ಧಾರವಾಡ

ವೀರಶೈವರಿಗೆ ಮಣೆ ಹಾಕ್ತಾರಾ ಮತದಾರರು?

Published On :

ಹುಬ್ಬಳ್ಳಿ:  ಚುನಾವಣೆ ಅಂತಿಮ ಘಟ್ಟ ತಲುಪುತ್ತಿದೆ ಎನ್ನುತ್ತಿರುವಾಗಲೇ ನವಲಗುಂದ ವಿಧಾನಸಭೆ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಶುರುವಾಗಿದೆ. ಪಕ್ಷವನ್ನು ಪಕ್ಕಕ್ಕೆ ಸರಿಸಿ ಜಾತಿಯನ್ನೇ ಮುಂದಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡುವ ಕುರಿತು ಕಳೆದು ಕೂಡಿಸುವ ಕಾರ್ಯ ಕ್ಷೇತ್ರದಲ್ಲಿ ನಡೆದಿದೆ.
ನಿಜ, ರೈತ ಬಂಡಾಯದ ಮೂಲಕ ಗಮನ ಸೆಳೆದಿರುವ ನವಲಗುಂದದಲ್ಲಿ ಚುನಾವಣೆಯೂ ಅಷ್ಟೇ ಗಮನ ಸೆಳೆಯುತ್ತದೆ. ಜಿಲ್ಲೆ ಮಟ್ಟಿಗೆ ತುರುಸು ಹಾಗೂ ಕಾವು ಪಡೆದ ಕ್ಷೇತ್ರಗಳಲ್ಲಿ ನವಲಗುಂದವೂ ಒಂದು. ಈ ನೆಲದಲ್ಲಿ ನಡೆದಿರುವ ರಾಜಕೀಯ ಜಿದ್ದಾಜಿದ್ದಿಯಲ್ಲಿ ಈದೀಗ ಜಾತಿ ರಾಜಕಾರಣ ಉತ್ತುಂಗಕ್ಕೇರಿದೆ ಎನ್ನಲೇಬೇಕು.
ಕಣದಲ್ಲಿರುವ ಪ್ರಮುಖರು: ಹಾಲಿ ಶಾಸಕ ಬಹುಸಂಖ್ಯಾತ ಲಿಂಗಾಯತ ಸಮುದಾಯಕ್ಕೆ ಸೇರಿದ ಶಂಕರಪಾಟೀಲ ಮುನೇನಕೊಪ್ಪ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಕೆ.ಎನ್. ಗಡ್ಡಿ ಸ್ಪರ್ಧಿಸಿದ್ದು, ಇವರು ಕುರುಬ ಸಮುದಾಯಕ್ಕೆ ಸೇರಿದವರು. ಜೆಡಿಎಸ್‌ನಿಂದ ಸ್ಪರ್ಧಿಸಿರುವ ಎನ್.ಎಚ್. ಕೋನರಡ್ಡಿ ಕ್ಷೇತ್ರದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ರಡ್ಡಿ ಸಮುದಾಯಕ್ಕೆ ಸೇರಿದವರು. ಮಾಜಿ ಶಾಸಕ ಡಾ೤ ಆರ್.ಬಿ. ಶಿರಿಯಣ್ಣವರ ಲಿಂಗಾಯತರಾಗಿದ್ದು, ಕೆಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ. ಇನ್ನುಳಿದಂತೆ ಪಕ್ಷೇತರರಾಗಿ ಲಿಂಗಾಯತ ಸಮುದಾಯದವರಾದ ಸುಭಾಷಚಂದ್ರಗೌಡ ಪಾಟೀಲ, ಬಿಎಸ್ಸಾರ್ ಕಾಂಗ್ರೆಸ್‌ನಿಂದ ಶಂಭುಸಿದ್ದ ರಾಮಶೆಟ್ಟರ್, ಕುರುಬ ಸಮುದಾಯದ ಕರಿಗಾರ ಪಕ್ಷೇತರರಾಗಿ ಕಣದಲ್ಲಿದ್ದಾರೆ.
