ನೀರಿಗಾಗಿ ನಿಲ್ಲದ ನಾಗರಿಕರ ಪರದಾಟ
ಕುಂದಗೋಳ: ನೀರಿಗಾಗಿ ದಿನವಿಡೀ ಕಾಯ್ದರೂ ಒಂದು ಕೊಡ ನೀರು ಸಿಗುವುದು ಕಷ್ಟ. ಕಣ್ಣಾ ಮುಚ್ಚಾಲೆಯಾಟ ಆಡುವ ವಿದ್ಯುತ್ ಸಮಸ್ಯೆ ಮಧ್ಯೆಯೂ ಜನತೆ ಬೋರ್ವೆಲ್ ಮುಂದೆ ಗಂಟೆಗಟ್ಟಲೆ ಸರದಿ ಪ್ರಕಾರ ಕಾದು ಕಾದು ಒಂದು ಕೊಡ ನೀರು ಪಡೆಯುವ ಪರಿಸ್ಥಿತಿ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮಸ್ಥರದ್ದಾಗಿದೆ.
ದಿನಂಪ್ರತಿ ನೀರು ತರುವುದೇ ಈ ಗ್ರಾಮಸ್ಥರ ಪ್ರಮುಖ ಕಾರ್ಯ. ನೀರು ಬರುವ ಮೊದಲೇ ಇರುವೆಗಳ ಸಾಲಿನಂತೆ ಕೊಡಗಳನ್ನು ಸರದಿ ಸಾಲಿನಲ್ಲಿಟ್ಟು ಕಾಯಬೇಕು. ಅದಕ್ಕಾಗಿ ದಿನನಿತ್ಯ ಸಣ್ಣ ಜಗಳಗಳು ನಡೆಯುವುದು ಇಲ್ಲಿ ಮಾಮೂಲು. ಮನೆಯಲ್ಲಿ ಸಿಗುವ ಪಾತ್ರೆ, ಚೆಂಬು, ಕೊಡ ಹೀಗೆ ಸಿಕ್ಕಿದ್ದನ್ನೆಲ್ಲಾ ತಂದು ಸರದಿ ಸಾಲಿನಲ್ಲಿ ಇಟ್ಟರೆ ಮಾತ್ರ ಅಂದಿನ ನೀರಿನ ಬವಣೆ ತಾತ್ಕಾಲಿಕ ತೀರುತ್ತದೆ. ಮರುದಿನ ಮತ್ತದೆ ಪರಿಸ್ಥಿತಿ.
ಇದಾವುದನ್ನು ಕಣ್ಣಿಗೆ ಕಂಡರೂ ಕಾಣದಂತೆ ರಾಜಕೀಯ ಮುಖಂಡರು ಮಾತ್ರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಮತ್ತದೇ ಹಳೆಯ ಅಶ್ವಾಸನೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ. ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಪಂ ಗ್ರೇಡ್1 ಪಂಚಾಯತ್ ಆಗಿದ್ದು, ಈ ಗ್ರಾಮದಲ್ಲಿ ಸುಮಾರು 20 ಸಾವಿರ ಜನಸಂಖ್ಯೆ ಇದ್ದು, ಗ್ರಾಪಂ ಕುಡಿಯುವ ನೀರನ್ನು ಸರಿಯಾಗಿ ಒದಗಿಸಲು ವಿಫಲಗೊಂಡಿರುವುದು ಈ ಪರಿಸ್ಥಿತಿಯಿಂದ ಸ್ಪಷ್ಟವಾಗುತ್ತದೆ.
