ಧಾರವಾಡ

ಕ್ರಮಕ್ಕೆ ಪೊಲೀಸ್ ವಿಳಂಬ ಕಾಂಗ್ರೆಸ್ ಆರೋಪ

Published On :

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಮನೆ ಎದುರು ವಿಜಯೋತ್ಸವ ಆಚರಿಸಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಕ್ಬೂಲ್ ಕುಸನೂರ ಆರೋಪಿಸಿದರು.
ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾ. 11ರ ರಾತ್ರಿ ನಮ್ಮ ಮನೆ ಎದುರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುತ್ತಿದ್ದ ವಾರ್ಡ್ ನಂ. 34ರಲ್ಲಿ ಜಯ ಸಾಧಿಸಿದ ಲಕ್ಷ್ಮಿ ಉಪ್ಪಾರ ಬೆಂಬಲಿಗರು ನನ್ನ ಸಹೋದರ ರಫೀಕ್ ಕುಸನೂರ ಮತ್ತು ರಾಜು ಹುಬ್ಬಳ್ಳಿ ಅವರ ಮೇಲೆ ಸೋಡಾ ಬಾಟಲಿಗಳಿಂದ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾಗಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜು ಅವರನ್ನು ಎಸಿಪಿ ಬಡಿಗೇರ ಅವರು ಮೊದಲು ದೂರು ನೀಡಿ ಆಮೇಲೆ ಚಿಕಿತ್ಸೆಗೆ ದಾಖಲಾಗುವುದೆಂದು ಹೇಳಿ ಚಿಕಿತ್ಸೆ ಪೂರ್ಣಗೊಳ್ಳುವ ಮೊದಲೇ ಆಸ್ಪತ್ರೆಯಿಂದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ಅಲ್ಲದೇ ಅವರ ವಿರುದ್ಧವೇ ದೂರು ದಾಖಲಿಸಿಕೊಂಡಿದ್ದಾರೆ.
ಹಲ್ಲೆ ಎಸಗಿದ ಆರೋಪಿಗಳ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳದೇ ಸತಾಯಿಸಿದ್ದಾರೆ. ಈ ಕುರಿತು ಕಮಿಷನರ್‌ಗೆ ಮನವಿ ಸಲ್ಲಿಸಿದ ಬಳಿಕ ದೂರು ದಾಖಲಿಸಿಕೊಂಡಿದ್ದು, ಅಲ್ಲದೇ ಪೊಲೀಸ್ ಅಧಿಕಾರಿಗಳೇ ಪ್ರಕರಣ ಮುಚ್ಚಿ ಹಾಕುವುದಕ್ಕೆ ಸಂಧಾನ ಮಾಡಿಕೊಳ್ಳಿ ಎಂದು ಒತ್ತಾಯಿಸುತ್ತಿದ್ದು, ಒತ್ತಾಯಕ್ಕೆ ಮಣಿದಿಲ್ಲ ಎಂದರು.
ಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಪಿ.ಕೆ. ರಾಯನಗೌಡ್ರ, ಕಾಂಗ್ರೆಸ್ ಕಾರ್ಯಕರ್ತ ಮಹ್ಮದ್ ಪಿಂಜಾರ ಇದ್ದರು.
ನಾಯಕರೇ ನಮ್ಮ ಬೆಂಬಲಕ್ಕಿಲ್ಲ
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆಗುತ್ತಿರುವ ಹಲ್ಲೆ ಕುರಿತು ಧ್ವನಿ ಎತ್ತಲು ನಮ್ಮ ಪಕ್ಷದ ನಾಯಕರು ನಮಗೆ ಸಿಗುತ್ತಿಲ್ಲ. ಮಹಾನಗರ ಜಿಲ್ಲಾಧ್ಯಕ್ಷ ಎ.ಎಂ. ಹಿಂಡಸಗೇರಿ, ಇತರ ನಾಯಕರು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಬೆನ್ನಿಗೆ ನಿಲ್ಲುತ್ತಿಲ್ಲ. ಘಟನೆ ಕುರಿತು ನಮ್ಮ ನಾಯಕರ ಗಮನಕ್ಕೆ ತಂದಿದ್ದೇವೆ ಎಲ್ಲರೂ ದೆಹಲಿ ಮತ್ತು ಬೆಂಗಳೂರಿನಲ್ಲಿರುವುದರಿಂದ ಅವರು ಬಂದ ಬಳಿಕ ಕ್ರಮಕ್ಕೆ ಆಗ್ರಹಿಸಲಿದ್ದೇವೆ. ಪೊಲೀಸ್ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ರಾಜ್ಯ ಮಾನವ ಹಕ್ಕು ಆಯೋಗ, ರಾಜ್ಯಪಾಲರು ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.