ಬಹಿರಂಗ ಪ್ರಚಾರಕ್ಕೆ ಉಳಿದಿದ್ದು ಮೂರೇ ದಿನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 30
ಸಿನಿ ತಾರೆಯರು ಹಾಗೂ ರಾಷ್ಟ್ರ-ರಾಜ್ಯ ಮಟ್ಟದ ನಾಯಕರನ್ನು ಕ್ಷೇತ್ರಕ್ಕೆ ಕರೆಯಿಸಿ ಮತದಾರರ ಓಲೈಸುವ ಅಭ್ಯರ್ಥಿಗಳ ಪ್ರಯತ್ನಕ್ಕೆ ಇನ್ನೂ ಬಾಕಿ ಉಳಿದಿರುವುದು ಕೇವಲ ಮೂರೇ ದಿನ.
ಹೌದು, ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಮೇ 3 ಅಂತಿಮ ದಿನ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಯಾಚಿಸುವ ಮಧ್ಯೆಯೇ ಸೆಲೆಬ್ರೆಟಿಗಳನ್ನು ತಮ್ಮ ಕ್ಷೇತ್ರಕ್ಕೆ ಕರೆಯಿಸುವ ಮೂಲಕ ಮತದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ.
ಮತದಾನಕ್ಕೆ 5 ದಿನ ಬಾಕಿ ಇದ್ದು, ಈ ಅವಧಿಯಲ್ಲಿ ಅತಿ ಹೆಚ್ಚು ಮತದಾರರನ್ನು ತಲುಪಬೇಕೆಂಬ ಪ್ರಯತ್ನ ಅಭ್ಯರ್ಥಿಗಳದ್ದು. ಆದರೆ, ಬಹಿರಂಗ ಪ್ರಚಾರಕ್ಕೆ ಮೇ 3 ಕೊನೆಯ ದಿನವಾಗಿದ್ದರಿಂದ ಈ ಅವಧಿಯೊಳಗಾಗಿ ಅಭ್ಯರ್ಥಿಗಳು ತಾವು ಸ್ಪರ್ಧಿಸಿರುವ ಕ್ಷೇತ್ರಗಳಿಗೆ ಸಿನಿ ತಾರೆಯರು ಹಾಗೂ ರಾಷ್ಟ್ರ-ರಾಜ್ಯ ನಾಯಕರನ್ನು ಕರೆಯಿಸುವ ಕೊನೆಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಮೇ 3ರ ಅನಂತರ ಮನೆ ಮನೆಗೆ ತೆರಳಿ, ಮತ ಯಾಚನೆ ಮಾಡಬಹುದೇ ಹೊರತು ಬಹಿರಂಗ ಪ್ರಚಾರಕ್ಕೆ ಅವಕಾಶ ಇಲ್ಲ. ಇನ್ನುಳಿದ ಮೂರು ದಿನಗಳಲ್ಲೇ ಅಭ್ಯರ್ಥಿಗಳು ಸೆಲೆಬ್ರಿಟಿಗಳನ್ನು ಕ್ಷೇತ್ರಕ್ಕೆ ಕರೆಯಿಸಲು ಅಂತಿಮ ಅವಕಾಶ.
ಚಿತ್ರರಂಗದ ವಿವಿಧ ತಾರೆಯರು ಹಲವು ಕ್ಷೇತ್ರಗಳಿಗೆ ಭೇಟಿ ನೀಡಿ, ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ನಡೆಸಿದ್ದಾರೆ. ಸಿನಿ ತಾರೆಯರಾದ ದರ್ಶನ್ ಬೇರೆ ಬೇರೆ ಪಕ್ಷಗಳ ಅಭ್ಯರ್ಥಿಗಳ ಪ್ರಚಾರ ನಡೆಸಿದರೆ, ಶೃತಿ ಕೆಜೆಪಿ ಅಭ್ಯರ್ಥಿಗಳ ಪರವಾಗಿ, ರಕ್ಷಿತಾ ಜೆಡಿಎಸ್, ಪೂಜಾ ಗಾಂಧಿ ಬಿಎಸ್ಆರ್, ಭಾವನಾ ಕಾಂಗ್ರೆಸ್, ಜಗ್ಗೇಶ ಹಾಗೂ 'ಮುಖ್ಯಮಂತ್ರಿ' ಚಂದ್ರು ಬಿಜೆಪಿ ಅಭ್ಯರ್ಥಿಗಳ ಪರ, ತೆಲುಗು ನಟ ಹಾಗೂ ಕೇಂದ್ರ ಸಚಿವ ಚಿರಂಜೀವಿ ಕಾಂಗ್ರೆಸ್ ಅಭ್ಯರ್ಥಿಗಳ ಪರ, ಹೀಗೆ ವಿವಿಧ ತಾರೆಯರು ಪ್ರಚಾರದಲ್ಲಿ ನಿರತರಾಗಿದ್ದಾರೆ.
ಇನ್ನೂ ರಾಷ್ಟ್ರಮಟ್ಟದ ನಾಯಕರಾದ ಪ್ರಧಾನಿ ಮನಮೋಹನ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ಎಂ. ವೀರಪ್ಪ ಮೋಯ್ಲಿ, ಮಲ್ಲಿಕಾರ್ಜುನ ಖರ್ಗೆ, ಸೂರ್ಯನಾರಾಯಣ ರೆಡ್ಡಿ, ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಕ್ರಿಕೆಟ್ಪಟು ಮೊಹ್ಮದ ಅಜರುದ್ದೀನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮಧುಸೂಧನ ಮೇಸ್ತ್ರಿ, ಮಾಜಿ ಸಿಎಂ ಎಸ್.ಎಂ. ಕೃಷ್ಣ ಕಾಂಗ್ರೆಸ್ ಅಭ್ಯರ್ಥಿಗರ ಪರವಾಗಿ ಮತ ಯಾಚಿಸಿದ್ದಾರೆ.
ಬಿಜೆಪಿ ನಾಯಕರಾದ ಮಾಜಿ ಉಪ ಪ್ರಧಾನಿ ಎಲ್.ಕೆ. ಆಡ್ವಾಣಿ, ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ, ಸಂಸದರಾದ ಅರುಣ ಜೇಟ್ಲಿ, ಅನಂತಕುಮಾರ, ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ ಸಿಂಗ್, ಉಪಾಧ್ಯಕ್ಷ ವೆಂಕಯ್ಯ ನಾಯ್ಡು, ಬಿಎಸ್ಪಿ ಅಭ್ಯರ್ಥಿಗಳ ಪರವಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಸೇರಿದಂತೆ ಹಲವಾರು ನಾಯಕರು ರಾಜ್ಯದ ವಿವಿಧೆಡೆ ಪ್ರಚಾರ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ಅನೇಕರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಬಹಿರಂಗ ಪ್ರಚಾರಕ್ಕೆ ಉಳಿದಿರುವ ಮೂರು ದಿನಗಳ ಅವಧಿಯಲ್ಲಿ ಈ ನಾಯಕರು ಹಾಗೂ ಸಿನಿ ತಾರೆಯರಿಗೆ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವಂತೆ ಅಭ್ಯರ್ಥಿಗಳು ದುಂಬಾಲು ಬಿದ್ದಿದ್ದಾರೆ. ಹೀಗಾಗಿ ಸೆಲೆಬ್ರೆಟರಿಗಳು ಸಹ ದಿನವೊಂದಕ್ಕೆ ಐದಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಥವಾ ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡು ಪ್ರಚಾರ ನಡೆಸುತ್ತಿದ್ದಾರೆ.
- ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

