ಧಾರವಾಡ

ಜನಪರ ಚಿಂತನೆ ಇಲ್ಲದ ಕಾರಣ ಬಿಜೆಪಿಗೆ ರಾಜಿನಾಮೆ

Published On :

ಧಾರವಾಡ: ಬಿಜೆಪಿಯಲ್ಲಿ ಜನಪರ ಚಿಂತನೆ ಇಲ್ಲದ ಕಾರಣ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯೂಡಿಯೂರಪ್ಪ ನೂತನವಾಗಿ ಕಟ್ಟಿರುವ ಕೆಜೆಪಿಗೆ ಸೇರ್ಪಡೆಗೊಂಡಿದ್ದೆನೆ ಎಂದು ಧಾರವಾಡ 74ನೇ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ತಾವು ಮಾಡ ಬಯಸಿದ ಯಾವುದೇ ಜನಪರ ಕಾರ್ಯಗಳಿಗೆ ಸಮ್ಮತವಿರಲಿಲ್ಲ. ಅಲ್ಲದೇ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವಿರಲಿಲ್ಲ. ಹೀಗಾಗಿ ಯಡಿಯೂರಪ್ಪನವರ ಜನಪರ ಚಿಂತನೆಗಳನ್ನು ಕಂಡ ತಾವು ಕೆಜೆಪಿಗೆ ಸೇರಿದ್ದು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಪಶ್ವಿಮ ಕ್ಷೇತ್ರದ ಅಭ್ಯರ್ಥಿಯಾಗಿ ತಾವು ಆಯ್ಕೆಯಾಗಿದ್ದೇವೆ. ಈಗಾಗಲೇ ಪ್ರಚಾರ ಕೈಗೊಂಡಿದ್ದೇನೆ ಎಂದರು. ಈ ಕ್ಷೇತ್ರದಲ್ಲಿ ಹಿಂದೆ ಇದ್ದ ಶಾಸಕರು ಕ್ರೀಯಾಶೀಲರಾಗಿರಲಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಹೇಳಿಕೊಳ್ಳುವಷ್ಟು ಆಗಿಲ್ಲ. ಈ ಚುನಾವಣೆಯಲ್ಲಿ ತಮಗೆ ನೂರಕ್ಕೆ ನೂರರಷ್ಟು ಗೆಲವು ಖಚಿತ. ಈ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಅವರು ನನ್ನ ಪ್ರತಿಸ್ಪರ್ಧಿಯಲ್ಲ. ಅವರು ಉತ್ತಮ ಉದ್ಯಮಿಗಳಾಗಿದ್ದಾರೆ. ಅಲ್ಲದೇ, ಈ ಕ್ಷೇತ್ರದಿಂದ ಸ್ಪರ್ಧಿಸುವ ಯಾರು ತಮ್ಮ ಪ್ರತಿಸ್ಪರ್ಧಿಯಾಗಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗನಗೌಡ ನೀರಲಗಿ, ಪ್ರಕಾಶ ಜಕಾತಿ, ಲಕ್ಮಣ ಬೀಳಗಿ ಇದ್ದರು.
ಎಚ್‌ಡಿಎಂಸಿಯಿಂದ ಅಂಬೇಡ್ಕರ್ ಜಯಂತಿ
ಹುಬ್ಬಳ್ಳಿ: ಡಾ.ಬಿ.ಆರ್. ಅಂಬೇಡ್ಕರ್ ಅವರ 122ನೇ ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ನಗರದ ಸ್ಟೇಷನ್ ರಸ್ತೆಯಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಹಾನಗರ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ವಿಭಾಗದ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿ ಅಧಿಕಾರಿಗಳು ಸೇರಿದಂತೆ ಮಹಾನಗರ ಪಾಲಿಕೆ ಸಿಬ್ಬಂದಿ ಇತರರು ಇದ್ದರು. ನಂತರ ಕಿಮ್ಸ್ ಆವರಣದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಧಾರವಾಡ ನಗರದಲ್ಲಿ ಮಹಾನಗರ ಪಾಲಿಕೆ ಜಂಟಿ ಆಯುಕ್ತ ವಿರೇಂದ್ರ ಕುಂದಗೋಳ ಅವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಧಾರವಾಡ ವಿಭಾಗದ ಆಡಳಿತ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ವಲಯ ಕಚೇರಿಯ ಅಧಿಕಾರಿಗಳು ಇದ್ದರು.
ಅಂಬೇಡ್ಕರ್ ಜಯಂತಿ
ಕಲಘಟಗಿ: ಸ್ಥಳೀಯ ಜನತಾ ಇಂಗ್ಲೀಷ್ ಸ್ಕೂಲಿನಲ್ಲಿ ರಾಜ್ಯ ಪ.ಜಾತಿ, ಪ.ಪಂಗಡಗಳ ಒಕ್ಕೂಟ, ಜನರಾ ಇಂಗ್ಲಿಷ್ ಸ್ಕೂಲ್ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರ 122ನೇ ಜಯಂತಿಯನ್ನು ಆಚರಿಸಲಾಯಿತು. ಒಕ್ಕೂಟದ ಅಧ್ಯಕ್ಷ ಎಂ.ಎಸ್. ಕಾಟೆ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ದೇವರಮನಿ, ಎಂ.ಬಿ. ಕರ್ಲವಾಡ, ಎಫ್.ಬಿ. ತಳವಾರ, ಜೆ.ಎಫ್. ಉಣಕಲ್, ಡಿ.ಎಸ್. ಹೆಗಡೆ, ಯು.ಎಂ. ದಿವಟರ, ಎಸ್.ಕೆ. ಪಾಟೀಲ್‌ಕುಲಕರ್ಣಿ, ಡಿ.ಜಿ. ಪಾಟೀಲ, ಎಫ್.ಎಸ್. ನೂಲ್ವಿ, ಎಸ್.ಡಿ. ಪೂಜಾರ ಇದ್ದರು.

