ಧರ್ಮಪುರ ಬಂದ್ ಯಶಸ್ವಿ
ಧರ್ಮಪುರ: ಸರ್ಕಾರ ತಕ್ಷಣ ಧರ್ಮಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ವಂದೇ ಮಾತರಂ ಜಾಗೃತಿ ವೇದಿಕೆ, ಮಾರುತಿ ಗೆಳೆಯರ ಬಳಗ, ಡಾಲರ್ ಸರ್ಕಲ್, ವರ್ತಕರ ಸಂಘ ಹಾಗೂ ವಿವಿಧ ಮಹಿಳಾ ಸ್ವ- ಸಹಾಯ ಸಂಘಗಳು ಗುರುವಾರ ಕರೆ ನೀಡಿದ್ದ ಧರ್ಮಪುರ ಬಂದ್ ಯಶಸ್ವಿಯಾಯಿತು.
ಪಟ್ಟಣದ ವರ್ತಕರು, ಹೊಟೇಲ್ ಮಾಲೀಕರು, ಸಣ್ಣಪುಟ್ಟ ಚಿಲ್ಲರೆ ತರಕಾರಿ ಅಂಗಡಿ ಬಾಗಿಲು ತೆರೆಯದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇವರಿಗೆ ವಂದೇ ಮಾತರಂ ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಶ್ವನಾಥ್ ನೇತೃತ್ವದಲ್ಲಿ ಶಾಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸಾಥ್ ನೀಡಿದರು.
ಧರ್ಮಪುರಕ್ಕೆ ಬರುವ ಯಾವುದೇ ವಾಹನಗಳನ್ನು ಸುತ್ತ ಮುತ್ತಲಿನ ಗ್ರಾಮದವರು ತಡೆದು ಆಯಾಯಾ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ್ದು, ವಿಶೇಷವಾಗಿತ್ತು. ಪ್ರತಿಭಟನಕರರು ಬೆಳಗ್ಗಿನಿಂದಲೇ ಪ್ರತಿಭಟನೆ ಪ್ರಾರಂಭಿಸಿ ಟೈರ್ಗೆ ಬೆಂಕಿ ಹಚ್ಚಿ ಧರ್ಮಪುರದ ಪ್ರಧಾನ ರಸ್ತೆಗಳಲ್ಲಿ ಸಾರ್ಕರದ ವಿರುದ್ಧ ಘೋಷಣೆ ಕೂಗಿದರು.
ಆತ್ಮಹತ್ಯೆಗೆ ಯತ್ನ: ಈ ಮಧ್ಯೆ ಪ್ರತಿಭಟನೆ ಕಣಜನಹಳ್ಳಿ ವೃತ್ತಕ್ಕೆ ಆಗಮಿಸಿದಾಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೆಹಬೂಬ್ ಸುಬಾನ್ ಎಂಬ ಯುವಕ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದಾಗ, ಅದನ್ನು ತಡೆಯಲು ಪ್ರತಿಭಟನಾಕಾರರು ಹಾಗೂ ಪೋಲಿಸರು ಹರಸಾಹಸ ಪಡಬೇಕಾಗಿತು.
ನಂತರ ಪ್ರತಿಭಟನಾಕಾರರು ಡಾಲರ್ ಸರ್ಕಲ್ ಬಳಿ ಬಂದ ತಕ್ಷಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೇತೂರು ರಂಗಸ್ವಾಮಿ ಎಂಬ ಯುವಕ ತಕ್ಷಣವೇ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದಾಗ ತಕ್ಷಣ ಅಲ್ಲಿಯೇ ಇದ್ದ ಪೋಲಿಸ್ ಸಿಬ್ಬಂದಿ ಅಜ್ಜಪ್ಪ ಹಾಗೂ ವಂದೇ ಮಾತರಂ ಸಂಘಟನೆ ಕಾರ್ಯಕರ್ತ ಅಂಬರೀಷ್ ಆತನ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ಯಶೋಧರ್ ಮಾತನಾಡಿ, ಶಾಸಕ ಡಿ. ಸುಧಾಕರ್ ನಿಜವಾಗಿಯೂ ಈ ಕ್ಷೇತ್ರದ ಜನತೆಯ ಮತದಾರರ ಋಣ ತೀರಿಸಬೇಕೆಂದಿದ್ದರೆ ಕೂಡಲೇ ಸರ್ಕಾರದ ಜೊತೆ ಚರ್ಚಿಸಿ ಧರ್ಮಪುರವನ್ನು ತಾಲೂಕಾಗಿ ಘೋಷಿಸುವಂತೆ ಮಾಡಬೇಕು ಎಂದರು.
