ತೇಪೆ ಕೆಲಸವೂ ಕಳಪೆ!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 8
ನಗರದ ವಿವಿಧೆಡೆ ರಸ್ತೆ ಮಧ್ಯದ ತಗ್ಗು ಮುಚ್ಚುವಲ್ಲಿ ನಡೆದಿರುವ ಕಳಪೆ ಕಾಮಗಾರಿ ಪರಿಶೀಲಿಸಿದ ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಕಳಪೆ ನಡೆದಿರುವ ಕಾಮಗಾರಿಯನ್ನು ಒಂದು ವಾರದೊಳಗೆ ಸುಧಾರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ನಗರದ ವಿವಿಧ ರಸ್ತೆಗೆ ಭೇಟಿ ನೀಡಿದ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ರಸ್ತೆ ಮಧ್ಯದ ತಗ್ಗು ಮುಚ್ಚುವ ಹೆಚ್ಚಿನ ಕಾಮಗಾರಿಯನ್ನು ರಾತ್ರಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸ್ಟೇಶನ್ ರಸ್ತೆ, ಗಣೇಶಪೇಟ, ಸಿಬಿಟಿ, ಮಹಾದೇವ ಜವಳಿ ಗಿರಣಿ ಮಿಲ್ ವೃತ್ತ, ಹಳೇ ಹುಬ್ಬಳ್ಳಿಯ ಅರವಿಂದ ನಗರ, ಗೋಕುಲ ರಸ್ತೆಯ ಡಾಲರ್ಸ್ ಕಾಲೋನಿ, ಗಾಂಧಿನಗರ, ವಿದ್ಯಾನಗರದ ಶಿರೂರ ಪಾರ್ಕ್ ಸೇರಿದಂತೆ ಆಯುಕ್ತ ಚೌಧರಿ ವಿವಿಧೆಡೆ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿದರು.
ರಸ್ತೆ ಮಧ್ಯೆ ಹಾಗೂ ಅಕ್ಕಪಕ್ಕದ ತಗ್ಗು ಮುಚ್ಚುವ ಕಾಮಗಾರಿಯಲ್ಲಿ ಮೇಲ್ನೋಟಕ್ಕೇ ಕಳಪೆ ಗುಣಮಟ್ಟ ಕಂಡುಬಂದಿತು. ವಿವಿಧೆಡೆ ಬಡಾವಣೆಯ ನಾಗರಿಕರು ಸಹ ಆಯುಕ್ತರನ್ನು ಭೇಟಿಯಾಗಿ, ಕಾಮಗಾರಿಯಿಂದಾಗಿ ಆಗುತ್ತಿರುವ ತೊಂದರೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಗಾಂಧಿನಗರದಲ್ಲಿ ಮೊರಮ್ ಬಳಸದೇ ರಸ್ತೆ ಮಧ್ಯದ ಗುಂಡಿ ಮುಚ್ಚುತ್ತಿದ್ದು, ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಆದೇಶಿಸಿದರು. ಕಡ್ಡಾಯವಾಗಿ ಮೊರಮ್ ಬಳಕೆ ಮಾಡದೇ ಕಾಮಗಾರಿ ಪ್ರಾರಂಭಿಸಬಾರದು ಎಂದು ಸೂಚನೆ ನೀಡಿದರು.
