ಧಾರವಾಡ

ಚಾಕೋ ಹೋದರೆ ಮಾತ್ರ ಸುಗಮ ಕಲಾಪ

Published On :

ಕನ್ನಡಪ್ರಭ ವಾರ್ತೆ  ,   ಹುಬ್ಬಳ್ಳಿ  ,   ಏ.28
ಸಂಸತ್ತಿನ ಬಜೆಟ್ ಅಧಿವೇಶನ ಸುಗಮವಾಗಿ ನಡೆಯಬೇಕು ಎಂದರೆ ಕೇಂದ್ರ ಸರ್ಕಾರ, ಜೆಪಿಸಿ ಅಧ್ಯಕ್ಷ ಸ್ಥಾನದಿಂದ ಪಿ.ಸಿ. ಚಾಕೋ ಅವರನ್ನು ಕೆಳಗಿಳಿಸಬೇಕು ಮತ್ತು ಕಲ್ಲಿದ್ದಲು ಹಗರಣ ಕುರಿತು ಸಿಬಿಐ ವರದಿ ಪರಿಶೀಲಿಸಿದ ಕಾನೂನು ಸಚಿವ ಅಶ್ವನಿಕುಮಾರ್ ರಾಜಿನಾಮೆ ನೀಡಬೇಕು ಎಂದು ಲೋಕಸಭೆ ಪ್ರತಿಪಕ್ಷ ಹಾಗೂ ಬಿಜೆಪಿಯ ಪ್ರಮುಖ ನಾಯಕಿ ಸುಷ್ಮಾ ಸ್ವರಾಜ್ ಹೇಳಿದರು.
ಭಾನುವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪ್ರತಿಪಕ್ಷದ ಈ ಎರಡೂ ಬೇಡಿಕೆಗಳು ಈಡೇರಿದ ಮೇಲಷ್ಟೇ ಸಂಸತ್ತಿನ ಕಲಾಪಗಳಲ್ಲಿ ಪಾಲ್ಗೊಳ್ಳುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು' ಎಂದರು.
ಹಗರಣದ ಪ್ರಮುಖ ಆರೋಪಿ ಎ. ರಾಜಾ ಅವರ ಸ್ಪಷ್ಟೀಕರಣವನ್ನು ಪಡೆಯಬೇಕು ಎಂದು ಜಂಟಿ ಸಂಸದೀಯ ಸಮಿತಿ ಸದಸ್ಯರು ಹಲವಾರು ಬಾರಿ ಚಾಕೋ ಅವರನ್ನು ಕೇಳಿಕೊಂಡಿದ್ದರೂ ರಾಜಾ ಅವರಿಗೆ ಜೆಪಿಸಿ ಎದುರು ಹೇಳಿಕೆ ನೀಡುವುದಕ್ಕೆ ಅವಕಾಶ ನೀಡಿಲ್ಲ. 30 ಸದಸ್ಯರನ್ನು ಒಳಗೊಂಡಿರುವ ಸಂಸದೀಯ ಸಮಿತಿಯ ಸದಸ್ಯರ ಪೈಕಿ ಅರ್ಧದಷ್ಟು ಸದಸ್ಯರು ಜೆಪಿಸಿ ಅಧ್ಯಕ್ಷ ಚಾಕೋ ಸಿದ್ಧಪಡಿಸಿರುವ ವರದಿಗೆ ವಿರುದ್ಧವಾಗಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮತ್ತು ಹಣಕಾಸು ಸಚಿವರು ಜೆಪಿಸಿ ಎದುರು ಹಾಜರಾಗಬೇಕು ಎಂದು ಹೇಳಿದ್ದರೂ ಚಾಕೋ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಅಲ್ಲದೇ ಜೆಪಿಸಿ ಸದಸ್ಯರಿಗೆ ವರದಿ ವಿತರಿಸುವ ಮೊದಲೇ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಅವರು ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಾಗಿ ಮುಂದುವರಿಯುವುದಕ್ಕೆ ನೈತಿಕ ಹಕ್ಕು ಇಲ್ಲ. ಜೆಪಿಸಿಗೆ ಬೇರೆ ಹಿರಿಯ ಸಂಸದರನ್ನು ನೇಮಕ ಮಾಡಬೇಕು. ಅಲ್ಲಿಯವರೆಗೆ ಸಂಸತ್ತಿನ ಕಲಾಪ ಸುಗಮವಾಗಿ ನಡೆಯುವುದಕ್ಕೆ ಪ್ರತಿಪಕ್ಷ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದರು.
ಅಶ್ವನಿಕುಮಾರ್ ರಾಜಿನಾಮೆ ನೀಡಬೇಕು: ಸುಪ್ರೀಂ ಕೋರ್ಟ್ ನಿರ್ದೇಶನದಲ್ಲಿ ಸಿಬಿಐ ಕಲ್ಲಿದ್ದಲು ಹಗರಣದ ತನಿಖೆ ಮಾಡುತ್ತಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತಲೆ ಹಾಕುವ ಅಗತ್ಯವೇ ಇಲ್ಲ. ಆದಾಗ್ಯೂ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಸಿಬಿಐ ಸಲ್ಲಿಸಬೇಕಿದ್ದ ವರದಿಯನ್ನು ಕೇಂದ್ರ ಕಾನೂನು ಸಚಿವಾಲಯ ಮತ್ತು ಪ್ರಧಾನಿ ಮಂತ್ರಿ ಕಚೇರಿ ಅಧಿಕಾರಿಗಳು ಪರಿಶೀಲಿಸಿದ್ದು ತಪ್ಪು. ಕೇಂದ್ರ ಕಾನೂನು ಸಚಿವ ಅಶ್ವನಿಕುಮಾರ್ ಮತ್ತು ಪ್ರಧಾನಿ ಮನ್‌ಮೋಹನ್‌ಸಿಂಗ್ ಈ ತಪ್ಪಿಗೆ ರಾಜಿನಾಮೆ ನೀಡಬೇಕು. ಆದರೆ ಸರ್ಕಾರ ಮಾತ್ರ ಪ್ರತಿಪಕ್ಷದ ಪ್ರಶ್ನೆಗಳಿಗೆ ಮತ್ತು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಉತ್ತರಿಸುವ ಸ್ಥಿತಿಯಲ್ಲಿಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೆ ಸುಗಮವಾಗಿ ಕಲಾಪ ನಡೆಯುವುದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.