ಧಾರವಾಡ

ಬಹುಮಾನ ವಿತರಣೆ

Published On :

ಧಾರವಾಡ: ಆಕಾಶವಾಣಿ, ಏಡ್ಸ್ ಪ್ರಿವೆನಷನ್ ಸೊಸೈಟಿ ಹಾಗೂ ಹಿರೇಮಲ್ಲೂರ ಈಶ್ವರನ್ ಕಾಲೇಜು ವತಿಯಿಂದ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಆ. 13ರಂದು ಬೆಳಗ್ಗೆ 10.30ಕ್ಕೆ ಮಕರಂದ ಹೆಲ್ತ್ ಕ್ವಿಜ್ ಸರಣಿಯ ವಿಜೇತ ಕೇಳುಗರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಕಾಶವಾಣಿ ಹೆಚ್ಚುವರಿ ಮಹಾನಿರ್ದೇಶಕ ಆರ್. ವೆಂಕಟೇಶ್ವರಲು ಬಹುಮಾನ ವಿತರಣೆ ಮಾಡಲಿದ್ದಾರೆ. ಅತಿಥಿಗಳಾಗಿ ಕೆಎಸ್‌ಎಪಿಎಸ್ ಜಂಟಿ ನಿರ್ದೇಶಕಿ ಡಾ. ಲೀಲಾ ಸಂಪಿಗೆ, ವೈದ್ಯ ಡಾ.ವಿ.ಜಿ. ಕುಂದೂರ, ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಸಿ.ಯು. ಬೆಳ್ಳಕ್ಕಿ ಭಾಗವಹಿಸಲಿದ್ದು, ಈಶ್ವರನ್ ಕಾಲೇಜು ಪ್ರಾಚಾರ್ಯ ಪ್ರೊ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬೆಳೆ ಸ್ಪರ್ಧೆಗೆ ಅರ್ಜಿ
ಧಾರವಾಡ: ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಕೃಷಿ ಇಲಾಖೆಯು ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ರಾಜ್ಯ, ತಾಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆ ಏರ್ಪಡಿಸಲು ಕ್ರಮ ಕೈಕೊಂಡಿದೆ. ಆಸಕ್ತ ರೈತರು ಪ್ರವೇಶ ಶುಲ್ಕವನ್ನು ಭರಿಸಿ ನಿಗದಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲೆಗಳೊಂದಿಗೆ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಆ. 31ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಜನಸಂಪರ್ಕ ಸಭೆ
ಧಾರವಾಡ: ಆ. 16ರಂದು ಮಧ್ಯಾಹ್ನ 3ಕ್ಕೆ ವಿದ್ಯಾಗಿರಿ ಹೆಸ್ಕಾಂನಲ್ಲಿ ಸಾರ್ವಜನಿಕ ಕುಂದು ಕೊರತೆ ಆಲಿಸಲು ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಕೊರತೆಗಳಿದ್ದರೆ ಮುಂಚಿತವಾಗಿ ಕಚೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸಿ ಸಭೆ ಹಾಜರಾಗಬೇಕೆಂದು ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ವೈದ್ಯಕೀಯ ಚಿಕಿತ್ಸಾ  ತರಬೇತಿ ಸಮಾರೋಪ
ಧಾರವಾಡ: ಇಲ್ಲಿನ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲಾ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗೆ ಒಂದು ವಾರ ಪ್ರಾಥಮಿಕ ವೈದ್ಯಕೀಯ ಚಿಕಿತ್ಸಾ ತರಬೇತಿ ನೀಡಲಾಯಿತು. ತರಬೇತಿ ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ಲೋಕೇಶಕುಮಾರ ಮಾತನಾಡಿ, ಅಪಘಾತ ಸಂಭವಿಸಿದ ಸನ್ನಿವೇಶದಲ್ಲಿ ಸಕಾಲಿಕ ಕ್ರಮಗಳನ್ನು ಕೈಕೊಂಡು ಸಾಧ್ಯವಾದಷ್ಟು ಜೀವಹಾನಿ ತಪ್ಪಿಸುವುದು ಪೊಲೀಸರ ಕರ್ತವ್ಯ. ಈ ನಿಟ್ಟಿನಲ್ಲಿ ಇಂತಹ ತರಬೇತಿಗಳು ಅವರ ಮಾನಸಿಕ ಸಿದ್ಧತೆ ಹಾಗೂ ಸನ್ನಿವೇಶ ಎದುರಿಸುವ ಧ್ಯೇಯವನ್ನು ಹೆಚ್ಚಿಸಲು ನೆರವಾಗುತ್ತಿವೆ ಎಂದರು. ಧಾರವಾಡ ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಡಾ.ವಿ.ಡಿ. ಕರ್ಪೂರಮಠ ಮಾತನಾಡಿದರು. ಡಿಎಆರ್ ಡಿಎಸ್ಪಿ ಎಸ್.ಐ. ಬುಯ್ಯಾರ್, ಶಿವಾನಂದ ಜಿ.ಸಿ., ಬಿ.ಜಿ. ತಳವಾರ, ಡಾ. ಜ್ಯೋತಿ ಉಡಪಿ ಇದ್ದರು.

