ಬಿ.ಸಿ.ರೋಡ್ ಮೇಲ್ಸೇತುವೆ ದ್ವಿಮುಖ ಸಂಚಾರ ನಿರ್ಧಾರ
ಬಂಟ್ವಾಳ: ಪ್ರಯಾಣಿಕರನ್ನು ಕಾಡುತ್ತಿರುವ ಬಿ.ಸಿ.ರೋಡಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಂಟಿಯಾಗಿ ಸೂತ್ರ ಸಿದ್ಧಪಡಿಸಿದ್ದಾರೆ.
ಇದರಂತೆ ಮುಂದಿನ 15 ದಿನಗಳೊಳಗಾಗಿ ಮೇಲ್ಸೇತುವೆ ದ್ವಿಮುಖ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿದೆ.
ಸಮಸ್ಯೆ ಪರಿಶೀಲನೆ: ಶುಕ್ರವಾರ ಬೆಳಗ್ಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡಿಗೆ ಭೇಟಿ ನೀಡಿ ದ ಜಿಲ್ಲಾಧಿಕಾರಿ ಇಬ್ರಾಹಿಂ ಹಾಗೂ ಎಸ್.ಪಿ. ಡಾ.ಶರಣಪ್ಪ ರವರು, ಇಲ್ಲಿ ವಾಹನ ದಟ್ಟಣೆಗೆ ಕಾರಣವಾಗುವ ಅಂಶಗಳನ್ನು ಪರಿಶೀಲಿಸಿದರು. ಬಂಟ್ವಾಳ ಡಿವೈಎಸ್ಪಿ ರಶ್ಮಿ ಪರಡ್ಡಿ, ಪ್ರಭಾರ ವೃತ್ತನಿರೀಕ್ಷಕ ಮಂಜಯ್ಯ, ತಹಸೀಲ್ದಾರ್ ಮಲ್ಲೇಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಗಣೇಶ್, ಗ್ರಾಮಾಂತರ ಠಾಣಾಧಿಕಾರಿ ನಾಗರಾಜ್ ಮೊದಲಾದವರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ ಪ್ರಯಾಣಿಕರಿಗೆ ಕಾಡುವ ವಾಹನ ದಟ್ಟಣೆ ಪರಿಹಾರದ ಬಗ್ಗೆ ಚರ್ಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀರಾಮ ಮಿಶ್ರಾ ಇದ್ದು, ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅಗತ್ಯವಿರುವ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಚರಂಡಿ ಸಮಸ್ಯೆ ಪ್ರಸ್ತಾಪ: ಬಿ.ಸಿ.ರೋಡಿನಲ್ಲಿ ಮೇಲ್ಸೇತುವೆ ನಿರ್ಮಾಣದ ದಿನದಿಂದ ಆಗಿರುವ ಚರಂಡಿ ಅವ್ಯವಸ್ಥೆಯ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಗಣೇಶ್ ಜಿಲ್ಲಾಧಿಕಾರಿ ಮುಂದೆ ಪ್ರಸ್ತಾಪಿಸಿದರು. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಲ್ಲಿ ಜಿಲ್ಲಾಧಿಕಾರಿ ವಿಚಾರಿಸಿದಾಗ, ಮುಂದಿನ 15 ದಿನದ ಒಳಗಾಗಿ ಚರಂಡಿ ದುರಸ್ತಿಗೊಳಿಸುವುದು, ಚರಂಡಿ ಸ್ಲ್ಯಾಬ್ಗಳನ್ನು ಸರಿಯಾಗಿ ಜೋಡಿಸುವುದು ಹಾಗೂ ಸರ್ವಿಸ್ ರಸ್ತೆಗಳ ಇಕ್ಕೆಲಗಳಲ್ಲಿ ನೀರು ಹರಿದು ಹೋಗಲು ಚರಂಡಿ ನಿರ್ಮಿಸುವುದಾಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಬಿ.ಸಿ.ರೋಡು ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ರೇಲ್ವೆ ಮೇಲ್ಸೇತುವೆ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಬಿ.ಸಿ.ರೋಡಿನ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಸಿಬ್ಬಂದಿ ನಿಯೋಜನೆ: ಜಿಲ್ಲಾ ಪೊಲೀಸ್ ವರಿಷ್ಠ ಡಾ.ಶರಣಪ್ಪ ಮಾತನಾಡಿ, ಪ್ರಾಯೋಗಿಕವಾಗಿ ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು, ಮೇಲ್ಸೇತುವೆಯ ಕೆಳಭಾಗದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ವಾಹನದಟ್ಟಣೆ ನಿವಾರಿಸಲಾಗುವುದು ಎಂದರು.