ಅರವಿಂದ ನಗರದಲ್ಲಿ ಪೂರ್ಣಗೊಂಡಿರುವ ತಗ್ಗು ಮುಚ್ಚುವ ಕಾಮಗಾರಿ ಪರಿಶೀಲಿಸಿದರು. ಕಬ್ಬಿಣದ ಸಲಾಕೆಯಿಂದ ರಸ್ತೆ ಪಕ್ಕದಲ್ಲಿನ ಸ್ಥಳ ಅಗೆದು, ತೆಗ್ಗು ಮುಚ್ಚಲು ಬಳಸಿರುವ ಮೊರಮ್, ಕಡಿ ಪರಿಶೀಲಿಸಿದರು. ಈಗಾಗಲೇ ಪೂರ್ಣಗೊಂಡಿರುವ ತಗ್ಗು ಮುಚ್ಚುವ ಕಾಮಗಾರಿಯಲ್ಲಿ ಬಹುತೇಕ ಕಡೆಗಳಲ್ಲಿ ಕಳಪೆ ಗುಣಮಟ್ಟ ಕಂಡುಬಂದಿದ್ದು, ಮಳೆ ಸುರಿದಲ್ಲಿ ಮತ್ತೆ ತೆಗ್ಗು ಬೀಳುವ ಸಾಧ್ಯತೆ ಇದೆ. ಜೊತೆಗೆ ತಗ್ಗು ಮುಚ್ಚಲು ಬಳಸಿರುವ ಮಣ್ಣನಿಂದ ರಸ್ತೆ ಮತ್ತಷ್ಟು ಕೆಸರುಮಯವಾಗುತ್ತದೆಂದು ವಿವಿಧೆಡೆ ನಾಗರಿಕರು ಆಯುಕ್ತರಿಗೆ ದೂರು ನೀಡಿದರು.
ದಿಕ್ಕು ತಪ್ಪಿಸಿದ ಅಧಿಕಾರಿಗಳು
ರಸ್ತೆ ಮಧ್ಯದ ತಗ್ಗು ಮುಚ್ಚುವ ಕಾಮಗಾರಿ ಪರಿಶೀಲನೆಗೆ ತೆರಳಿದ್ದ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಅವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುವ ಮೂಲಕ, ಕಾಮಗಾರಿ ವೀಕ್ಷಣೆಯ ದಿಕ್ಕು ತಪ್ಪಿಸಿದರು. ಕಾಮಗಾರಿ ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಪ್ರದೇಶಗಳಿಗಷ್ಟೇ ಪಾಲಿಕೆ ದಕ್ಷಿಣ ವಲಯದ ಕಾರ್ಯನಿರ್ವಾಹಕ ಅಭಿಯಂತ ಎಸ್.ಎಸ್. ಮನ್ನಂಗಿ ಆಯುಕ್ತರನ್ನು ಕರೆದೊಯ್ದರು. ರಸ್ತೆ ಮಧ್ಯದ ತೆಗ್ಗುಗಳನ್ನು ಮುಚ್ಚದೇ ಹಾಗೇ ಉಳಿದಿರುವ ಸಾಕಷ್ಟು ಪ್ರದೇಶಗಳಿದ್ದರೂ ಆಯುಕ್ತರು ಅತ್ತ ಸುಳಿಯದಂತೆ ನೋಡಿಕೊಂಡರು. ತಾವು ಕರೆದೊಯ್ದ ಪ್ರದೇಶಗಳಲ್ಲಿಯೂ ಕಳಪೆ ಕಾಮಗಾರಿ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಕಾರ್ಯನಿರ್ವಾಹಕ ಅಭಿಯಂತರ ಮನ್ನಂಗಿ ಅವರಿಗೆ ಆಯುಕ್ತರು ಮಂಗಳರಾತಿ ಮಾಡಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಾಮಗಾರಿ ಪರಿಶೀಲಿಸುವ ಯೋಜನೆಯ ಮಾಹಿತಿಯನ್ನು ಆಯುಕ್ತರು ಮೊದಲೇ ಕಾರ್ಯನಿರ್ವಾಹಕ ಅಭಿಯಂತರ ಮನ್ನಂಗಿ ಅವರಿಗೆ ತಿಳಿಸಿದ್ದರೂ, ಮನ್ನಂಗಿ ಮಾತ್ರ ಯಾವುದೇ ಪೂರ್ವಯೋಜನೆ ಇಲ್ಲದೇ ಪರದಾಡಿದರು. ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯಂತೂ ಯಾವ ಪ್ರದೇಶಕ್ಕೆ ಹೋಗಬೇಕೆಂಬ ಗೊಂದಲಕ್ಕೀಡಾಗಿದ್ದರಿಂದ ಆಯುಕ್ತರು ಮನ್ನಂಗಿ ಅವರನ್ನು ತರಾಟೆಗೆ ತೆಗೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

