ಧಾರವಾಡ

ಆಕಾಶವಾಣಿ: ಆರೋಗ್ಯ ಕಾರ್ಯಕ್ರಮಕ್ಕೆ ಸಿಂಹಪಾಲು

Published On :

ಧಾರವಾಡ:ಕಿ ಆರೋಗ್ಯ ಕುರಿತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಆಕಾಶವಾಣಿ ಶೇ. 70 ಆರೋಗ್ಯಕ್ಕೆ ಸಂಬಂಧಿಸಿದಂತೆ ನಿರಂತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ ಎಂದು ಆಕಾಶವಾಣಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಸಿ.ಯು. ಬೆಳ್ಳಕ್ಕಿ ಹೇಳಿದರು.
ಆಕಾಶವಾಣಿ, ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಹಾಗೂ ಹಿರೇಮಲ್ಲೂರು ಈಶ್ವರನ್ ಕಾಲೇಜು ಆಶ್ರಯದಲ್ಲಿ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಮಂಗಳವಾರ ನಡೆದ ಮಕರಂದ್ ಹೆಲ್ತ್ ಕ್ವಿಜ್ ಸರಣಿ ವಿಜೇತ ಕೇಳುಗರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕಾಶವಾಣಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆಕಾಶವಾಣಿ ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಆರೋಗ್ಯಕ್ಕೆ ಸಿಂಹಪಾಲು ನೀಡುತ್ತಿದೆ ಎಂದರು.
ಪ್ರತಿಯೊಬ್ಬರಲ್ಲಿಯೂ ಆರೋಗ್ಯ ಶಿಕ್ಷಣ ಮಾಹಿತಿ ನೀಡುವ ಸಲುವಾಗಿ ಆಕಾಶವಾಣಿ 150ಕ್ಕೂ ಹೆಚ್ಚು ಕಾರ್ಯಕ್ರಮ ಹಾಗೂ 17ರಿಂದ 18 ಫೋನ್ ಇನ್ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಸದ್ಯ ತಂತ್ರಜ್ಞಾನ ಬೆಳವಣಿಗೆ ಶರವೇಗದಲ್ಲಿ ಸಾಗಿದೆ. ಆದರೆ, ಜನತೆಗೆ ತಂತ್ರಜ್ಞಾನ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಹಾಗಾಗಿ ಸಾರ್ವಜನಿಕ ವಲಯಕ್ಕೆ ನೇರವಾಗಿ ಆರೋಗ್ಯ ಮಾಹಿತಿ ನೀಡುತ್ತಿದೆ. ಅಲ್ಲದೇ, ಪ್ರಸ್ತುತ ಆಕಾಶವಾಣಿ ಸುಮಾರು ಮೂರು ಕೋಟಿ ಜನರನ್ನು ತಲುಪುತ್ತಿದ್ದು, ನಿತ್ಯ 80 ಲಕ್ಷ ಜನರು ಆಕಾಶವಾಣಿ ಕೇಳುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯ ವರದಿಯಿಂದ ತಿಳಿದು ಬಂದಿದೆ ಎಂದರು.
ಸುಧಾರಣೆಯಲ್ಲಿ ಪ್ರಮುಖ ಪಾತ್ರ
ದೂರದರ್ಶನ ದಕ್ಷಿಣ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಆರ್. ವೆಂಕಟೇಶ್ವರಲು ಮಾತನಾಡಿ, ಧಾರವಾಡ ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಬೀಡಾಗಿದ್ದು, ಈ ಎಲ್ಲ ಕ್ಷೇತ್ರಕ್ಕೆ ಇಲ್ಲಿನ ಅನೇಕ ದಿಗ್ಗಜರು ಸಾಂಸ್ಕೃತಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಅಂತೆಯೇ ಧಾರವಾಡ ಆಕಾಶವಾಣಿ ಕೇಂದ್ರ ವೈಯಕ್ತಿಕ ಮತ್ತು ಸಮಾಜದ ಕಳಕಳಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದರು.
ಮಕರಂದ್ ಹೆಲ್ತ್ ಕ್ವಿಜ್‌ನಲ್ಲಿ ಭಾಗವಹಿಸಿದ 26 ಜನರಿಗೆ ಬಹುಮಾನ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬಹುಮಾನ ಪಡೆದ ಸಣ್ಣನಿಂಗಪ್ಪ ಸೊಗಲದ ಹಾಗೂ ಸ್ನೇಹಾ ಉಮತಾರ ಅನುಭವ ಹಂಚಿಕೊಂಡರು. ಅಲ್ಲದೇ, ಸಮಾರಂಭ ಪೂರ್ವದಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೈದ್ಯರಾದ ಎಸ್.ಎಂ. ಹೊನಕೇರಿ, ಜಿ.ವಿ. ಕುಂದೂರ ಮಾತನಾಡಿದರು. ಹಿರೇಮಲ್ಲೂರ ಈಶ್ವರನ್ ಕಾಲೇಜು ಪ್ರಾಚಾರ್ಯ ಶಶಿಧರ ತೋಡಕರ ಇದ್ದರು ಡಿ. ಕುಮಾರದಾಸ ಪ್ರಾರ್ಥಿಸಿದರು. ಸತೀಶ ಪರ್ವತಿಕರ ಸ್ವಾಗತಿಸಿದರು. ಡಾ. ಶಶಿಧರ ನರೇಂದ್ರ ನಿರೂಪಿಸಿದರು. ಕೇಯೂರ ಕರಿಗುದರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.