ಶಾಸಕರೇ ಕಾರಣ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಮಾತನಾಡಿ, ನಮಗೇ ಕುಡಿಯಲು ನೀರಿಲ್ಲ. ಅಂತಹದ್ದರಲ್ಲಿ ಶಾಸಕರು ಚಳ್ಳಕೆರೆಗೆ ನೀರು ತೆಗೆದುಕೊಂಡು ಹೋಗಿದ್ದಾರೆ. ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡುವ ಸರ್ಕಾರದ ನಿರ್ಧಾರಕ್ಕೆ ಹಾಗೂ ಅದರ ಪರಿಣಾಮ ನೂರಾರು ಬಡ ಕುಟುಂಬಗಳು ಬೀದಿಗೆ ಬೀಳುತ್ತಿರುವುದಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಎಂ. ಶಿವಣ್ಣ ಮಾತನಾಡಿ, ಎಂ.ಬಿ. ಪ್ರಕಾಶ್ ಆಯೋಗ ಧರ್ಮಪುರಕ್ಕೆ ಬರದೇ ಎಲ್ಲೋ ಪ್ರವಾಸಿ ಮಂದಿರದಲ್ಲಿ ಅದರಲ್ಲೂ ಎ.ಸಿ ಇರುವ ಐಶಾರಾಮಿ ಕೋಣೆಯಲ್ಲಿ ಕುಳಿತು ಇಂತಹ ಅವೈಜ್ಞಾನಿಕ ವರದಿ ತಯಾರಿಸಿದ್ದಾರೆ. ಈ ವರದಿಯನ್ನು ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿ ಕೂಡಲೇ ಧರ್ಮಪುರವನ್ನು ತಾಲೂಕಾಗಿ ಘೋಷಿಸಬೇಕು. ಇಲ್ಲದಿದ್ದರೆ ಚಳವಳಿಯನ್ನು ಮುಂದಿನ ದಿನಗಳಲ್ಲಿ ತೀವ್ರಗೊಳಿಸುತ್ತೇವೆ ಎಂದರು.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ರಘುನಾಥ್ ಮಾತನಾಡಿ, ಧರ್ಮಪುರ 10 ಗ್ರಾಪಂನಿದ ಕೂಡಿದ 56 ರೆವಿನ್ಯೂ ಗ್ರಾಮಗಳಿಂದ ಕೂಡಿದ್ದು, ಅತೀ ಹಿಂದುಳಿದ ಹಾಗೂ ಅಭಿವೃದ್ಧಿ ವಂಚಿತ ಹೋಬಳಿಯಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಎಂ.ಬಿ. ಪ್ರಕಾಶ್ ಆಯೋಗದ ವರದಿ ತಿರಸ್ಕರಿಸಿ ಧರ್ಮಪುರ ತಾಲೂಕಾಗಿ ಘೋಷಿಸಬೇಕು ಎಂಬ ಮನವಿಯನ್ನು ಪ್ರತಿಭಟನಾಕಾರರ ಪರವಾಗಿ ಸ್ಥಳಕ್ಕಾಗಮಿಸಿದ ತಹಸೀಲ್ದಾರರಿಗೆ ಸಲ್ಲಿಸಿದರು.
ಸರ್ಕಾರಕ್ಕೆ ವರದಿ: ಮನವಿ ಸ್ವೀಕರಿಸಿ ನಂತರ ಮಾತನಾಡಿ, 50 ವಷಂದಿಂದ ಈ ಭಾಗದ ಜನರ ಕನಸಿದು. ಇದರ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.
ಪ್ರತಿಭಟಯಲ್ಲಿ ಗ್ರಾಪಂ ಅಧ್ಯಕ್ಷ ಜಿ. ವೆಂಕಟರಾಮು, ಈರಣ್ಣ, ವಂದೇ ಮಾತರಂ ಸಂಘಟನೆ ಗೌರಾವಾಧ್ಯಕ್ಷ ಮಹೇಶ್, ರಾಘು, ಚೇತನ್ಸ್ವಾಮಿ, ಅರ್ಜುನ್, ಮಹದೇವಪ್ಪ, ರಾಮು, ರತ್ನಮ್ಮ, ಪ್ರಸಾದ್, ಸೋಮಣ್ಣ, ತಿಪ್ಪಣ್ಣ, ಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

