ಧಾರವಾಡ

ಹೊಸ ದಾಖಲೆಗೆ ನವಲಗುಂದ ಕ್ಷೇತ್ರ ಸಜ್ಜು

Published On :

     
ನವಲಗುಂದ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಗೆದ್ದರೂ ಹೊಸ ದಾಖಲೆ ನಿರ್ಮಾಣಗೊಳ್ಳುವುದು ಖಚಿತ.
2004ರ ಹಾಗೂ 2008ರ ವಿಧಾನಸಭೆಯಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿರುವ ಬಿಜೆಪಿ, ಈ ಬಾರಿ ಮರಳಿ ಗೆದ್ದಿದ್ದೇ ಆದರೆ ಆ ಪಕ್ಷದ ಪಾಲಿಗೆ ಈ ಗೆಲುವು ಒಂದು ದಾಖಲೆಯಾಗಲಿದೆ.
ಕೆಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿಗಳು ಗೆದ್ದಲ್ಲಿ ಎರಡೂ ಪಕ್ಷಗಳಿಗೆ ಈ ಗೆಲುವು ದಾಖಲೆಯೇ ಸರಿ. ಕೆಜೆಪಿ ಹೊಸ ಪಕ್ಷವಾಗಿದ್ದರಿಂದ ಮೊದಲ ಹೊಡೆತದಲ್ಲೇ ಗೆಲುವು ಸಾಧಿಸಿದ ಸಂತಸ ಆ ಪಕ್ಷಕ್ಕೊದಗಲಿದೆ. ಇನ್ನೂ ಜನತಾ ಪರಿವಾರದ ಯಾವುದೇ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಇದುವರೆಗೆ ಗೆಲುವು ಸಾಧಿಸಿಲ್ಲ. ಇದರೊಂದಿಗೆ ಪಕ್ಷೇತರ ಅಭ್ಯರ್ಥಿಗಳಿಗೂ ಈ ಕ್ಷೇತ್ರ ಇದುವರೆಗೆ ಒಲಿದಿಲ್ಲ.
ಇನ್ನೂ ಕಾಂಗ್ರೆಸ್ ಈ ಕ್ಷೇತ್ರದಲ್ಲಿ 1957ರಿಂದ 2008ರ ವರೆಗಿನ ಒಟ್ಟು 12 ಚುನಾವಣೆಗಳಲ್ಲಿ 8 ಬಾರಿ ಗೆಲುವು ಸಾಧಿಸಿದೆ. 1972ರಲ್ಲಿ ಕೆಸಿಪಿ ಹಾಗೂ 2004 ಮತ್ತು 2008ರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಗೆಲುವಿಗೆ ಅಡ್ಡಗಾಲು ಹಾಕಿದ್ದರು. ಸತತ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಈ ಕ್ಷೇತ್ರದಿಂದ ಸೋಲನುಭವಿಸಿದೆ. ಇದುವರೆಗೆನ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ ಈ ಕ್ಷೇತ್ರದಿಂದ ಎರಡು ಬಾರಿ ಸೋತಿಲ್ಲ. ಈ ಬಾರಿಯೂ ಕಾಂಗ್ರೆಸ್ ಸೋತರೆ ಸತತ ಮೂರನೇ ಬಾರಿಗೆ ಸೋಲು ಕಾಣಲಿದೆ. ಚುನಾವಣೆಯಲ್ಲಿ ಜಯ ಗಳಿಸಿದ್ದೇ ಆದಲ್ಲಿ ಕ್ಷೇತ್ರವನ್ನು ಮರಳಿ ತನ್ನ ವಶಕ್ಕೆ ತೆಗೆದುಕೊಂಡ ದಾಖಲೆಯನ್ನು ಕಾಂಗ್ರೆಸ್ ಬರೆಯಲಿದೆ.
ಕೈ ಕೋಟೆ: 2004ರ ಚುನಾವಣೆ ಮೊದಲು ನವಲಗುಂದ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯೆಂದೇ ಪರಿಗಣಿಸಲ್ಪಟ್ಟಿತ್ತು. ಆದರೆ 2004ರ ಚುನಾವಣೆಯಲ್ಲಿ ಡಾ. ಆರ್.ಬಿ. ಶಿರಿಯಣ್ಣವರ ಗೆಲ್ಲುವ ಮೂಲಕ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿಯ ಬಾವುಟ ಹಾರಿಸಿದರು. 