ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀರಿಗೆ ಪರದಾಟ
ಗುಡಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀರಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಇಲ್ಲಿ ನಿತ್ಯಬಳಕೆ ಅಲ್ಲ ಕುಡಿಯಲೂ ತೊಟ್ಟು ನೀರಿಲ್ಲ.
ಒಂದು ವರ್ಷದಿಂದ ರೋಗಿಗಳು ನೀರಿಲ್ಲದೆ ಪರದಾಡುತ್ತಿದ್ದಾರೆ. ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿದ್ದು, ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಕಳೆದ ವರ್ಷ ಗರ್ಭಿಣಿಯರು ಶೌಚಾಲಯಕ್ಕೆ ಹೋಗಲು ನೀರಿಲ್ಲದ ಪರಿಣಾಮ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಿಂದ ಎಚ್ಚೆತ್ತಿದ್ದ ತಾಲೂಕು ವೈದ್ಯಾಧಿಕಾರಿ ಎಂ.ಆರ್. ನೂಲ್ವಿ ಆಸ್ಪತ್ರೆಗೆ ಭೇಟಿ ನೀಡಿ ಮೂಲಸೌಲಭ್ಯ ಒದಗಿಸುವುದಾಗಿ ಹೇಳಿದ್ದರು. ಅದಾದ ಕೆಲ ದಿನಗಳವರೆಗೆ ಟ್ಯಾಂಕರ್ ಮುಖಾಂತರ ನೀರು ಪೂರೈಸಿದರು. ಕಾಲಕ್ರಮೇಣ ಅದೇ ಸ್ಥಿತಿ ನಿರ್ಮಾಣಗೊಂಡಿದೆ.
ಸಿಬ್ಬಂದಿ ಅವಾಜ್: ನಿತ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 100ರಿಂದ 150 ಹೊರ ರೋಗಿಗಳು ಬರುತ್ತಿದ್ದು, ಅದರಂತೆ 20ರಿಂದ 30 ಗರ್ಭಿಣಿಯರು ದಾಖಲಾಗುತ್ತಿದ್ದಾರೆ. ಆದರೆ, ಅವರು ಆಸ್ಪತ್ರೆಯಲ್ಲಿರುವ ಶೌಚಾಲಯ ಬಳಸದಂತಾಗಿದೆ. ನೀರಿಲ್ಲದ ಕಾರಣ ಶೌಚಾಲಯ ಬಂದ್ ಮಾಡಲಾಗಿದೆ. ಗರ್ಭಿಣಿಯರು ಶೌಚಾಲಯದ ಬೀಗ ತೆರೆಯುವಂತೆ ಕೇಳಿಕೊಂಡರೆ ಸಿಬ್ಬಂದಿ ನೀರಿಲ್ಲ ಎಂದು ಗದರಿಸುತ್ತಾರೆ. ಇದರಿಂದಾಗಿ ಮಹಿಳೆಯರು ಪರದಾಡುವಂತಾಗಿದೆ.
ಸೇವೆ ನಿರ್ಲಕ್ಷ್ಯ: ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ಹಾಗೂ ಆಯುಷ್ಯ ತಲಾ ಒಬ್ಬೊಬ್ಬರು ವೈದ್ಯರಿದ್ದು, ಅಗತ್ಯ ಸಿಬ್ಬಂದಿಯೂ ಇದ್ದಾರೆ. ಆದರೆ, ವೈದ್ಯಾಧಿಕಾರಿಗಳು ಬೆಳಗ್ಗೆ 9 ಗಂಟೆಗೆ ಬಂದು ಸಂಜೆ 5 ಗಂಟೆಗೆ ಕೇಂದ್ರದಿಂದ ಹೋಗುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರವು 24್ಢ7 ಹೆರಿಗೆ ಸೌಲಭ್ಯ ಹೊಂದಿದ್ದು, ರಾತ್ರಿ ವೇಳೆ ದಾದಿಯರು ಕೇಂದ್ರದ ಎಲ್ಲ ಕೆಲಸ ನಿಭಾಯಿಸುತ್ತಿದ್ದಾರೆ.
ಯುಪಿಎಸ್ ಸೌಲಭ್ಯವಿಲ್ಲ: ರಾತ್ರಿ ವೇಳೆ ವಿದ್ಯುತ್ ಪೂರೈಕೆ ಕೈಕೊಟ್ಟರೆ ಕೆಂದ್ರದಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ. ಇಂಥ ಸಮಯದಲ್ಲಿ ಯುಪಿಎಸ್ ಸೌಲಭ್ಯ ಇಲ್ಲದಂತಾಗಿದ್ದು, ಈ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ತೀವ್ರ ಸಮಸ್ಯೆಯಾಗುತ್ತದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಕೊಠಡಿಗಳು ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳು ಅಧಿಕವಾಗಿವೆ. ಇಂಥದರಲ್ಲಿ ಗರ್ಭಿಣಿಯರು, ರೋಗಿಗಳು ರೋಗದಿಂದ ಚೇತರಿಸಿಕೊಳ್ಳದಂತಾಗಿದೆ.
ಆಸ್ಪತ್ರೆ ರಿಪೇರಿ: ಆರೋಗ್ಯ ಕೇಂದ್ರದ ಕಿಟಕಿ, ಬಾಗಿಲಿನ ಗಾಜುಗಳು ಒಡೆದಿದ್ದು, ಪ್ರಸಕ್ತ ಮಳೆಗಾಲವಾದ್ದರಿಂದ ಚಳಿಗೆ ರೋಗಿಗಳು ಪರದಾಡುವಂತಾಗಿದೆ. ಇದರಿಂದ ರೋಗಿಗಳ ರೋಗ ಮತ್ತಷ್ಟು ಉಲ್ಬಣವಾಗುತ್ತಿದ್ದು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಸೌಲಭ್ಯ ಕಲ್ಪಿಸಿಕೊಳ್ಳಲು ಆರೋಗ ಕಲ್ಯಾಣ ಸಮಿತಿಯಿಂದ 1 ಲಕ್ಷಕ್ಕೂ ಅಧಿಕ ಅನುದಾನ ಬರುತ್ತಿದ್ದು, ಅನುದಾನ ಸದ್ಬಳಕೆಯಾಗುತ್ತಿಲ್ಲ.
ರೋಗಿಗಳ ಗೋಳನ್ನು ಕೇಳಿಯಾದರೂ ಸಂಬಂಧಿಸಿದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ನೀಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