ಸತ್ಯಸಾಯಿ ಜಲವಾಹಿನಿ-13 ಉದ್ಘಾಟನೆ
ಹುಬ್ಬಳ್ಳಿ: ಹನ್ನೆರಡು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರು ಪೂರೈಸಿ ದಾಹ ತೀರಿಸುತ್ತಿರುವ ಸತ್ಯ ಸೇವಾ ಸಮಿತಿ ಈ ಬಾರಿ ಕೂಡ ಕುಡಿಯುವ ನೀರಿನ ಅರವಟ್ಟಿಗೆ ತೆರೆದಿದ್ದು, ಬೇಸಿಗೆಯಲ್ಲಿ ಬಸವಳಿಯುವ ಪ್ರಯಾಣಿಕರು ಇದ್ದಲ್ಲಿಯೇ ಕುಡಿಯುವ ನೀರು ಲಭ್ಯವಾಗಲಿದೆ.
ಭಾನುವಾರ, ಸತ್ಯಸೇವಾ ಸಮಿತಿಯ ಜಲವಾಹಿನಿಯನ್ನು ಉದ್ಘಾಟಿಸಿದ ನಾಡೋಜ ಪಾಟೀಲ ಪುಟ್ಟಪ್ಪ, ಭಗವಾನ್ ಸತ್ಯಸಾಯಿ ಬಾಬಾ ಜಲಕ್ಷಾಮ ಎದುರಿಸುತ್ತಿದ್ದ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ 13 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಅದೇ ಮಾದರಿಯನ್ನು ಇಟ್ಟುಕೊಂಡು ಇಲ್ಲಿನ ಸತ್ಯ ಸೇವಾ ಸಮಿತಿ ಪ್ರತಿ ಬೇಸಿಗೆಯಲ್ಲೂ ಪ್ರಯಾಣಿಕರಿಗೆ ಮತ್ತು ನಗರದ ವಿವಿಧ ಪ್ರದೇಶಗಳ ನಿವಾಸಿಗಳಿಗೆ ಉಚಿತವಾಗಿ ಕುಡಿಯುವ ನೀರು ಪೂರೈಸುತ್ತಿದೆ. ಸತ್ಯ ಸೇವಾ ಸಮಿತಿ ಕೈಗೆತ್ತಿಕೊಂಡಿರುವ ಈ ಸೇವೆಯನ್ನು ಪ್ರತಿದಿನ 5ರಿಂದ 6 ಸಾವಿರ ಜನರು ಪಡೆಯಲಿದ್ದಾರೆ. 12 ವರ್ಷಗಳಿಂದ ಐದಾರು ಲಕ್ಷ ಜನರ ದಾಹ ತೀರಿಸಲಾಗಿದೆ. ಬೇಸಿಗೆ ಮುಗಿಯುವವರೆಗೆ ನಡೆಯುವ ಈ ಸೇವಾ ಕೈಂಕರ್ಯದಲ್ಲಿ 15ರಿಂದ 16 ಸ್ವಯಂಸೇವಕರು ಪಾಲ್ಗೊಂಡು ಪ್ರಯಾಣಿಕರು ಇರುವಲ್ಲಿಗೇ ನೀರು ವಿತರಿಸಲಿದ್ದಾರೆ. ಸತ್ಯಸಾಯಿ ಜಲವಾಹಿನಿ-13ರ ಉದ್ಘಾಟನೆ ಸಂದರ್ಭದಲ್ಲಿ ನಾಗರಾಜ ಧಾರವಾಡಕರ್, ಎಚ್.ಎಲ್. ಕುಲಕರ್ಣಿ, ಬಿ.ಇ. ನವಲಿ ಮತ್ತು ಗಣೇಶ ಪೂಜಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.