ಧಾರವಾಡ

ಗಾಂಧೀಜಿ ಪುತ್ಥಳಿ ಭಗ್ನ: ಬಂಧಿತರಿಗೆ ರೌಡಿ ಪಟ್ಟ

Published On :

ಗದಗ: ತಾಲೂಕಿನ ಅಡವಿಸೋಮಾಪುರದಲ್ಲಿ ಮಹಾತ್ಮ ಗಾಂಧೀಜಿ ಪುತ್ಥಳಿ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧಿಸಲಾದ ಆರೋಪಿಗಳ ಮೇಲೆ ರೌಡಿ ಪಟ್ಟಿಯಲ್ಲಿ (ರೌಡಿ ಶೀಟರ್ ಓಪನ್) ಹೆಸರು ಸೇರಿಸಿ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ ಅಡವಿಸೋಮಾಪುರದಲ್ಲಿ ಗಾಂಧೀಜಿ ಪುತ್ಥಳಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗದಗ ಗ್ರಾಮೀಣ ಪೊಲೀಸರು ಶನಿವಾರ ಅಡವಿಸೋಮಾಪುರದ ರಮೇಶ ರಂಗಪ್ಪ ಹೊಸಳ್ಳಿ, ಸಂತೋಷ್ ಪರಸಪ್ಪ ವಾಲ್ಮೀಕಿ, ಶ್ರವಣಕುಮಾರ ಶಂಕ್ರಪ್ಪ ಗುಡ್ಡನಾಯ್ಕರ, ಮಂಜುನಾಥ ಕುಬೇರಪ್ಪ ಹುಲಗಣ್ಣವರ ಎಂಬ ನಾಲ್ವರನ್ನು ಬಂಧಿಸಿದ್ದು, ಪರಾರಿಯಾದ ಇನ್ನೋರ್ವನನ್ನು ಪತ್ತೆ ಹಚ್ಚುವಲ್ಲಿ ಕಾರ್ಯನಿರತರಾಗಿದ್ದಾರೆ. ಬಂಧಿತರ ಮೇಲೆ ಕಲಂ 427 ಐಪಿಸಿ ಮತ್ತು ಕಲಂ 2 ಪ್ರಿವೆನ್ಸನ್ ಆಫ್ ಡಿಸ್ಟ್ರಕ್ಷನ್ ಮತ್ತು ಲಾಸ್ ಆಫ್ ಪ್ರಾಪರ್ಟಿ ಆ್ಯಕ್ಟ್ 1981ರ ಅನ್ವಯ ರೌಡಿ ಪಟ್ಟಿಯಲ್ಲಿ ಹೆಸರು ಸೇರಿಸಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಶರಣಪ್ಪ ಸುದ್ದಿಗಾರರಿಗೆ ಶನಿವಾರ ತಿಳಿಸಿದ್ದಾರೆ. ಬಂಧಿತ ನಾಲ್ಕು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅಡವಿಸೋಮಾಪುರ ಗ್ರಾಮದಲ್ಲಿ ಕರ್ಫ್ಯೂ ಆಗುವಂತೆ ಮಾಡಲು ಯಾರು ಗಂಡಸರು ಇದ್ದೀರಿ ಎಂದು ಪರಾರಿಯಾಗಿರುವ ಆರೋಪಿ ಈರಪ್ಪ ಧರೋಜಿ ಬಂಧಿತರಾಗಿರುವ 4 ಜನ ಯುವಕರಿಗೆ ಪ್ರಚೋದನೆ ನೀಡಿದ್ದಾನೆ. ಈ ಪ್ರಚೋದನೆಗೆ ಒಳಗಾದ 4 ಆರೋಪಿಗಳು ಗಾಂಧೀಜಿ ಪುತ್ಥಳಿ ಭಗ್ನಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್‌ಪಿ ವಿ.ವಿ. ಕುಂಬಾರ ಮಾರ್ಗದರ್ಶನದಲ್ಲಿ ಗದಗ ಗ್ರಾಮೀಣ ಸಿಪಿಐ ನಾಗರಾಜ ಅಂಬಲಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಎಸ್‌ಐ ಎಲ್.ಕೆ. ಜೂಲಿಕಟ್ಟಿ ಸೇರಿದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.
ಧಾರವಾಡ: ಲಕ್ಷಾಂತರ ಮೌಲ್ಯದ ಮದ್ಯ ವಶ
ಧಾರವಾಡ: ಗೋವಾದಿಂದ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ತಾಲೂಕಿನ ಅಳ್ನಾವರ ಬಳಿಯ ಕಡಬಗಟ್ಟಿ ಕ್ರಾಸ್‌ನಲ್ಲಿ ಭಾನುವಾರ ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ. ಗೋವಾದಿಂದ ಲಾರಿ ನಂ. ಕೆ.ಎ. 20, ಬಿ. 512ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 2 ಲಕ್ಷ ಮೌಲ್ಯದ 90 ಬಾಕ್ಸ್ ಹನಿಗೈಡ್ ಬ್ರಾಂಡಿ ಮತ್ತು 8 ಲಕ್ಷ ಮೌಲ್ಯದ ಲಾರಿ ಸೇರಿದಂತೆ ಒಟ್ಟು 10 ಲಕ್ಷ ಮೌಲ್ಯದ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ, ಸುಳ್ಯ ತಾಲೂಕಿನ ಅಬ್ದುಲ್‌ಖಾದರ್ ಎಂಬಾತನನ್ನು ಬಂಧಿಸಲಾಗಿದೆ. ಲಾರಿ ಯಜಮಾನನನ್ನು ಕುರಿತು ತನಿಖೆ ನಡೆಸಲಾಗುತ್ತಿದೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಟ್ಕಾ ಜೂಜಾಟ: ಓರ್ವನ ಬಂಧನ
ಧಾರವಾಡ: ಮಟಕಾ ಜೂಜಾಟ ನಡೆಸುತ್ತಿದ್ದ ಆರೋಪಿಯೋರ್ವನನ್ನು ಉಪನಗರ ಠಾಣಾ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ. ವಿಜಯಾನಂದ ನಗರ ನಿವಾಸಿ ವಿಶ್ವನಾಥ ನಾಗನಗೌಡ ಬಂಧಿತ ಆರೋಪಿಯಾಗಿದ್ದು. ಬಂಧಿತನಿಂದ 1230 ನಗದು ಮತ್ತು ಮಟಕಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಉಪನಗರ ಠಾಣೆಯ ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.