ಇಂದು  ಬಿ.ಸಿ. ಕಲ್ಮಠ ದತ್ತಿ ಉಪನ್ಯಾಸ
ಧಾರವಾಡ: ವಿದ್ಯಾವರ್ಧಕ ಸಂಘವು ಕ್ಯಾಪ್ಟನ್ ಬಿ.ಸಿ. ಕಲ್ಮಠ ಸ್ಮಾರಕ ದತ್ತಿ ಅಂಗವಾಗಿ ಭಾರತ ಬಿಟ್ಟು ತೊಲಗಿ ಚಳವಳಿಯ ಪ್ರಸ್ತುತತೆ ಅಂದು- ಇಂದು ಕುರಿತ ಉಪನ್ಯಾಸವನ್ನು ಆ. 9ರ ಸಂಜೆ 6ಕ್ಕೆ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ. ಸಮಾಜ ಪರಿವರ್ತನ ಸಮುದಾಯದ ಎಸ್.ಆರ್. ಹಿರೇಮಠ ಮಾತನಾಡಲಿದ್ದು, ಸ್ವಾತಂತ್ರ್ಯ ಹೋರಾಟಗಾರ ಸದಾಶಿವರಾವ್ ಭೋಸಲೆ ಅಧ್ಯಕ್ಷತೆ ವಹಿಸುತ್ತಾರೆ. ವಿದ್ಯಾರ್ಥಿಗಳಿಗೆ ಪ್ರಸಕ್ತ ವಿಷಯದ ಮೇಲೆ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಣೆ ತಿಲಿಸಿದೆ.

ಪದಾಧಿಕಾರಿ ಆಯ್ಕೆ: ನಾಳೆ ಸಭೆ
ಕುಂದಗೋಳ: ಸ್ಥಳೀಯ ಶಿಕ್ಷಕರ ಸಹಕಾರ ಪತ್ತಿನ ಸಂಘದ ಕಚೇರಿಯಲ್ಲಿ ಆ. 10ರಂದು ಮಧ್ಯಾಹ್ನ 1ಕ್ಕೆ ಕರ್ನಾಟಕ ಜ್ಞಾನ- ವಿಜ್ಞಾನ ಸಮಿತಿ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಕುರಿತ ಸಭೆ ಕರೆಯಲಾಗಿದೆ. ಸಭೆಗೆ ತಾಲೂಕಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ,  ಶಿಕ್ಷಕಿಯರು ಸಭೆಗೆ ಹಾಜರಾಗಬೇಕೆಂದು ಕೆಜೆವಿಎಸ್ ಸದಸ್ಯ ಎಂ.ಟಿ. ರಾಠೋಡ ಕೋರಿದ್ದಾರೆ.

ಛಾಯಾಚಿತ್ರ ಪ್ರದರ್ಶನ
ಧಾರವಾಡ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಇಲ್ಲಿನ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ 3ನೇ ಧಾರವಾಡ ಜಿಲ್ಲಾ ವಿದ್ಯಾರ್ಥಿ ಸಮ್ಮೇಳನದ ಅಂಗವಾಗಿ ಮಾನವತಾವಾದಿ ವಿಜ್ಞಾನಿ ಐನ್‌ಸ್ಟೀನ್ ಕುರಿತಾದ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿತ್ತು. ಕಾರ್ಯಕ್ರಮವನ್ನು ಕಾಲೇಜು ಪ್ರಾಚಾರ್ಯ ಬಿ.ಎಫ್. ಗಾಮನಗಟ್ಟಿ ಉದ್ಘಾಟಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಸಂಘಟನೆಯು ವಿದ್ಯಾರ್ಥಿಗಳಿಗಾಗಿ ಏರ್ಪಡಿಸುವ ಮುಂದಿನ ಯೋಜನೆಗಳ ಕುರಿತು ವಿವರಿಸಿದರು. ಡಾ.ಡಿ.ಎಂ. ಹಿರೇಮಠ, ವಿದ್ಯಾರ್ಥಿ ಘಟಕದ ಅಕ್ಷಯ ಪಾವಗಡ, ಅಕ್ಷಯ ತಳಕಲ್, ಮಂಜು, ಪ್ರವೀಣ, ಅಮಿತ್, ಸುನೀಲ ಇದ್ದರು.

ಇಂದು ಯಕ್ಷಗಾನತಾಳಮದ್ದಳೆ
ಹುಬ್ಬಳ್ಳಿ: ನಗರದ ರಂಗ ಮಿತ್ರರು, ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಆಶ್ರಯದಲ್ಲಿ ಆ. 9ರ ಸಂಜೆ 5ಕ್ಕೆ 'ವೀರಮಣಿ ಕಾಳಗ' ಎಂಬ ಯಕ್ಷಗಾನ ತಾಳಮದ್ದಳೆ ಹಮ್ಮಿಕೊಳ್ಳಲಾಗಿದೆ. ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಲಾವಿದರಾದ ಅಶೋಕ ಭಟ್ ಉಜಿರೆ, ಸಿದ್ಧಕಟ್ಟೆ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ರಾಧಾಕೃಷ್ಣ ಕಲ್ಚರ್ ಹಿಮ್ಮೇಳದ ಭಾಗವತರಾದ ದಿನೇಶ ಅಮ್ಮಣ್ಣಾಯ, ಕೊಳಗಿ ಕೇಶವ ಹೆಗ್ಡೆ ಅವರ ದ್ವಂದ್ವ ಹಾಡುಗಾರಿಕೆಯಲ್ಲಿ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಪ್ರವೇಶ ಉಚಿತ. ಆಸಕ್ತರು ಪಾಲ್ಗೊಳ್ಳುವಂತೆ ಕೋರಲಾಗಿದೆ.