2008ರ ಚುನಾವಣೆಯಲ್ಲಿ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ಗೆಲ್ಲುವ ಮೂಲಕ ಈ ಕ್ಷೇತ್ರದಲ್ಲಿ ಎರಡನೇ ಗೆಲುವು ದೊರಕಿಸಿಕೊಟ್ಟರು. ಇದೀಗ ಶಂಕರ ಪಾಟೀಲ ಮುನೇನಕೊಪ್ಪ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಕಣದಲ್ಲಿದ್ದಾರೆ. 1957ರ ಮೊದಲ ಚುನಾವಣೆಯಿಂದ ಕಾಂಗ್ರೆಸ್ ಈ ಕ್ಷೇತ್ರವನ್ನು ಬಿಗಿ ಮುಷ್ಠಿಯಲ್ಲಿಟ್ಟುಕೊಂಡಿತ್ತು. ಕಾಂಗ್ರೆಸ್ ಅಭ್ಯರ್ಥಿಯಾದ ಆರ್.ಎಂ. ಪಾಟೀಲ 1957, 1962 ಹಾಗೂ 1967ರ ಚುನಾವಣೆಗಳಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದರು. 1972ರಲ್ಲಿ ಎನ್‌ಸಿಓ ಅಭ್ಯರ್ಥಿ ಎಂ.ಕೆ. ಕುಲಕರ್ಣಿ ಚುನಾವಣೆಯಲ್ಲಿ ಗೆದ್ದಿದ್ದರು. 1962, 1967 ಹಾಗೂ 1978ರಲ್ಲಿ ಭಾರತೀಯ ಜನ ಸಂಘದ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. 1983, 1985 ಹಾಗೂ 1989ರಲ್ಲಿ ಕಾಂಗ್ರೆಸ್‌ನ ಎಂ.ಕೆ. ಕುಲಕರ್ಣಿ ಜಯ ಗಳಿಸಿದ್ದರು. 1985ರ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕಿಳಿದಿತ್ತು. 1994ರಲ್ಲಿ ಕೆಸಿಪಿಯಿಂದ ಹಾಗೂ 1999ರಲ್ಲಿ ಕಾಂಗ್ರೆಸ್‌ನಿಂದ ಕೆ.ಎನ್. ಗಡ್ಡಿ ಜಯ ಸಾಧಿಸಿದ್ದರು. 1999ರ ಚುನಾವಣೆಯಲ್ಲಿ ಬಿಜೆಪಿಯ ಡಾ. ಆರ್.ಬಿ. ಶಿರಿಯಣ್ಣವರ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಬಿಜೆಪಿಯ ಡಾ. ಆರ್.ಬಿ. ಶಿರಿಯಣ್ಣವರ 2004ರ ಚುನಾವಣೆಯಲ್ಲಿ ಹಾಗೂ ಶಂಕರ ಪಾಟೀಲ ಮುನೇನಕೊಪ್ಪ 2008ರ ಚುನಾವಣೆಯಲ್ಲಿ ಜಯ ಗಳಿಸಿದರು. ಈ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಕೆ.ಎನ್, ಗಡ್ಡಿ ಎರಡನೇ ಸ್ಥಾನಕ್ಕೆ ಕುಸಿದರು. 2004ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಂತಿದ್ದ ನವಲಗುಂದ ಕ್ಷೇತ್ರ, ಇದೀಗ ಪ್ರತಿಷ್ಠೆಯ ಕಣವಾಗಿದೆ. 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಡಾ. ಆರ್.ಬಿ. ಶಿರಿಯಣ್ಣವರ ಈ ಬಾರಿ ಕೆಜೆಪಿಯಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಶಂಕರ ಪಾಟೀಲ ಮತ್ತೊಮ್ಮೆ ಸ್ಪರ್ಧಿಸಿದ್ದು, ಕಾಂಗ್ರೆಸ್‌ನ ಕೆ.ಎನ್. ಗಡ್ಡಿ ಹಾಗೂ ಜೆಡಿಎಸ್‌ನ ಎನ್.ಎಚ್. ಕೋನರಡ್ಡಿ ಕಣದಲ್ಲಿರುವ ಇತರ ಸ್ಪರ್ಧಿಗಳು. ಹೀಗಾಗಿ ನವಲಗುಂದ ವಿಧಾನಸಭೆ ಕ್ಷೇತ್ರ ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಜಯಮಾಲೆ ಯಾರ ಕೊರಳಿಗೆ ಬೀಳಲಿದೆಯೆಂಬುದನ್ನು ಸಮಯವೇ ನಿರ್ಧರಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.