ಟಿಕೆಟ್ ಗೊಂದಲ: ಜಟಾಪಟಿ
ಧಾರವಾಡ: ಇಲ್ಲಿನ ಹಳೇ ಎಸ್ಪಿ ಕಚೇರಿ ಆವರಣದಲ್ಲಿನ ಕೆಜೆಪಿ ಕಚೇರಿ ಮಂಗಳವಾರ ಅಕ್ಷರಶಃ ಗೊಂದಲದ ಗೂಡಾಗಿತ್ತು. ನಮ್ಮ ಮುಖಂಡನಿಗೆ ಟಿಕೆಟ್ ಕೊಡಲಾಗಿದೆ ಎಂದು ಒಂದು ಗುಂಪು, ಅದೇ ಟಿಕೆಟ್ನ್ನು ಮೊದಲು ನಮ್ಮ ಮುಖಂಡನಿಗೆ ಕೊಡಲಾಗಿದೆ ಎಂದು ಇನ್ನೊಂದು ಗುಂಪಿನ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.
ಕೆಜೆಪಿ ಮುಖಂಡರು ಧಾರವಾಡ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಮಾಡಿದ ಅವಾಂತರದಿಂದ ಈ ರೀತಿಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಟಿಕೆಟ್ ಆಕಾಂಕ್ಷಿಗಳಿಬ್ಬರ ಬೆಂಬಲಿಗರ ಮಧ್ಯ ತೀವ್ರ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಮುಖಂಡರು ಮೊದಲು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ನಿಜನಗೌಡ ಪಾಟೀಲ ಹೆಸರು ಅಂತಿಮವಾಗಿತ್ತು. ಬಳಿಕ ಬಿಡುಗಡೆಯಾದ ಪಟ್ಟಿಯಲ್ಲಿ ಅದೇ ಸ್ಥಾನಕ್ಕೆ ತವನಪ್ಪ ಅಷ್ಟಗಿ ಹೆಸರು ಘೋಷಿಸಲಾಗಿತ್ತು. ಆಗಿನಿಂದಲೇ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.
ಮಂಗಳವಾರ ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ಧಾರವಾಡ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆದಿತ್ತು. ಈಗಾಗಲೇ ಟಿಕೆಟ್ ಅಧಿಕೃತವಾಗಿ ಘೋಷಣೆಯಾಗಿರುವ ಅಭ್ಯರ್ಥಿ ತವನಪ್ಪ ಅಷ್ಟಗಿ ಹಾಗೂ ಈ ಹಿಂದೆ ಅಧಿಕೃತವಾಗಿ ಘೋಷಣೆಯಾಗಿ ಕೈಬಿಟ್ಟಿರುವ ನಿಜನಗೌಡ ಪಾಟೀಲರ ಬೆಂಬಲಿಗರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಆರಂಭವಾದಾಗ ತವನಪ್ಪ ಅಷ್ಟಗಿ ಬೆಂಬಲಿಗರು ಘೋಷಣೆ ಕೂಗುತ್ತ ಸಭೆ ಪ್ರವೇಶಿಸಿದ್ದಾರೆ. ಈ ಸಂದರ್ಭದಲ್ಲಿ ಟಿಕೆಟ್ ವಂಚಿತ ನಿಜನಗೌಡ ಪಾಟೀಲ ಬೆಂಬಲಿಗರು ಇಲ್ಲಿವರೆಗೂ ಯಾರಿಗೂ ಟಿಕೆಟ್ ಅಂತಿಮವಾಗಿಲ್ಲ. ಆದ್ದರಿಂದ ಪಕ್ಷದ ಕಾರ್ಯಕರ್ತರು ಟಿಕೆಟ್ ಅಂತಿಮವಾಗಿ ಬಿ ಫಾರಂ ಸಿಗುವವರೆಗೆ ಎಲ್ಲರೂ ಪಕ್ಷದ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸೋಣ ಎಂದು ಒತ್ತಾಯಿಸಿದರು.
ನಿಜನಗೌಡ ಬೆಂಬಲಿಗರ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅಷ್ಟಗಿ ಬೆಂಬಲಿಗರು ನಮ್ಮ ನಾಯಕರಿಗೆ ಟಿಕೆಟ್ ಅಂತಿಮವಾಗಿದ್ದು, ಗ್ರಾಮೀಣ ಭಾಗದ ಎಲ್ಲೆಡೆ ಪ್ರಚಾರ ಸಾಗಿದೆ. ಅಲ್ಲದೆ, ಟಿಕೆಟ್ ಕೈ ತಪ್ಪಿದ್ದರಿಂದ ಈ ರೀತಿ ವಿರೋಧಿಸಬಾರದು ಎಂದರು. ಈ ಸಮಯ ಇಬ್ಬರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಧ್ಯೆ ಪ್ರವೇಶಿಸಿದ ಪಕ್ಷದ ಮುಖಂಡರು ನಿಜನಗೌಡ ಹಾಗೂ ಅಷ್ಟಗಿ ಬೆಂಬಲಿಗರನ್ನು ಸಮಾಧಾನಪಡಿಸಿದರು. ಈ ಕಾದಾಟದಿಂದ ಪಕ್ಷದ ಹುರಿಯಾಳು ಯಾರೆಂಬುವುದು ಮತದಾರರು ಹಾಗೂ ಕಾರ್ಯಕರ್ತರಲ್ಲಿ ಗೊಂದಲವನ್ನುಂಟು ಮಾಡಿದೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಷ್ಟಗಿ ಹಾಗೂ ನಿಜನಗೌಡ, ಇಲ್ಲಿವರೆಗೆ ಯಾರಿಗೂ ಟಿಕೆಟ್ ಅಂತಿಮವಾಗಿಲ್ಲ. ಪಕ್ಷದ ಅಧ್ಯಕ್ಷರು ಸದ್ಯದಲ್ಲಿಯೇ ಟಿಕೆಟ್ ಅಂತಿಮಗೊಳಿಸಲಿದ್ದಾರೆ. ಅಲ್ಲದೇ, ಅಭ್ಯರ್ಥಿ ಯಾರೆಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ನಿಜನಗೌಡ ಪಾಟೀಲ ಹೇಳಿದರು. ಬಳಿಕ ಮಾತನಾಡಿದ ಅಷ್ಟಗಿ, ಪಕ್ಷದ ಮುಂಖಡರು ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಅಂತಿಮಗೊಳಿಸಿದ್ದಾರೆ ಎಂದು ಹೇಳಿದ ರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

