ಬಿಜೆಪಿಗೆ ಅಭಿವೃದ್ಧಿ ಯೇ ಶ್ರೀರಕ್ಷೆ: ಶೆಟ್ಟರ್
ಬೆಳಗಾವಿ: ಇನ್ನೊಂದು ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಗುರುವಾರ ಬಿಜೆಪಿಯ ಪ್ರಚಾರ ಅದ್ದೂರಿಯಾಗಿ ಆರಂಭಗೊಂಡಿತು. ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು, ಹಿರಿಯ ಮುಖಂಡರು ಪಾಲ್ಗೊಂಡು, ಪಕ್ಷ, ಸರ್ಕಾರದ ಅಭಿವೃದ್ಧಿ ಕಾರ್ಯ ಮುಂದಿನ ಸಂಕಲ್ಪಗಳನ್ನು ಕಾರ್ಯಕರ್ತರಿಗೆ ವಿವರಿಸಿ ಹೇಳುವ ಮೂಲಕ ಚುನಾವಣೆಗೆ ರಣರಹಳೆ ಊದಿದರು.
ಹಿಂದಿನ ಯಾವುದೇ ಸರ್ಕಾರ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸರ್ಕಾರ ಮಾಡಿದ್ದರಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಐದು ವರ್ಷದ ಅಭಿವೃದ್ಧಿ ಕಾರ್ಯಗಳೇ ಬಿಜೆಪಿಗೆ ಶ್ರೀರಕ್ಷೆಯಾಗಿವೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕೋಟ್ಯಂತರ ರುಪಾಯಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ನಮ್ಮ ಸರ್ಕಾರ ಸಾಕಷ್ಟು ಹಣ ನೀಡಿದ್ದು, ರು. 390 ಕೋಟಿ ವೆಚ್ಚದಲ್ಲಿ ಸುವರ್ಣ ವಿಧಾನಸೌಧ ಕಟ್ಟಡವನ್ನು ಕಟ್ಟಿ ಅದರಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಮೂಲಕ ಸರ್ಕಾರ ನುಡಿದಂತೆ ನಡೆದಿದೆ ಎಂದರು.
ಹೆಮ್ಮೆಯ ಸಂಗತಿ: ಇದು ಕೂಡ ತಮಗೆ ಹೆಮ್ಮೆಯ ಸಂಗತಿಯಾಗಿದೆ. ಸುವರ್ಣ ವಿಧಾನಸೌಧ ಅಡಿಗಲ್ಲು ಹಾಕುವಾಗ ಸ್ಪೀಕರ್ ಆಗಿ ಪಾಲ್ಗೊಂಡಿದ್ದ ನಾನು ಮೂರು ವರ್ಷಗಳ ಅವಧಿಯಲ್ಲಿ ಸುಂದರ ಸುವರ್ಣ ವಿಧಾನಸೌಧ ಕಟ್ಟಡ ಪೂರ್ಣಗೊಂಡ ನಂತರ ಮುಖ್ಯಮಂತ್ರಿಯಾಗಿ ಉದ್ಘಾಟಿಸಿದ ಭಾಗ್ಯ ನನಗೆ ದೊರೆತಿರುವುದು ಸೌಭಾಗ್ಯ ಎಂದರು. ಬೆಳಗಾವಿಯಲ್ಲಿ ಎರಡು ಬಾರಿ ಅಧಿವೇಶನ, ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಮೂಲಕ ಕನ್ನಡಿಗರು ಹಾಗೂ ಮರಾಠಿಗರಲ್ಲಿ ಭಾಷಾ ಸಾಮರಸ್ಯ ಮೂಡಿಸಲಾಗಿದೆ. ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳ ಅವಧಿಯಲ್ಲಿ ತಿಂಗಳಿಗೆ 1 ಕಿ.ಮೀ. ರಸ್ತೆಯನ್ನು ಮಾಡಿಲ್ಲ. ಆದರೆ, ರಾಜ್ಯ ಸರ್ಕಾರ ಐದು ವರ್ಷದಲ್ಲಿ ರು. 3 ಸಾವಿರ ಕೋಟಿ ಹಣ ಖರ್ಚು ಮಾಡಿ ಸುವರ್ಣ ಗ್ರಾಮೋದಯದ ಮೂಲಕ ಗ್ರಾಮೀಣ ಪ್ರದೇಶದ ಸಣ್ಣ ಪುಟ್ಟ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗಿದೆ ಎಂದರು.
43 ತಾಲೂಕು ಘೋಷಣೆ: ಫೆಬ್ರವರಿ 8ರಂದು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 43 ತಾಲೂಕು ಕೇಂದ್ರಗಳನ್ನು ಘೋಷಿಸಿದ್ದೇನೆ. ಜೊತೆಗೆ ಬೆಳಗಾವಿ ಜಿಲ್ಲೆಯ ಮೂರು ಹೊಸ ತಾಲೂಕುಗಳನ್ನು ಘೋಷಿಸಲಾಗಿದೆ. ಅಲ್ಲದೆ, ರಾಜ್ಯದಲ್ಲಿ ದಿನಗೂಲಿ ನೌಕರರಾಗಿಕೆಲಸ ಮಾಡುತ್ತಿದ್ದ 23 ಸಾವಿರ ನೌಕರರ ಸೇವೆಯನ್ನು ಕಾಯಂಗೊಳಿಸಲಾಗಿದೆ ಎಂದರು.