ಅಭಿವೃದ್ಧಿಯ ಶಕೆ: ಕಳೆದ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಶಂಕರಪಾಟೀಲ ಮುನೇನಕೊಪ್ಪ ಶಾಸಕರಾಗಿ ಆಯ್ಕೆಯಾಗಿದ್ದಲ್ಲದೇ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು. ಪರಿಣಾಮ ಕ್ಷೇತ್ರಕ್ಕೆ ಭರಪೂರ ಅನುದಾನ ತರುವಲ್ಲಿ ಸಫಲರಾದರು. ಇಡೀ ಧಾರವಾಡ ಜಿಲ್ಲೆಯಲ್ಲಿ ನವಲಗುಂದ ಕ್ಷೇತ್ರ ಅತೀ ಹೆಚ್ಚು ಅನುದಾನ ಪಡೆಯುವುದರೊಂದಿಗೆ ಅಭಿವೃದ್ಧಿ ಕೊಂಡುಕೊಂಡ ಕ್ಷೇತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕುಡಿಯುವ ನೀರು, ರಸ್ತೆ, ಇತರ ಮೂಲಸೌಕರ್ಯ ಸಮಸ್ಯೆ ಎದುರಿಸುತ್ತಿದ್ದ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಅಭಿವೃದ್ಧಿ ಕಾರ್ಯಗಳಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದಾಗ್ಯೂ ಜನ ಅಭಿವೃದ್ಧಿ ರಾಜಕಾರಣಕ್ಕೆ ಮನ್ನಣೆ ನೀಡುತ್ತಾರೆ ಎಂದು ಹೇಳಲಾಗದು. ಜಾತಿ ಲೆಕ್ಕಾಚಾರ ಕೂಡ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕೆಲಸ ಮಾಡೇ ಮಾಡುತ್ತದೆ.
ವೀರಶೈವರಿಗೆ ಮಣೆ: ಕ್ಷೇತ್ರದ ಇತಿಹಾಸವನ್ನು ಒಮ್ಮೆ ಮೆಲಕು ಹಾಕಿದಾಗ ವೀರಶೈವರಿಗೇ ಮತದಾರರು ಮಣೆ ಹಾಕಿರುವುದು ಗಮನಾರ್ಹ. 1957ರ ಚುನಾವಣೆಯಿಂದ ಲಿಂಗಾಯತ ಸಮುದಾಯಕ್ಕೆ ಸೇರಿದ ಆರ್.ಎಂ. ಪಾಟೀಲ ಸತತ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಇದೇ ಸಮುದಾಯಕ್ಕೆ ಸೇರಿದ ಎಂ.ಕೆ. ಕುಲಕರ್ಣಿ, ಎಸ್.ಪಿ. ಪಾಟೀಲ, ಆರ್.ಬಿ. ಶಿರಿಯಣ್ಣವರ ಹಾಗೂ ಕಳೆದ ಚುನಾವಣೆಯಲ್ಲಿ ಶಂಕರಪಾಟೀಲ ಮುನೇನಕೊಪ್ಪ ಅವರನ್ನು ಜನ ಆಯ್ಕೆ ಮಾಡಿದ್ದರು. ಈ ಮಧ್ಯೆ 1994, 99ರ ಚುನಾವಣೆಯಲ್ಲಿ ಮಾತ್ರ ಕ್ಷೇತ್ರದ ಮತದಾರರು ಜಾತಿ ಲೆಕ್ಕಾಚಾರ ಬಿಟ್ಟು ಕುರುಬ ಸಮುದಾಯಕ್ಕೆ ಸೇರಿದ ಕೆ.ಎನ್. ಗಡ್ಡಿಯವರನ್ನು ಆಯ್ಕೆ ಮಾಡಿದ್ದು ಗಮನಾರ್ಹ. ಇನ್ನುಳಿದ 10 ಬಾರಿ ನಡೆದ ಚುನಾವಣೆಯಲ್ಲಿ ಮತದಾರರು ಲಿಂಗಾಯತ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದ್ದರು.
