ಭಕ್ತಿಗೆ ಬಡತನವಿಲ್ಲ!
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 4
ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ಭಕ್ತರೊಬ್ಬರು ರು. 5 ಲಕ್ಷ ವೆಚ್ಚದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಿಸಿದ್ದಾರೆ. ಕಟ್ಟಡ ಕಾಮಗಾರಿ ಮುಗಿದಿದ್ದು, ಇನ್ನೂ ರು. 2-3 ಲಕ್ಷ ಖರ್ಚು ಮಾಡಿ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಾಡುವ ಆಸೆ ಹೊಂದಿದ್ದಾರೆ.
ಹಾಗಂತ ಈ ಭಕ್ತ ಶ್ರೀಮಂತ ಏನಲ್ಲ. ಚಿಕ್ಕ ಆದಾಯದಲ್ಲೇ ಇಷ್ಟೆಲ್ಲವನ್ನೂ ಭಕ್ತಿಯಿಂದಲೇ ಮಾಡಿದ್ದಾರೆ. ಹಿರೇಮಣಕಟ್ಟಿ ಗ್ರಾಮದ ಅಶೋಕ ನಾಗಪ್ಪ ಅಂಗಡಿ ಅವರದು ಮಧ್ಯಮ ವರ್ಗದ ಕುಟುಂಬ. ಎರಡೆಕರೆ ಜಮೀನು ಇದೆ. ಸಹೋದರರು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. 4ನೇ ತರಗತಿಯಲ್ಲಿ ಶಾಲೆ ಬಿಟ್ಟ ಅಶೋಕ್, ಗಾಡಿಯ ಕ್ಲೀನರ್ ಕೆಲಸಕ್ಕೆ ಸೇರಿ, ಮಂಗಳೂರಿಗೆ ತೆರಳಿದರು. ಅಲ್ಲಿ ಅಯ್ಯಪ್ಪ ಭಕ್ತರಾದ ಗುರುಸ್ವಾಮಿ ಅವರ ಪರಿಚಯವಾಗಿ, ತಾವೂ ಅಯ್ಯಪ್ಪನ ಆರಾಧಕರಾದರು. ಚಿಕ್ಕ ವಯಸ್ಸಿಗೇ ಶಬರಿಗೆ ಹೋದ ಕಾರಣ, ಜನರೂ ಇವರನ್ನು 'ಮಣಿಕಂಠ' ಎಂದೇ ಕರೆಯುತ್ತಾರೆ. ಈಗ ಗ್ರಾಮದಲ್ಲಿ ಇವರೊಂದಿಗೆ ಹತ್ತಾರು ಜನ ಪ್ರತಿವರ್ಷ ಶಬರಿ ಯಾತ್ರೆ ಮಾಡುತ್ತಾರೆ. 29ರ ಹರೆಯದ ಅಶೋಕ್ ಒಂದು ಹಳೆಯ ಅಂಬಾಸಿಡರ್ ಕಾರು ಕೊಂಡು ಬಾಡಿಗೆಗೆ ಓಡಿಸುತ್ತಿದ್ದಾರೆ. ಅವರ ಪತ್ನಿ ಪ್ರೇಮಾ ಸಿದ್ದನಗೌಡ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಆರೋಗ್ಯ ಸಹಾಯಕಿ. ಇಬ್ಬರೂ ಅಲ್ಪ ಆದಾಯದಲ್ಲಿ ಸಂತೃಪ್ತಿಯ ಜೀವನ ನಡೆಸುತ್ತಾರೆ. ತಮ್ಮ ಕನಸಾದ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಗ್ರಾಪಂನಲ್ಲಿ ಕಾಡಿಬೇಡಿ, ಒಂದಿಷ್ಟು ಜಾಗ ಪಡೆದಿದ್ದಾರೆ. ದೇವಸ್ಥಾನಕ್ಕೆ ರು. 5 ಲಕ್ಷ ವ್ಯಯಿಸಿದ್ದು, ಇನ್ನೂ ರು. 2-3 ಲಕ್ಷ ಕೂಡಿಸಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಾಡಬೇಕೆಂದು ಆಶಿಸಿದ್ದಾರೆ. ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ಅಶೋಕ್ ಅವರ ಗೆಳೆಯರು ಒಂದಿಷ್ಟು ಹಣ ಕೊಟ್ಟಿದ್ದಾರೆ. ಶಿಗ್ಗಾಂವಿ ಪಟ್ಟಣದ ಸಾಕಷ್ಟು ಜನರ ಸಹಕಾರವೂ ತಮಗೆ ಸಿಕ್ಕಿದೆ ಎಂದು ಅಶೋಕ್ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