ಗ್ರಾಪಂ ವ್ಯಾಪ್ತಿಯಲ್ಲಿ 11 ಬೋರವೆಲ್ಗಳು ಇದ್ದು, ಇವುಗಳಲ್ಲಿ ಜಲನಿರ್ಮಲ ಯೋಜನೆ ಅಡಿಯಲ್ಲಿ 5 ಬೋರವೆಲ್ಗಳನ್ನು ಪಕ್ಕ ಗ್ರಾಮ ರಟಗೇರಿಯಲ್ಲಿ ಕೊರೆಸಲಾಗಿದ್ದು, ಅಲ್ಲಿಂದ ನೀರು ಸಂಪುನಲ್ಲಿ ಸಂಗ್ರಹಿಸಿ, ಗುಡಗೇರಿಗೆ ಲಿಪ್ಟ್ ಮಾಡಿ ಕೊಡಬೇಕು. ಆದರೆ, ಈ ಜಲನಿರ್ಮಲ ಯೋಜನೆಯ ಪ್ರಕಾರ ದಿನಕ್ಕೊಂದು ಬಾರಿ ಕೊಡಲಾಗದೆ ತಿಂಗಳಿಗೊಂದು ಬಾರಿ ಮಾತ್ರ ಗ್ರಾಮಕ್ಕೆ ಕೊಡುತ್ತಿರುವುದರಿಂದ ಗುಡಗೇರಿಯಲ್ಲಿ ನೀರಿನ ತೊಂದರೆ ಅತಿಯಾಗಿ ಕಂಡುಬರುತ್ತಿದೆ.
ಇನ್ನು ಗುಡಗೇರಿ ಸುತ್ತಮುತ್ತ 5 ಕೊಳವೆ ಬಾವಿಗಳಿದ್ದು, ಇವುಗಳಿಂದಲೆ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿದ್ದು ಬಕಾಸುರನಿಗೆ ಅಲ್ಪ ಅನ್ನವನ್ನಿಕ್ಕಿದಂತೆ ಆಗುತ್ತಿದೆ. ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ನೀರಿನ ತೊಂದರೆ ಮತ್ತಷ್ಟು ಉಲ್ಬಣಿಸಿದ್ದು, ದಿನದ 24 ಗಂಟೆಯಲ್ಲಿ 8 ಗಂಟೆ ಕಾಲ ವಿದ್ಯುತ್ ನೀಡುತ್ತಿದ್ದು, ಅದರಲ್ಲಿ 5 ತಾಸು 3 ಫೇಸ್, ಉಳಿದ 3 ತಾಸು 2 ಫೇಸ್ ವಿದ್ಯುತ್ ಪೂರೈಸುತ್ತಿದ್ದರಿಂದ ಕೊಳವೆ ಬಾವಿಗಳು ಅರೆನಿದ್ರೆಯಲ್ಲಿರುತ್ತವೆ.
ಈ ಕುರಿತು ಗ್ರಾಪಂ ವಾಟರ್ ಮ್ಯಾನ್ ರಾಯಪ್ಪ ಪಾಣಿಗಟ್ಟಿ ಅವರನ್ನು ಕನ್ನಡಪ್ರಭ ಮಾತನಾಡಿಸಿದಾಗ, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ 11 ಕೊಳವೆ ಬಾವಿಗಳಿದ್ದರೂ ಸರಿಯಾಗಿ ನೀರು ಪೂರೈಸಲಾಗುತ್ತಿಲ್ಲ. ದಿನಕ್ಕೆ ಕೇವಲ 5 ತಾಸು ವಿದ್ಯುತ್ ನಮಗೆ ಸಿಗುತ್ತಿದ್ದು, ಅಷ್ಟೇ ವೇಳೆಯಲ್ಲಿ ನೀರು ಪೂರೈಸಬೇಕು. ಮೇಲಾಗಿ ಬೇಸಿಗೆ ಇರುವುದರಿಂದ ಬೋರವೆಲ್ಗಳು ನಮಗೆ ಬೇಕಾದಷ್ಟು ನೀರು ಕೊಡುತ್ತಿಲ್ಲ ಎಂದರು.
-ಶೀತಲ್.ಎಸ್. ಮುರಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

