ಮೂರೇ ತಿಂಗಳಲ್ಲಿ ಹತ್ತು ಸಾವಿರ ವಾಹನ ರಸ್ತೆಗೆ
-ಸತೀಶ ಪಾಗಾದ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 2
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಇಂದು ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆ ಉಂಟಾಗಲು ಕಾರಣ ಮೀತಿ ಮೀರಿ ಬೆಳೆಯುತ್ತಿರುವ ವಾಹನಗಳ ಸಂಖ್ಯೆ.
ಹೌದು, ನೋಡ ನೋಡುತ್ತಿದ್ದಂತೆ ಅವಳಿ ನಗರದಲ್ಲಿ ವಾಹನ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಕಳೆದ 3 ತಿಂಗಳ ಅವಧಿಯಲ್ಲಿ ಸಾರಿಗೆ ಮತ್ತು ಸಾರಿಗೇತರ ವಾಹನಗಳು ಧಾರವಾಡ ಸಾರಿಗೆ ಕಚೇರಿಯಲ್ಲಿ ನೋಂದಣಿಯಾದ ಒಟ್ಟು ವಾಹನಗಳ ಸಂಖ್ಯೆ 9,792.
ಸರಾಸರಿ ಲೆಕ್ಕ ಹಾಕಿದರೆ ಪ್ರತಿ ತಿಂಗಳು 2 ಸಾವಿರ ವಾಹನಗಳು ರಸ್ತೆಗಿಳಿಯುತ್ತಿವೆ. ಈ ಅಂಕಿ-ಅಂಶ ಏಪ್ರಿಲ್ನಿಂದ ಜುಲೈ ವರೆಗಿನದು ಮಾತ್ರ. ದೀಪಾವಳಿ, ಗಣೇಶ ಚತುರ್ಥಿ ಮತ್ತು ಯುಗಾದಿಯಂದು ಖರೀದಿಸುವ ಬೈಕ್ ಮತ್ತು ಕಾರುಗಳ ಸಂಖ್ಯೆ ದುಪ್ಪಟ್ಟು ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ವಾಹನಗಳ ನೋಂದಣಿ ಬಿಟ್ಟು ಬೇರೆ ಕೆಲಸ ಸಾರಿಗೆ ಅಧಿಕಾರಿಗಳಿಂದ ಆಗುವುದೇ ಇಲ್ಲ.
ತಲ್ಲಣಿಸಿದ ನಗರ: ಮೀತಿ ಮಿರಿ ಹೆಚ್ಚಾಗುತ್ತಿರುವ ವಾಹನಗಳಿಗೆ ತಕ್ಕಂತೆ ಕಳೆದ ಹತ್ತು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆ ಆಗಿಲ್ಲ. ಒಂದೆಡೆ ಅತಿಯಾಗಿ ಬೆಳೆಯುತ್ತಿರುವ ವಾಹನಗಳು ಇನ್ನೊಂದೆಡೆ ಕಿರಿದಾದ ಇಕ್ಕಟ್ಟಾದ ರಸ್ತೆಗಳು, ಮಗದೊಂದು ಕಡೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ನಿತ್ಯ ಸರಕು ಸಾಮಗ್ರಿ ಹೊತ್ತುಕೊಂಡು ಬರುವ ಸಾವಿರಾರು ಲಾರಿಗಳು, ಸರ್ಕಾರಿ, ಖಾಸಗಿ ಪ್ರಯಾಣಿಕ ಸಾರಿಗೆ ಬಸ್ಗಳು ಸೇರಿಕೊಂಡು ಅವಳಿ ನಗರವನ್ನೇ ತಲ್ಲಣಗೊಳಿಸಿವೆ.
ಸುಧಾರಿಸಿದ ವ್ಯವಸ್ಥೆ: ಕಳೆದ ಹತ್ತು ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 101 ಸ್ಥಳಗಳನ್ನು ಪಾರ್ಕಿಂಗ್ ಝೋನ್ ಮಾಡಿತ್ತು. ಅಂದಿನಿಂದ ಇಂದಿನವರೆಗೆ ಮತ್ತೆ ಹೊಸ ಪಾರ್ಕಿಂಗ್ ಝೋನ್ಗಳು ಅವಳಿ ನಗರದಲ್ಲಿ ಹುಟ್ಟಿಕೊಂಡಿಲ್ಲ. ಕೋರ್ಟ್ ಸರ್ಕಲ್ ಬಳಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಮಾಡಲಾಗುತ್ತಿದೆಯಾದರೂ ಅದು ಇನ್ನೂ ಪ್ರಸ್ತಾವನೆ ಹಂತದಲ್ಲಿದೆ. ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಆದರೂ ಕೂಡ ಅವಳಿ ನಗರದ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲಿಕ್ಕಿಲ್ಲ. ಏಕೆಂದರೆ ಪ್ರತಿ ತಿಂಗಳು ಸರಾಸರಿ ಎರಡು ಸಾವಿರ ವಾಹನಗಳು ಹುಬ್ಬಳ್ಳಿ ನಗರದ ರಸ್ತೆಯನ್ನು ಆಕ್ರಮಿಸುತ್ತಿವೆ.
