ತನಿಖಾ ಸಮಿತಿಯಿಂದ ಅನ್ಯಾಯವಾಗಿದೆ: ಅಣ್ವೇಕರ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 5
ಮಹಾದೇವ ಜವಳಿ ಗಿರಣಿ ಆಸ್ತಿ ವರ್ಗಾವಣೆ ವಿಷಯದಲ್ಲಿ ತಮ್ಮ ವಿರುದ್ಧ ಮಾಡಿರುವ ಆರೋಪ ಸುಳ್ಳು. ತನಿಖಾ ಸಮಿತಿಯಿಂದ ನನಗೆ ಅನ್ಯಾಯವಾಗಿದೆ. ನನ್ನ ಆಸ್ತಿ ಮುಟ್ಟುಗೋಲು ಹಾಕಿ ಪಾಲಿಕೆಗೆ ಕರ ತುಂಬುವ ಪ್ರಶ್ನೆಯೇ ಉದ್ಭವಿಸದು. ಪಾಲಿಕೆ ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಿ, ನಾನು ಎದುರಿಸಲು ಸಿದ್ಧ ಎಂದು ಪಾಲಿಕೆಯ ನಿವೃತ್ತ ಸಹಾಯಕ ಆಯುಕ್ತ ಆರ್.ಎನ್. ಅಣ್ವೇಕರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಾದೇವ ಜವಳಿ ಗಿರಣಿ ಜಾಗದ ಕರ ತುಂಬುವುದು ಬಾಕಿ ಇದ್ದಾಗಲೂ ಜಾಗ ವಾರಸುದಾರರಿಗೆ ವರ್ಗಾವಣೆ ಮಾಡಿದ್ದಾಗಿ ಆರೋಪ ಹೊರಿಸಲಾಗಿದೆ. ಕರ ಭರಣ ಮಾಡದೇ ಇದ್ದಾಗಲೂ ಆಸ್ತಿ ವರ್ಗಾಯಿಸಬಹುದು ಎಂಬುದಕ್ಕೆ ಹೈಕೋರ್ಟ್‌ನಲ್ಲಿ ನಡೆದ ಪ್ರಕರಣವೊಂದರಿಂದ ಸಾಬೀತಾಗಿದೆ. ತಮ್ಮ ವಿರುದ್ಧ ನಡೆಸಲಾದ ತನಿಖೆ ಸಂದರ್ಭದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂಬ ದಾಖಲೆಯನ್ನು ತನಿಖಾ ಸಮಿತಿಗೆ ನೀಡಿದ್ದೆವು. ಆದರೆ ತನಿಖಾ ಸಮಿತಿ ಈ ದಾಖಲೆ ಮಾನ್ಯ ಮಾಡಿಲ್ಲ ಎಂದಿದ್ದಾರೆ.
ತಾವು ಮಾಡಿರುವುದು ಆಸ್ತಿ ವರ್ಗಾವಣೆ ಅಲ್ಲವೇ ಅಲ್ಲ. ಜಾಗದ ಮಾಲೀಕರು 99 ವರ್ಷಗಳ ಲೀಜ್ ಮುಗಿದ ಬಳಿಕ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಆದೇಶದನ್ವಯ 2007ರಲ್ಲಿ ಜಾಗ ಮಾಲೀಕರದ್ದಾಯಿತು. ದಾಖಲೆಯಲ್ಲಿ ಭೂ ಬಾಡಿಗೆದಾರರ ಹೆಸರನ್ನು ತೆಗೆದುಹಾಕಲಾಗಿದೆಯೇ ವಿನಃ ಖಾತಾ ಬದಲಾವಣೆ ಮಾಡಿಲ್ಲ. ಹೀಗಾಗಿ ಭೂ ಬಾಡಿಗೆ ಇದ್ದ ಅವಧಿಯಲ್ಲಿ ಬಾಡಿಗೆ ಪಡೆದಿದ್ದವರೇ ಆಸ್ತಿಕರ ಪಾವತಿಸಬೇಕೇ ವಿನಃ ಮಾಲೀಕರು ಪಾವತಿಸಬೇಕಿಲ್ಲ ಎಂದು ಹೇಳಿದ್ದಾರೆ.
ಇನ್ನು ನಿಯಮಾವಳಿ ಪ್ರಕಾರ ತಾವು ನಡೆದುಕೊಂಡಿದ್ದರೂ ತಮ್ಮನ್ನು ಅಪರಾಧಿ ಎನ್ನುವಂತೆ ಬಿಂಬಿಸಲಾಗಿದೆ. ಇದೀಗ ತಮ್ಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಪಾಲಿಕೆಯ ಕರ ತುಂಬಿಸಿಕೊಳ್ಳಬೇಕೆಂದು ತನಿಖಾ ಸಮಿತಿ ಅಂತಿಮ ಆದೇಶದಲ್ಲಿ ತಿಳಿಸಿದೆ. ಈ ಪ್ರಮೇಯವೇ ಒದಗಿಬಾರದು. ತಮ್ಮ ವಿರುದ್ಧ ಪಾಲಿಕೆ ದಾವೆ ಹೂಡಲಿ ಸಂಬಂಧಪಟ್ಟ ದಾಖಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯ ಪಡೆಯುವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

