ಚುನಾವಣೆಯಲ್ಲಿ ಮಕ್ಕಳ ಬಳಕೆಗೆ ಜಿಲ್ಲಾಡಳಿತ ತಡೆ
ಧಾರವಾಡ: ಚುನಾವಣಾ ಪ್ರಚಾರ ಸಭೆಗಳಲ್ಲಿ ಹೆಚ್ಚಾಗಿ ಮಕ್ಕಳನ್ನು ತೊಡಗಿಸಿಕೊಳ್ಳುವ ಪ್ರಕರಣಗಳು ವ್ಯಕ್ತವಾಗುತ್ತಿವೆ. ಈ ಮಕ್ಕಳು ಶಾಲಾ ಸಮಯದಲ್ಲಿ ಶಾಲೆಗಳಲ್ಲಿ ಇತರೆ ಸಮಯದಲ್ಲಿ ತಮ್ಮ ಕುಟುಂಬ ವ್ಯವಸ್ಥೆಯಲ್ಲಿ ಇರಬೇಕಾಗಿದ್ದು, ನ್ಯಾಯಯುತವಾಗಿದೆ. ಆದರೆ ಅಪ್ರಬುದ್ಧ ಮಕ್ಕಳನ್ನು ಚುನಾವಣೆ ಪ್ರಚಾರಗಳಲ್ಲಿ ಅಂದರೆ ಮೆರವಣಿಗೆ, ಕರಪತ್ರ ಹಂಚಲು, ಭಿತ್ತಿಪತ್ರ ಅಂಟಿಸಲು ಮುಂತಾದ ಕೆಲಸಗಳಲ್ಲಿ ವಿವಿಧ ಪಕ್ಷಗಳಿಂದ ಮಕ್ಕಳನ್ನು ಉಪಯೋಗಿಸುತ್ತಿರುವುದು ರಾಜ್ಯಾದ್ಯಂತ ಕಂಡುಬರುತ್ತಿದೆ. ಆದ್ದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಮಕ್ಕಳನ್ನು ಯಾವುದೇ ರಾಜಕೀಯ ಪ್ರಚಾರದ ಉದ್ದೇಶಗಳಿಗಾಗಿ ಬಳಸುವುದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ಹಾಗೂ ಪಕ್ಷಗಳ ಮೇಲೆ ಚುನಾವಣಾ ನೀತಿ ಸಂಹಿತೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ರವರಿಗೆ ತಿಳಿಸಲಾಗುವುದು. ಆದ್ದರಿಂದ ಎಲ್ಲಾ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಗಮನ ಹರಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂಜಾಟ: 8 ಜನರ ಬಂಧನ
ಧಾರವಾಡ: ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಎಂಟು ಜನರನ್ನು ಇಲ್ಲಿನ ಅಳ್ನಾವರ ಠಾಣಾ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಹಳಿಯಾಳ ರಸ್ತೆಯಲ್ಲಿರುವ ಬಣದೂರ ಬಳಿಯ ಗುಳಗುಳಕಿ ಕೆರೆ ಹತ್ತಿರ ಇಸ್ಪೀಟು ಜೂಜಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಒಟ್ಟು 8 ಜನರನ್ನು ಬಂಧಿಸಿದ್ದಾರೆ. ಅಲ್ಲದೇ, ಬಂಧಿತರಿಂದ ರು. 4270 ಗಳನ್ನು ಹಾಗೂ ಜೂಜಾಟ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಎಸ್ಐ ಸಮೀರ ಮುಲ್ಲಾ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನಾಳೆಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
ಧಾರವಾಡ: ಇಲ್ಲಿನ ಚಿಲಿಪಿಲಿ ಸಂಸ್ಥೆ ಗ್ರಾಮೀಣ ಮಕ್ಕಳಿಗಾಗಿ ರಚನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆ ಒಳಗೊಂಡ ಬೇಸಿಗೆ ಶಿಬಿರವನ್ನು ಏ. 10ರಿಂದ ಮೇ 5ರ ವರೆಗೆ ಕಮಲಾಪುರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದೆ. ಶಿಬಿರದಲ್ಲಿ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ, ನೃತ್ಯ, ಸಂಗೀತ ಕರಕುಶಲತೆ, ವೈವಿಧ್ಯಮಯ ಸೃಜನಶೀಲ ಆಟ ಕಲಿಸಿಕೊಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 84533-16728 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಧಾರವಾಡ: ಕರ್ನಾಟಕ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳ ಸಂಘದ ಪ್ರತಿಭಾ ಪುರಸ್ಕಾರ ಏ. 9ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಕಾಲೇಜಿ ಪ್ರಿನ್ಸಿಪಲ್ ಫ್ಯಾರನ್ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ. 2010- 11ನೇ ಸಾಲಿನ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ವಿವಿಧ ಪದವಿ ಪರೀಕ್ಷೆಗಳಲ್ಲಿ ಅತ್ಯುತ್ಯುಮ ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಕ್ರಮಾಂಕ ಪಡೆದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಡಾ. ಗಿರಡ್ಡಿ ಗೋವಿಂದರಾಜ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರೊ. ರಾಜಶೇಖರ ಜಾಡರ ಮತ್ತು ಮೋಹನ ನಾಗಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಹಾರೋಬೆಳವಡಿಯಲ್ಲಿ ಶಿವಾನುಭವ
ಧಾರವಾಡ: ತಾಲೂಕಿನ ಹಾರೋಬೆಳವಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ 10ರಂದು ಸಂಜೆ 7.30 ಗಂಟೆಗೆ ಯುಗಾದಿ ಅಮಾವಾಸ್ಯೆಯ 11ನೆಯ ಮಾಸಿಕ ಶಿವಾನುಭವ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ನವಲಗುಂದ ತಾಲೂಕು ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಕಿಟೆಲ್ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಹೇಮರೆಡ್ಡಿ ನೀಲಗುಂದ ಅತಿಥಿಗಳಾಗಿ ಆಗಮಿಸಲಿದ್ದು, ಬೆಳಗಾವಿ ಜಿಲ್ಲೆ ಇನಾಂಹೊಂಗಲದ ಶಿವಾಜಿ ಬಾಗಲೆ ಹಾಗೂ ಹಾರೋಬೆಳವಡಿಯ ಶಿವಾಜಿ ಮೊತೆನ್ನವರ ದಾಸೋಹ ಸೇವೆ ನಡೆಸಿಕೊಡಲಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

