ವಿನಯ್ ನಾಮಪತ್ರ ಸಲ್ಲಿಕೆ: ಅದ್ಧೂರಿ ಮೆರವಣಿಗೆ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 15
ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಶತಾಯ ಗತಾಯ ಈ ಬಾರಿ ಕಾಂಗ್ರೆಸ್ ಪತಾಕೆ ಹಾರಿಸಬೇಕೆಂದು ಪಣ ತೊಟ್ಟಿರುವ ಮಾಜಿ ಶಾಸಕ ವಿನಯ್ ಕುಲಕರ್ಣಿ ಸೋಮವಾರ ಮಧ್ಯಾಹ್ನ 1ರ ಸುಮಾರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಸಾವಿರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ನಗರಾದ್ಯಂತ ಮೆರವಣಿಗೆ ಮೂಲಕ ಆಗಮಿಸಿದ ವಿನಯ್ ಕುಲಕರ್ಣಿ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ತಮ್ಮ ಪತ್ನಿ ಹಾಗೂ ಕಾಂಗ್ರೆಸ್ನ ಇತರ ಮುಖಂಡರೊಂದಿಗೆ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಇಲ್ಲಿನ ಸವದತ್ತಿ ರಸ್ತೆ ಬಳಿಯ ಹಳೇ ಎಪಿಎಂಸಿಯ ಆವರಣದ ಈಶ್ವರ ದೇವಸ್ಥಾನ ಹಾಗೂ ಶೆಕತ್ವಾಲಿ ದರ್ಗಾಕ್ಕೆ ವಿನಯ್ ಕುಲಕರ್ಣಿ ಮಾಲಾರ್ಪಣೆ ಮಾಡುವ ಮೂಲಕ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಚಾಲನೆ ನೀಡಿದರು. ಅಲ್ಲಿಂದ ಸಾವಿರಾರೂ ಕಾರ್ಯಕರ್ತರೊಂದಿಗೆ ಬಸ್ ಡೀಪೋ ಸರ್ಕಲ್ಗೆ ಆಗಮಿಸಿದ ಅವರನ್ನು ಅಲ್ಲಿನ ಕಾಂಗ್ರೆಸ್ ಮುಖಡಂರಾದ ನಿಜಾಮುದ್ದೀನ್ ರಾಹಿ ಹಾಗೂ ಅವರ ಬೆಂಬಲಿಗರು ಮಾಲಾರ್ಪಣೆ ಮಾಡಿ ಶುಭ ಹಾರೈಸಿದರು.
ಬಳಿಕ ತೆರೆದ ವಾಹನದ ಏರಿದ ವಿನಯ್ ಅವರಿಗೆ ನಾಮಪತ್ರ ಸಲ್ಲಿಕೆ ದಿನದಂದೆ ಅಪಾರ ಪ್ರಮಾಣದ ಜನ ಬೆಂಬಲ ವ್ಯಕ್ತವಾಗಿದ್ದು, ಸಂತಸಗೊಳಿಸಿತು. ಇದೇ ಸಂತಸದಲ್ಲಿ ಕೆಲ ಕಾಲ ಕಾರ್ಯಕರ್ತರೊಂದಿಗೆ ಅವರು ಪಾದಯಾತ್ರೆ ನಡೆಸಿದರು.
ಬಿಸಿಲಿನ ಪ್ರಭಾವದಿಂದ ಕಾರ್ಯಕರ್ತರಲ್ಲಿ ಬಾಯಾರಿಕೆ ನೀಗಿಸಲು ಕೆಲವು ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಹೆಬ್ಬಳ್ಳಿ ಅಗಸಿ, ಕಾಮನಕಟ್ಟಿ ಹೊಸಾಯಲ್ಲಾಪೂರ, ಲೈನ್ ಬಜಾರ್ ಮಾರ್ಗವಾಗಿ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯ ಆವರಣ ಪ್ರವೇಶಿಸಿತು. ಮೆರವಣಿಗೆ ಬರುವ ಸಂದರ್ಭ ಇಲ್ಲಿನ ಹೊಸಯಲ್ಲಾಪೂರ ಓಣಿಯ ವಿನಯ್ ಕುಲಕರ್ಣಿ ಅಭಿಮಾನಿ ಬಳಗದವರು ಮೆರವಣಿಗೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಬೆಂಬಲಿಗರಿಗೆ ಪಾನಕ ವ್ಯವಸ್ಥೆ ಕಲ್ಪಿಸಿದ್ದರು. ಸುಮಾರು 15ರಿಂದ 20 ಸಾವಿರ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಮಹಿಳೆಯರಂತೂ ಭಾರಿ ಉತ್ಸಾಹದಿಂದ ಮೆರವಣೆಯಲ್ಲಿ ಪಾಲ್ಗೊಂಡಿದ್ದೂ ಇನ್ನು ವಿಶೇಷವಾಗಿತ್ತು.
ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಹುರಿಯಾಳಾಗಿ ನಿಂತಿರುವ ವಿನಯ್ ಕುಲಕರ್ಣಿ ಅವರ ಮೇಲಿನ ಅಭಿಮಾನದಿಂದ ಸ್ವ-ಇಚ್ಚೆಯಿಂದ ಸುಮಾರು 5 ಹಳ್ಳಿಗಳಿಂದ ಅನೇಕ ಕಾರ್ಯಕರ್ತರು ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವಿಜಯ ಕುಲಕರ್ಣಿ, ಚಂದ್ರಶೇಖರ ಮೂಗಬಸದ, ಸುಭಾಸ ಶಿಂಧೆ, ಶರಣಪ್ಪ ಕೊಟಗಿ, ಪಾಶ್ವನಾಥ ಪತ್ರಾವಳಿ, ಕವಿತಾ ಕಟ್ಟಿ, ನಿರ್ಮಲಾ ಹೊಂಗಲ್, ಶಿವಶಂಕರ ಹಂಪಣ್ಣವರ, ಪ್ರಕಾಶ ಘಾಟಗೆ, ರವಿ ಬಿಜಲಿ, ಶಿವಾಜಿ ಪಾಗಲೆ, ಆನಂದ ಕೇಶಗೊಂಡ, ಬಸವರಾಜ ರೋಣದ, ಆನಂದ ಸಿಂಗನಾಥ್, ಪಾಪು ಪವಾರ, ರಾಜೇಸಾನ ರಾಯಚೂರ ಮತ್ತಿತರರು ಇದ್ದರು.
ಮತಕ್ಕಾಗಿ ಗುಡಿಗಳಿಗೆ ಅನುದಾನ...
ನಾಮಪತ್ರ ಸಲ್ಲಿಸುವ ದಿನವೇ ನನಗೆ ಇಷ್ಟೊಂದು ಜನರ ಬೆಂಬಲ ಸಿಕ್ಕಿರುವುದು ತೀರಾ ಸಂತಸ ತಂದಿದೆ. ವಿಶೇಷವಾಗಿ ಮಹಿಳೆಯರ ಸಂಖ್ಯೆ ಜಾಸ್ತಿ ಇರುವುದು ಇನ್ನಷ್ಟು ಹುಮ್ಮಸ್ಸು ತಂದಿದೆ. ಶಾಸಕಿ ಸೀಮಾ ಮಸೂತಿ ಅವರ ವಿಫಲತೆಗಳು ಸಾಕಷ್ಟಿದ್ದು, ಅವರ ವಿರುದ್ಧ ಪ್ರಚಾರ ಬೇಕಾಗಿಲ್ಲ. ಅವರನ್ನು ಜನರೇ ಸೋಲಿಸುತ್ತಾರೆ. ಬಿಜೆಪಿ ಸರ್ಕಾರ ಮತಕ್ಕಾಗಿ ಗುಡಿ-ಗುಡಾರಗಳಿಗೆ ಕೋಟಿಗಟ್ಟಲೆ ಅನುದಾನ ನೀಡುವುದಾಗಿ ಘೋಷಿಸಿತು. ಆದರೆ, ಈ ಅನುದಾನ ಕೊಡಲು ಬಿಜೆಪಿ ಸರ್ಕಾರಕ್ಕೆ ಖಂಡಿತಾ ಆಗೋದಿಲ್ಲ. ಪ್ರಸ್ತುತ ನಾಮಪತ್ರ ಸಲ್ಲಿಸಿದ್ದು, ಕ್ಷೇತ್ರದಲ್ಲಿ ಈಗಾಗಲೇ ಒಂದು ಬಾರಿ ಪ್ರಚಾರ ಮಾಡಿದ್ದೇನೆ. ಬರುವ ದಿನಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಜನರ ಮನಸ್ಸು ಗೆದ್ದು ಈ ಬಾರಿಯ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತೇನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

