ತಮ್ಮೂರ ಕೆರೆ ಅಭಿವೃದ್ಧಿಗೆ ತಮ್ಮದೇ ಶ್ರಮ
ಧಾರವಾಡ: ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಈ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಯೊಂದು ವಾರದಿಂದ ಶುರುವಾಗಿದೆ. ಹಾಗಂತ ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಲ್ಲ.
ಚುನಾವಣೆ ಬಂದಾಗ ಮಾತ್ರ ಜನರ ಬಳಿ ಬರುವ ಜನಪ್ರತಿನಿಧಿಗಳ ಹಾಗೂ ರಾಜಕಾರಣಿಗಳ ಬುದ್ಧಿಯಿಂದ ಬೇಸತ್ತ ಧಾರವಾಡ ತಾಲೂಕಿನ ಮರೇವಾಡದ ಗ್ರಾಮಸ್ಥರು, ಸರ್ಕಾರ ಹಾಗೂ ಜನಪ್ರತಿನಿಧಿಗಳ ದಾರಿ ಕಾಯದೇ ತಾವೇ ತಮ್ಮೂರ ಕೆರೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ. ಗ್ರಾಮದ ಎಲ್ಲ ಟ್ರ್ಯಾಕ್ಟರ್, ಜೆಸಿಬಿಗಳು, ಯುವಕರು ಸೇರಿ ಕೆರೆ ಅಭಿವೃದ್ಧಿಗೆ ಪಣ ತೊಟ್ಟಿದ್ದು, ತಮ್ಮೂರಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಮುನ್ನಚ್ಚರಿಕೆ ವಹಿಸಿ ಇತರ ಹಳ್ಳಿಗಳಿಗೆ ಮಾದರಿಯಾಗಿದ್ದಾರೆ.
ಕಳೆದೆರಡು ವರ್ಷಗಳಿಂದ ನಮ್ಮೂರಲ್ಲಿ ಮಳೆಯಾಗಿಲ್ಲ. ಕೆರೆಯಲ್ಲಿ ಸಾಕಷ್ಟು ಹೂಳು ತುಂಬಿದ್ದರಿಂದ ಬೇಸಿಗೆ ಮುಂಚೆಯೇ ಕೆರೆಯ ನೀರು ಖಾಲಿಯಾಗುತ್ತಿತ್ತು. ಇದರಿಂದಾಗಿ ಒಂದೆಡೆ ಅಂತರ್ಜಲ ಕಡಿಮೆಯಾಗಿದ್ದರೆ, ಇನ್ನೊಂದೆಡೆ ಬೆಳೆಗೆ ಕೆರೆಯ ನೀರನ್ನ ಬಳಸಿಕೊಳ್ಳಲೂ ಕೂಡ ಅಸಾಧ್ಯವಾಗಿತ್ತು. ಇದರಿಂದಾಗಿ ಈ ಬಾರಿ ಜನರು ನೀರಿಗಾಗಿ ಪರದಾಡುವಂತಾಗಿದೆ. ಇದೇ ಕಾರಣದಿಂದ ಕೆರೆ ಉಪಯೋಗದ ಬಗ್ಗೆ ಅರಿವುಂಟಾಗಿ, ಕೆರೆ ಹೂಳನ್ನು ನಾವೇ ತೆಗೆಯಲು ನಿರ್ಧರಿಸಿದ್ದೇವೆಂದು ಗ್ರಾಮಸ್ಥ ಕುಶಾಲ ಎಂಬುವರು ಕನ್ನಡಪ್ರಭಕ್ಕೆ ತಿಳಿಸಿದರು.
ಗ್ರಾಮದಲ್ಲಿನ ಟ್ರ್ಯಾಕ್ಟರ್ಗಳ ಮಾಲೀಕರು ತಮ್ಮ ವಾಹನವನ್ನು ಹೂಳೆತ್ತುವ ಕಾರ್ಯಕ್ಕೆ ಉಚಿತವಾಗಿ ನೀಡಿದ್ದಾರೆ. ಯುವಕರು ಹೂಳನ್ನು ಟ್ರ್ಯಾಕ್ಟರ್ಗಳಿಗೆ ತುಂಬಲು ಸಿದ್ಧರಾಗಿದ್ದಾರೆ. ಒಟ್ಟಿನಲ್ಲಿ ಸರ್ಕಾರ, ಜನಪ್ರತಿನಿಧಿಗಳ ಸಹಾಯವಿಲ್ಲದೇ ಅಭಿವೃದ್ಧಿಯನ್ನು ಜನರೇ ಮಾಡಬಹುದು ಎಂಬುದಕ್ಕೆ ಮರೇವಾಡ ಗ್ರಾಮಸ್ಥರು ಒಳ್ಳೆಯ ನಿದರ್ಶನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