ಪಾರ್ಕಿಂಗ್ ಮತ್ತು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಅವಳಿ ನಗರದಲ್ಲಿ ಫ್ಲೈಓವರ್ಗಳ ನಿರ್ಮಾಣವಾಗಬೇಕಿದೆ.
ರೇಲ್ವೆ ಸ್ಟೇಷನ್ನಿಂದ ಹೊಸೂರು ಸರ್ಕಲ್ವರೆಗೆ ಫ್ಲೈ ಓವರ್ ನಿರ್ಮಿಸಬೇಕು ಎನ್ನುವ ಪ್ರಸ್ತಾಪ ಇತ್ತು. ಆದರೆ ಇಂದು ಅದು ನನೆಗುದಿಗೆ ಬಿದ್ದು, ಆ ಜಾಗದಲ್ಲಿ ಬಿಆರ್ಟಿಎಸ್ ಕಾರಿಡಾರ್ ಬಂದು ಕುಳಿತಿದೆ. ಆ ಕೆಲಸಕ್ಕೂ ಕೂಡ ಇನ್ನೂ ವೇಗ ಸಿಕ್ಕಿಲ್ಲ.
ರಿಂಗ್ ರೋಡ್ ತುರ್ತು ಅಗತ್ಯ: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗಬ್ಬೂರು ಕ್ರಾಸ್ನಿಂದ ಆರಂಭವಾಗುವ ರಿಂಗ್ ರೋಡ್ ಗದಗ, ಬಿಜಾಪುರ ರಸ್ತೆಯನ್ನು ಸಂಧಿಸುವ ಯೋಜನೆ ರೂಪಿಸಲಾಗಿದೆ. ಆದರೆ, ಕುಸುಗಲ್ ಗ್ರಾಮದ ರೈತರು ಸೇರಿದಂತೆ ಸುತ್ತಲಿನ ರೈತರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಪ್ರಸ್ತಾಪಿತ ರಿಂಗ್ ರೋಡ್ ನಿರ್ಮಾಣಗೊಂಡಲ್ಲಿ ಕಿತ್ತೂರು ಚನ್ನಮ್ಮ ವೃತ್ತದ ಮೇಲೆ ಬೀಳುತ್ತಿರುವ ವಾಹನ ಸಂಚಾರ ಒತ್ತಡ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಲಿದೆ. ಹಾವೇರಿಯಿಂದ ಬಾಗಲಕೋಟೆ, ಬಿಜಾಪುರಕ್ಕೆ ಹೋಗುವ ವಾಹನಗಳು ಚನ್ನಮ್ಮ ವೃತ್ತದ ಮುಖಾಂತರವೇ ಹೋಗಬೇಕು.
ಪುಣೆ-ಬೆಂಗಳೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಹೊರತುಪಡಿಸಿ ಬಾಗಲಕೋಟೆ, ಬಿಜಾಪುರ ಮತ್ತು ಗದಗಕ್ಕೆ ಹೋಗಬೇಕಾದ ವಾಹನಗಳು ಚನ್ನಮ್ಮ ವೃತ್ತಕ್ಕೆ ಬಂದು ಹೋಗಲೇಬೇಕು.
ಒಟ್ಟಾರೆಯಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಮೀತಿಮೀರಿರುವ ಟ್ರಾಫಿಕ್ ಸಮಸ್ಯೆ ಪರಿಹಾರಗೊಳ್ಳಬೇಕಾದರೆ ರಸ್ತೆಗಳ ಅಗಲೀಕರಣ, ಫ್ಲೈ ಓವರ್ ನಿರ್ಮಾಣವಾಗಲೇಬೇಕು. ಜತೆಗೆ ಬೆಳೆಯುತ್ತಿರುವ ಮಹಾನಗರ ಪಾಲಿಕೆ ಪಾರ್ಕಿಂಗ್ ಝೋನ್ಗಳನ್ನು ಹೆಚ್ಚಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