8 ತಿಂಗಳ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲದೆ ಪಾರದರ್ಶಕ ಆಡಳಿತ ನೀಡಿದ್ದು, ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಸಿಎಂ ಶೆಟ್ಟರ್ ಮತದಾರರಲ್ಲಿ ಮನವಿ ಮಾಡಿದರು.
ಕೇಂದ್ರ ಸರ್ಕಾರ ಹಗರಣಗಳ ಸರ್ಕಾರ: ಜೋಶಿ: ಕಾಂಗ್ರೆಸ್ನ ಹಸ್ತ ಬಡವರತ್ತ ಎಂಬ ಘೋಷವಾಕ್ಯದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಗರಣಗಳ ಸರ್ಕಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಆರೋಪಿಸಿದರು. ಕಾಮನವೆಲ್ತ್ ಹಗರಣ, ಆಗಸ್ಟಾ ಹೆಲಿಕಾಪ್ಟರ್ ಹಗರಣ, ಕಲ್ಲಿದ್ದಿಲು ಹಗರಣ ಸೇರಿದಂತೆ ಭೂಮಿಯ ಮೇಲೆ ಮತ್ತು ಕೆಳಗೆ ಭ್ರಷ್ಟಾಚಾರದಲ್ಲಿ ಯುಪಿಎ ಸರ್ಕಾರದ ಸಚಿವರು ಮುಳುಗೇಳುತ್ತಿದ್ದು, ಕಾಟಾಚಾರಕ್ಕಾಗಿ ಕೆಲವೊಂದು ಜನರನ್ನು ಬಂಧಿಸಿದಂತೆ ನಾಟಕವಾಡಿ ಹಗರಣಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವಷಡ್ಯಂತ್ರವನ್ನು ರೂಪಿಸಲಾಗಿದೆ ಎಂದು ಆರೋಪಿಸಿದರು. 2ಜಿ ಸ್ಪೆಕ್ಟ್ರಮ್ ಹಗರಣದ ಸಿಲುಕಿದ್ದ ಎ. ರಾಜಾ ಹೇಳುವಂತೆ ಪ್ರದಾನಮಂತ್ರಿಗಳ ಸಚಿವಾಲಯ ಹಣಕಾಸು ಸಚಿವ ಪಿ. ಚಿದಂಬರಂ ಅವರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು ಎಂದು ಆರೋಪಿಸಿರುವುದು ಕೇಂದ್ರ ಸರ್ಕಾರದ ಭ್ರಷ್ಟತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ಗೆ ಅಭ್ಯರ್ಥಿಗಳೇ ಇಲ್ಲ: ಕತ್ತಿ
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಅತ್ಯಂತ ಪ್ರಬಲವಾಗಿದ್ದು, ಜಿಲ್ಲೆಯ ಅನೇಕ ಕಡೆ ಕಾಂಗ್ರೆಸ್ ಪಕ್ಷಕ್ಕೆಸೂಕ್ತವಾದ ಅಭ್ಯರ್ಥಿಗಳೇ ದೊರೆಯುತ್ತಿಲ್ಲ. ಹೀಗಾಗಿ, ಅಥಣಿ, ರಾಯಬಾಗ, ಕಾಗವಾಡ, ಹುಕ್ಕೇರಿ, ಬೆಳಗಾವಿ ದಕ್ಷಿಣ, ಅರಬಾವಿ ಸೇರಿದಂತೆ ಮೊದಲಾದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹುಡುಕುವುದೇ ಕಾಂಗ್ರೆಸ್ಗೆ ಸವಾಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು. ಕಳೆದ 30 ವರ್ಷಗಳಿಂದ ಬಂದ್ ಆಗಿದ್ದ 9 ಜಾಕ್ವೆಲ್ಗಳನ್ನು ರು. 40 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲಾಗಿದ್ದು, ಇದರಿಂದ ಸವದತ್ತಿ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದರು. ಜಿಲ್ಲೆಯ ರಾಮೇಶ್ವರ ಏತನೀರಾವರಿಯೋಜನೆ, ಸಂಗಮೇಶ್ವರ ಏತ ನೀರಾವರಿ,ಹಿಪ್ಪರಗಿ ಬ್ಯಾರೇಜ್ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಂಡು ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಸಂಸದರಾದ ಸುರೇಶ ಅಂಗಡಿ, ರಮೇಶ ಕತ್ತಿ, ಸಚಿವರಾದ ಮುರುಗೇಶ ನಿರಾಣಿ, ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಜಗದೀಶ ಮೆಟಗುಡ್, ಅಭಯ ಪಾಟೀಲ, ಸಂಜಯ ಪಾಟೀಲ, ಸುರೇಶ ಮಾರಿಹಾಳ, ಲಕ್ಷ್ಮಣ ಸವದಿ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