ಜಾಮೀನು ತಿರಸ್ಕಾರ
ಹುಬ್ಬಳ್ಳಿ: ಗುರುಸಿದ್ದೇಶ್ವರ ಬ್ಯಾಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಚೇರ್‌ಮನ್ ಸೇರಿದಂತೆ 15 ಮಂದಿ ನಿರ್ದೇಶಕ ಮಂಡಳಿ ಸದಸ್ಯರಿಗೆ ಹುಬ್ಬಳ್ಳಿಯ ಒಂದನೇ ಸತ್ರ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ. ಸಾಲಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್‌ಆಡಳಿತ ಮಂಡಳಿ ನಿಯಮ ಉಲ್ಲಂಘಿಸಿದೆ ಎಂದು ಸಹಕಾರಿ ಇಲಾಖೆ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಡಳಿತ ಮಂಡಳಿ ನಿರೀಕ್ಷಣಾ ಜಾಮೀನು ಕೋರಿತ್ತು. ಗುರುವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಈಶಪ್ಪ ಭೂತೆ, ನಿರೀಕ್ಷಣಾ ಜಾಮೀನು ತಿರಸ್ಕರಿಸಿ ತೀರ್ಪು ನೀಡಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿ ಇದೀಗ ಹೈಕೋರ್ಟ್ ಮೊರೆ ಹೋಗಲಿದೆ.

ಐವರು ಕಳ್ಳರ ಬಂಧನ
ಹುಬ್ಬಳ್ಳಿ: ಬೆಳಗಿನ ವಾಕಿಂಗ್‌ಗೆ ಹೊರಡುವವರನ್ನು ದೋಚುವ ತಂಡದ ಐವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರನ್ನು ಶಂಕರ ವಾಲಿ, ರವಿ ನ್ಯಾಮತಿ, ಮಂಜು ದೇವರಮನಿ, ಶಾಂತು ಈರಾಪುರ ಹಾಗೂ ಮಂಜು ಹಂಚಿನಮನಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಕಬ್ಬಿಣದ ರಾಡು, ಬಟನ್ ಚಾಕು, ಪ್ಲಾಸ್ಟಿಕ್ ಹಗ್ಗ, ಖಾರದ ಪುಡಿಯನ್ನು ತಮ್ಮಲ್ಲಿಟ್ಟುಕೊಂಡು ನಸುಕಿನ ವೇಳೆಯಲ್ಲಿ ವಾಕಿಂಗ್ ಬರುವವರನ್ನು ಬೆದರಿಸಿ, ಲೂಟಿ ಮಾಡುತ್ತಿದ್ದರು.

ಹುಬ್ಬಳ್ಳಿ: ಸಂಚಾರ ನಿಯಮ ಉಲ್ಲಂಘನೆ
ಹುಬ್ಬಳ್ಳಿ: ನಗರದಲ್ಲಿ ಆ. 7ರಂದು ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 674 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ರು. 1 ಲಕ್ಷ ದಂಡ ವಸೂಲಿ ಮಾಡಿದೆ. ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದವರ ಮೇಲೆ 49 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ರು. 9,600 ದಂಡ ವಸೂಲಿ ಮಾಡಿದೆ ಎಂದು ಪೊಲೀಸ್ ಆಯುಕ್ತರ ಕಚೇರಿ ತಿಳಿಸಿದೆ.

ರುದ್ರಾಭಿಷೇಕ ಕಾರ್ಯಕ್ರಮ
ಹುಬ್ಬಳ್ಳಿ: ಶ್ರಾವಣ ಮಾಸ ನಿಮಿತ್ತಇಲ್ಲಿಯ ವಿದ್ಯಾನಗರದ ಶ್ರೀ ರಂಭಾಪುರಿ ವೀರಗಂಗಾಧರ ಸಮುದಾಯ ಭವನದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿನ ಶ್ರೀ ರೇಣುಕಾಚಾರ್ಯ ಮೂರ್ತಿಗೆ  ಆ. 9ರ ವರೆಗೆ ರುದ್ರಾಭಿಷೇಕ ನಡೆಯಲಿದೆ. ನಿತ್ಯ ಬೆಳಗ್ಗೆ 7.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಶ್ರೀ ಜಗದ್ಗುರು ರಂಭಾಪುರಿ ಸಾಂಸ್ಕೃತಿಕ ಸೇವಾ ಸಂಘದ ಕಾರ್ಯದರ್ಶಿ ಚನ್ನಬಸಪ್ಪ ಉಕ್ಕಲಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.