ಧಾರವಾಡ

ರಂಗಭೂಮಿ ಸಂಬಂಧ ಬೆಸೆಯುವ ಕೊಂಡಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 5
ರಂಗಭೂಮಿ ನನ್ನ ಜೀವನದ ಉಸಿರು. ಮಾನವೀಯ ಸಂಬಂಧಗಳನ್ನು ಬೆಸೆಯುವ ಕೊಂಡಿ. ಶಾಲಾ-ಕಾಲೇಜು ದಿನಗಳಲ್ಲಿ ತಂದೆ-ತಾಯಿಯರು ಹಾಗೂ ಶಿಕ್ಷಕರು ನನ್ನ ರಂಗಾಸಕ್ತಿಗೆ ನೀರೆರೆದು ಪೋಷಿಸಿದರೆ, ನನಗೆ ಉದ್ಯೋಗ ನೀಡಿದ ಸಿಂಡಿಕೇಟ್ ಬ್ಯಾಂಕ್ ಅದನ್ನು ಪ್ರೋತ್ಸಾಹಿಸಿ, ನನ್ನ ಯಕ್ಷಗಾನ, ರಂಗಭೂಮಿ ಕಲಾಸಕ್ತಿಗೆ ಹೊಸ ಆಯಾಮ ನೀಡಿತು ಎಂದು ರಂಗ ಕಲಾವಿದೆ ಶಶಿಕಲಾ ಜೋಶಿ ಹೇಳಿದರು.
ಧಾರವಾಡದ ಸೃಜನಾ ರಂಗಮಂದಿರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅಭಿನಯ ಭಾರತಿ ರಂಗಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಪತಿ ದಿ. ಮೋಹನ ಜೋಶಿ ಹಾಗೂ ಮಗ ಕ್ಷಿತಿಜ ನನ್ನ ಆಸಕ್ತಿಗೆ ಧ್ವನಿಗೂಡಿಸಿ ಇಂದಿಗೂ ನನ್ನಲ್ಲಿ ಹೊಸ ಚೈತನ್ಯ ಮೂಡಿಸಿದ್ದಾರೆ. ನನ್ನ ಅಳಿಲು ಸೇವೆಯನ್ನು ಗುರುತಿಸಿ ತಾನಾಗಿಯೇ ಅರಸಿ ಬಂದ ಈ ಪ್ರಶಸ್ತಿಯು ನನ್ನ ಜೀವನದ ಅಮೂಲ್ಯ ಕ್ಷಣ ಹಾಗೂ ಅಪರೂಪದ ಪಾರಿತೋಷಕವೆನಿಸಿದೆ ಎಂದರು.
ಮೆಚ್ಚುಗೆ: ಇನ್ನೋರ್ವ ಕಲಾವಿದೆ ವಿಷಯಾ ಜೇವೂರ ಮಾತನಾಡಿ, ಅಭಿನಯ ಭಾರತೀಯ ಮೂರು ದಶಕಗಳ ನಡೆದು ಬಂದ ದಾರಿಯನ್ನು ಮೆಲುಕು ಹಾಕಿದರು. ಮುಖ್ಯ ಅತಿಥಿಗಳಾಗಿ ಧಾರವಾಡ ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರ ರಂಗಭೂಮಿಗೆ ರಂಗಾಯಣದ ಸಹಾಯ ಸಹಕಾರವನ್ನು ಪುನರುಚ್ಚರಿಸಿದರು. ಅಭಿನಯ ಭಾರತಿಯ ಅಧ್ಯಕ್ಷರಾದ ಸೇತುಮಾಧವ ಮಾನವಿ, ಡಾ. ಗಿರಡ್ಡಿ ಗೋವಿಂದರಾಜ, ಡಾ. ರಮಾಕಾಂತ ಜೋಶಿ, ಡಾ. ಪ್ರಕಾಶ ಭಟ್, ಡಾ. ಹ.ವೆಂ. ಕಾಖಂಡಿಕಿ, ಡಾ. ಶಶಿಧರ ನರೇಂದ್ರ, ಎಸ್.ಎನ್. ದೇಶಪಾಂಡೆ, ಎಂ.ಕೆ. ಹೆಗಡೆ, ಸಮೀರ ಜೋಶಿ, ಫಾಲ್ಗುಣ ದೇಶಪಾಂಡೆ ಇದ್ದರು. ಹಿರಿಯ ರಂಗಕರ್ಮಿ ಹಾಗೂ ಕಲಾವಿದ ಆರ್ಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಅನಂತರ ಶಿವಯೋಗಿ ರೊಳ್ಳಿ ರಚಿಸಿದ ಮಳೀ ಬೇಕ್ರೀ ಮಳೀ ಎಂಬ ಮಕ್ಕಳ ನಾಟಕವನ್ನು ಲಕ್ಷ್ಮಣ ಪೀರಗಾರ ನಿರ್ದೇಶನದಲ್ಲಿ ಕೆಲಗೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಅಭಿನಯಿಸಿದರು. ಇಂದಿನ ಯಾಂತ್ರಿಕ ಯುಗದಲ್ಲಿ, ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧ ಹದಗೆಡುತ್ತಿದ್ದು, ಮಾನವನ ದುರಾಶೆಯೇ ಪರಿಸರ ನಾಶಕ್ಕೆ ಕಾರಣವಾಗಿದೆ ಎಂಬ ಸಂದೇಶ ನೀಡಿದ ಈ ನಾಟಕವು ಎಲ್ಲರ ಮೆಚ್ಚುಗೆ ಪಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.