಡಿದ್ದಾರೆ. ಇದರ ವಿರುದ್ಧ ಕಾನೂನು ಮೂಲಕವೇ ಹೋರಾಟ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

