ಧಾರವಾಡ

ಸೋರುತಿದೆ ಚಿಟಗುಪ್ಪಿ ಆಸ್ಪತ್ರೆ ಹೊಸ ಕಟ್ಟಡ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 9
ಮಳೆ ನೀರು ಸೋರುವ ಪ್ರಸೂತಿ ಕೊಠಡಿಯಲ್ಲಿಯೇ ಹೆರಿಗೆ...
ಗರ್ಭಿಣಿಯರು ಮತ್ತು ಬಾಣಂತಿಯರು ನೀರು ಸೋರುವ ವಾರ್ಡ್‌ನಲ್ಲಿಯೇ ಚಿಕಿತ್ಸೆ ಪಡೆಯುವ ಅನಿವಾರ್ಯತೆ..!!
ಈ ದುಸ್ಥಿತಿ ಕಾಣುವುದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ನೂತನ ಕಟ್ಟಡದಲ್ಲಿ. 10-2-2013ರಂದು ಉದ್ಘಾಟನೆಗೊಂಡಿರುವ ಚಿಟಗುಪ್ಪಿ ಆಸ್ಪತ್ರೆಯ ನೂತನ ಕಟ್ಟಡ 'ಮೇಲೆಲ್ಲ ಬೆಳಕು ಒಳಗೆಲ್ಲ ಹುಳುಕು' ಎಂಬಂತಿದೆ.
ಸರ್ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಮಹಾನಗರ ಪಾಲಿಕೆ ಮುಖ್ಯಕಚೇರಿ ಹಿಂಭಾಗದ ಚಿಟಗುಪ್ಪಿ ಆಸ್ಪತ್ರೆಯ ಹಳೇ ಕಟ್ಟಡದ ಪಕ್ಕವೇ ಈ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಉದ್ಘಾಟನೆಗೊಂಡು ಐದೇ ತಿಂಗಳಿಗೆ ಕಟ್ಟಡದ ಮೇಲ್ಭಾಗ ಸೋರತೊಡಗಿದೆ.
ಕಳೆದ ಜುಲೈನಲ್ಲಿ ಸತತವಾಗಿ ಸುರಿದ ರಭಸದ ಹಾಗೂ ಜಿಟಿಜಿಟಿ ಮಳೆಗೆ ಕಟ್ಟಡದ ಬಹುತೇಕ ಭಾಗ ಸೋರಿದೆ. ಈಗಲೂ ಮಳೆ ಸುರಿದರೆ ಕಟ್ಟಡದಲ್ಲಿ ನೀರು ಸೋರುವುದು ಮುಂದುವರೆದಿದೆ. ಪ್ರಸೂತಿ ಕೊಠಡಿ (ಲೇಬರ್ ರೂಂ), ವಾರ್ಡ್‌ಗಳಲ್ಲಿ ಮಳೆ ನೀರು ಸೋರಿ, ಇಡಿ ಕಟ್ಟಡ ತಂಪಾಗುತ್ತದೆ.
ಪ್ರಸೂತಿ ಕೊಠಡಿಯೂ ಮಳೆ ನೀರಿನಿಂದ ಸೋರುತ್ತಿರುವುದರಿಂದ ಈ ಪರಿಸ್ಥಿತಿಯಲ್ಲಿಯೇ ಹೆರಿಗೆ ಮಾಡಬೇಕಾದ ವಿಪರ್ಯಾಸ ಇಲ್ಲಿನ ವೈದ್ಯರು ಹಾಗೂ ನರ್ಸ್‌ಗಳದ್ದು. ಹೆರಿಗೆ ನಂತರ ವಾರ್ಡ್‌ಗೆ ಸ್ಥಳಾಂತರಗೊಳ್ಳುವ ಬಾಣಂತಿಯರು ತೊಟ್ಟಿಕ್ಕುವ ಮಳೆ ನೀರಿನ ಮಧ್ಯೆಯೇ ಕಾಲ ಕಳೆಯಬೇಕು. ಚಿಟಗುಪ್ಪಿ ಆಸ್ಪತ್ರೆಗೆ ಬರುವವರಲ್ಲಿ ಹೆಚ್ಚಿನವರು ಗರ್ಭಿಣಿಯರು. ಹೆರಿಗೆಯ ಒಂದು ಅಥವಾ ಎರಡ್ಮೂರು ದಿನ ಮುಂಚೆ ಆಸ್ಪತ್ರೆಗೆ ದಾಖಲಾಗುವುದು ಸಾಮಾನ್ಯ. ಈ ಆಸ್ಪತ್ರೆಗೆ ಬರುವವರಲ್ಲಿ ಹೆಚ್ಚಿನವರು ಬಡವರು ಹಾಗೂ ಮಧ್ಯಮ ವರ್ಗದವರು.