ಫ್ಲೈ ಓವರ್ ಪರಿಶೀಲನೆ: ಕಿರಿದಾದ ರಸ್ತೆಗೆ ಆಕ್ಷೇಪ
ಮಂಗಳೂರು: ಬಿಕರ್ನಕಟ್ಟೆ ಕೈಕಂಬ ಮತ್ತು ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಫ್ಲೈ ಓವರ್ ಕಾಮಗಾರಿಯನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದರು. ಮೂಡುಬಿದರೆ ಕಡೆಗೆ ತೆರಳುವ ಸರ್ವಿಸ್ ರಸ್ತೆ ಅತ್ಯಂತ ಕಿರಿದಾಗಿರುವುದು ಕಂಡು ಬಂತು. ಈ ಕುರಿತು ಅಧಿಕಾರಿಗಳಿಂದ ವಿವರಣೆ ಕೇಳಿದರು. ಸರ್ವಿಸ್ ರಸ್ತೆ ಅಗಲೀಕರಣ ಅಥವಾ ಫ್ಲೈ ಓವರ್ ಮೇಲ್ಭಾಗದಿಂದಲೇ ಮೂಡುಬಿದರೆ ರಸ್ತೆಗೆ ತಿರುವು ನೀಡಲು ಮೇಲ್ಸೇತುವೆ ನಿರ್ಮಿಸುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು. ಬಿ.ಸಿ. ರೋಡ್ಗೆ ಭೇಟಿ ನೀಡಿದ ಡಿಸಿ, ಫ್ಲೈ ಓವರ್ನಲ್ಲಿ ಎರಡೂ ಕಡೆಯಿಂದ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಕುರಿತು ಶೀಘ್ರವಾಗಿ ಪರಿಶೀಲಿಸುವಂತೆ ಸೂಚಿಸಿದರು. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ನಿರ್ದೇಶಕ ಶ್ರೀರಾಂ ಮಿಶ್ರಾ, ಎಸ್ಪಿ ಶರಣಪ್ಪ, ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯ ಎಂಜಿನಿಯರ್ ಮಹಮ್ಮದ್ ಹನೀಫ್ ಇತರರು ಇದ್ದರು.
ಸೂತ್ರದಲ್ಲಿ ಏನಿದೆ...?
ಬಿ.ಸಿ.ರೋಡು ಬಸ್ ನಿಲ್ದಾಣಕ್ಕೆ ಬರುವ ವಾಹನಗಳು ಮೇಲ್ಸೇತುವೆ ಕೆಳಗಿನಿಂದಲೇ ಸಂಚರಿಸಬೇಕು.
ಬಸ್ ನಿಲ್ದಾಣಕ್ಕೆ ಬಾರದೆ ನೇರವಾಗಿ ಮಂಗಳೂರು ಅಥವಾ ಬೆಂಗಳೂರು, ಪುತ್ತೂರು ಧರ್ಮಸ್ಥಳ ಕಡೆಗೆ ತೆರಳುವ ವಾಹನಗಳು ಮೇಲ್ಸೇತುವೆ ಮೇಲಿಂದಲೇ ಸಂಚರಿಸಬೇಕು.
ಕೈಕಂಬ ಅಥವಾ ಬಿ.ಸಿ.ರೋಡು ಸನಿಹದಲ್ಲಿ ರಸ್ತೆ ವಿಭಾಜಕ ತೆರವುಗೊಳಿಸಿ ಮಂಗಳೂರು ಕಡೆಯಿಂದ ಬರುವ ವಾಹನಗಳು ಮೇಲ್ಸೇತುವೆ ಮೇಲೆ ಸಂಚರಿಸಲು ಅವಕಾಶ ನೀಡಬೇಕು.
ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರ ನೋಟಿಫಿಕೇಶನ್ ಹೊರಡಿಸಬೇಕು.
ಈ ಸೂತ್ರಗಳನ್ನು ಪ್ರಾಯೋಗಿಕವಾಗಿ ಮುಂದಿನ 15 ದಿನಗಳೊಳಗಾಗಿ ಜಾರಿಗೊಳಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