ಈ ಬಾರಿಯೂ ಮಣೆ ಹಾಕ್ತಾರಾ?: ಜಾತಿ ಲೆಕ್ಕಾಚಾರ ಕೆಲಸ ಮಾಡಿದ ಕ್ಷೇತ್ರದಲ್ಲಿ ಈ ಬಾರಿಯೂ ವೀರಶೈವರಿಗೆ ಮತದಾರರು ಮಣೆ ಹಾಕ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಒಂದು ವೇಳೆ ಹೌದು ಎನ್ನುವುದಾದರೆ ಮುನೇನಕೊಪ್ಪ ಅವರಿಗೆ ಜಾತಿ ಲೆಕ್ಕಾಚಾರ ಪ್ಲಸ್ ಪಾಯಿಂಟ್ ಆಗಲಿದೆ. ಕೆಜೆಪಿ ಅಭ್ಯರ್ಥಿ ಡಾ೤ ಆರ್.ಬಿ. ಶಿರಿಯಣ್ಣವರ ಲಿಂಗಾಯತರಾಗಿದ್ದರೂ ಸಮುದಾಯದೊಂದಿಗೆ ಅಷ್ಟೊಂದು ಬೆರೆಯದ ಸ್ವಭಾವದವರು. ಜತೆಗೆ ಶಿರಿಯಣ್ಣವರ 'ನಾನು ಲಿಂಗಾಯತ ಮುಖಂಡನಲ್ಲ' ಎಂದು ಬಹಿರಂಗ ಹೇಳಿಕೆ ನೀಡಿರುವುದು ಲಿಂಗಾಯತರಲ್ಲಿ ಇರಿಸುಮುರಿಸುಂಟು ಮಾಡಿದೆ. ಹೀಗಾಗಿ ಬಹುಸಂಖ್ಯಾತ ಲಿಂಗಾಯತರು ಮುನೇನಕೊಪ್ಪ ಪರ ಒಲವು ತೋರಿಸಬಹುದು.
ಇನ್ನು ಕ್ಷೇತ್ರದಲ್ಲಿ ಕುರುಬರು ಎರಡನೇ ಅತೀ ದೊಡ್ಡ ಸಮುದಾಯದವರಾಗಿದ್ದು, ಈ ಸಮುದಾಯದ ಕೆ.ಎನ್. ಗಡ್ಡಿ ಕಾಂಗ್ರೆಸ್ ಅಭ್ಯರ್ಥಿ. ಕುರುಬ ಸೇರಿದಂತೆ ಇನ್ನುಳಿದ ಮತಗಳನ್ನು ಸೆಳೆದರೆ ಗಡ್ಡಿಯವರಿಗೂ ಪ್ಲಸ್ ಆಗಬಹುದು. ಜೆಡಿಎಸ್ ಅಭ್ಯರ್ಥಿ ಕೋನರಡ್ಡಿ ರಡ್ಡಿ ಸಮುದಾಯಕ್ಕೆ ಸೇರಿದ್ದರೂ ರಡ್ಡಿಗಳು ನಿರ್ಣಾಯಕ ಸಂಖ್ಯೆಯಲಿಲ್ಲ, ಹೀಗಾಗಿ ಕೋನರಡ್ಡಿ ಪರ ಜಾತಿ ಲೆಕ್ಕಾಚಾರ ಕೆಲಸ ಮಾಡದು.
ಒಟ್ಟಾರೆ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ನಡೆದಿದೆ. ಪರಂಪರೆಯಾಗಿ ನಡೆದುಕೊಂಡು ಬಂದಿರುವಂತೆ ವೀರಶೈವರಿಗೆ ಈ ಬಾರಿ ಮತದಾರರು ಮಣೆ ಹಾಕ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.