ಅಪಾಯಕಾರಿ ವಾತಾವರಣ
ಗರ್ಭಿಣಿಯರಾಗಲಿ ಹಾಗೂ ಬಾಣಂತಿಯರಾಗಲಿ ತಂಪಾದ ವಾತಾವರಣದಲ್ಲಿರದೇ ಆದಷ್ಟು ಬೆಚ್ಚಗಿನ ವಾತಾವರಣದಲ್ಲಿ ಇರಬೇಕು. ಮಳೆ ನೀರು ವಾರ್ಡ್‌ನಲ್ಲಿ ಸೋರುವುದರಿಂದ ಇಡಿ ವಾರ್ಡ್ ತಂಪಾಗುತ್ತದೆ. ತಂಪು ವಾತಾವಾರಣವಿರುವ ವಾರ್ಡ್‌ನಲ್ಲಿರುವುದರಿಂದ ಬಾಣಂತಿ ಹಾಗೂ ನವಜಾತ ಶಿಶುವಿನ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚು. ಬಾಣಂತಿ ಹಾಗೂ ಮಗುವಿಗೆ ಜ್ವರ ಕಾಣಿಸಿಕೊಳ್ಳುವ ಜತೆಗೆ ಮಗು ತನ್ನ ಸಹಜ ಸ್ಥಿತಿ ಕಳೆದುಕೊಳ್ಳುವ ಅಪಾಯವೂ ಇದೆ. ಜತೆಗೆ ಹೆರಿಗೆಯೂ ನೀರು ಸೋರುವ ಕೊಠಡಿಯಲ್ಲಿ ನಡೆಯುವುದು ಅವೈಜ್ಞಾನಿಕ.
ತಾಯಿ ಹಾಗೂ ನವಜಾತ ಶಿಶುವಿನ ಆರೋಗ್ಯಕ್ಕೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೋಟ್ಯಂತರ ರು. ಹಣ ವೆಚ್ಚ ಮಾಡುತ್ತಿದೆ. ಇಂಥದರಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಾಣದಲ್ಲಿ ನಡೆದ ಕಳಪೆ ಕಾಮಗಾರಿಯಿಂದಾಗಿ ತಲೆದೋರುತ್ತಿರುವ ಅಪಾಯಕಾರಿ ವಾತಾವರಣದಿಂದಾಗಿ ತಾಯಿ ಹಾಗೂ ಮಗುವಿನ ಆರೋಗ್ಯ ಆತಂಕಕ್ಕೀಡಾಗುವ ಸಾಧ್ಯತೆ ಇದೆ.
ಚಿಟಗುಪ್ಪಿ ಆಸ್ಪತ್ರೆಯಲ್ಲಿ ದಿನವೊಂದಕ್ಕೆ ಕನಿಷ್ಠ 4 ಹೆರಿಗೆಗಳು ಹಾಗೂ ಪ್ರತಿ ತಿಂಗಳು ಸರಾಸರಿ 120 ರಿಂದ 140 ಹೆರಿಗೆಗಳು ನಡೆಯುತ್ತವೆ. 100 ಹಾಸಿಗೆಗಳ ಸಾಮರ್ಥ್ಯವುಳ್ಳ ಈ ಆಸ್ಪತ್ರೆಯನ್ನು ನಾಯಕ್ ಎಂಬ ಗುತ್ತಿಗೆದಾರರು ನಿರ್ಮಿಸಿದ್ದಾರೆ.
ಚಿಟಗುಪ್ಪಿ ಆಸ್ಪತ್ರೆಯ ನೂತನ ಕಟ್ಟಡವನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ನಿರ್ಮಿಸಲಾಗಿದೆ. ಒಟ್ಟು ರು. 23 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರು. 50 ಲಕ್ಷ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರು. 73 ಲಕ್ಷ ಅನುದಾನ ನೀಡಿದೆ.
ಈ ಕಟ್ಟಡ ನಿರ್ಮಾಣವೂ ನಿಧಾನ ಗತಿಯಲ್ಲಿ ನಡೆದಿದ್ದು, ಕಟ್ಟಡದ ಮಾಳಿಗೆ ಪೂರ್ಣ ಸೋರುತ್ತಿದೆ. ಮಳೆ ನೀರು ಸೋರುವುದರಿಂದ ಕಟ್ಟಡದಲ್ಲಿನ ವಿದ್ಯುತ್ ವೈರ್‌ಗಳಲ್ಲಿ ಆಗಾಗ ಶಾರ್ಟ್‌ಸರ್ಕ್ಯೂಟ್ ಕಾಣಿಸಿಕೊಳ್ಳುವುದು ಮಾಮೂಲು. ಮಹಾನಗರ ಪಾಲಿಕೆ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಆಸ್ಪತ್ರೆಯ ಕಟ್ಟಡದಲ್ಲಿ ಮಳೆ ನೀರು ಸೋರದಂತೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

-ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.