ಧಾರವಾಡ

ಪಾಟೀಲ ಪುಟ್ಟಪ್ಪ ಬಾಯಲ್ಲಿ ಅಸಂವಿಧಾನಿಕ ಪದ ಬೇಡ

Published On :

ಧಾರವಾಡ: ಹುಬ್ಬಳ್ಳಿಯ ದೇಶಪಾಂಡೆ ನಗರದ ಆಟದ ಮೈದಾನವನ್ನು ರಿಕ್ರಿಯೇಶನ್ ಕ್ಲಬ್ ಮಾಡುವ ಕುರಿತಂತೆ ವಿರೋಧ ವ್ಯಕ್ತಪಡಿಸಿರುವ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರ ಬಗ್ಗೆ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದು ಪಾಲಿಕೆ ಸದಸ್ಯ ಶಿವು ಹಿರೇಮಠ ಅಭಿಪ್ರಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಅಭಿಪ್ರಾಯ ತಿಳಿಸಿರುವ ಅವರು, ಹಿರಿಯ ಚೇತನ ನಾಡೋಜ ಪಾಟೀಲ ಪುಟ್ಟಪ್ಪ ಅವರಿಂದ ನಾವೆಲ್ಲಾ ಕಲಿಯುವುದು ಸಾಕಷ್ಟಿದೆ. ದೊಡ್ಡವರಾದ ಅವರ ಬಾಯಲ್ಲಿ ಲಫಂಗ ಎಂಬ ಶಬ್ದ ಬಂದಿರುವುದು ಬೇಸರದ ಸಂಗತಿ. ಈ ಕ್ಲಬ್ ವಿಷಯದಲ್ಲಿ ಪಾಪು ಅವರ ಅಭಿಪ್ರಾಯ ಹಾಗೂ ಈ ರೀತಿಯ ಖಂಡನೆ ಸರಿಯಲ್ಲ. ಯಾವುದೇ ವಿವಾದಾತ್ಮಕ ವಿಷಯ ನ್ಯಾಯಾಲಯದಲ್ಲಿ ಬಗೆಹರಿಯಲಿ. ಜಗದೀಶ್ ಶೆಟ್ಟರ್ ಹಾಗೂ ಜೋಶಿ ಸ್ಥಳೀಯ ರಾಜಕೀಯ ನಾಯಕರು ಎಂಬುದನ್ನು ಒಂದು ಕ್ಷಣ ಯೋಚಿಸಿ ಆ ಪದ ಬಳಸಬೇಕಿತ್ತು. ಪಾಪು ಅವರ ಮೊಮ್ಮಗಳು ಸಹ ಈ ಕ್ಲಬ್ ಸದಸ್ಯರಲ್ಲಿ ಒಬ್ಬರಾಗಿದ್ದು, ಈ ಕುರಿತು ಅವರೇಕೆ ಮಾತನಾಡುತ್ತಿಲ್ಲ ಎಂದು ಶಿವು ಹಿರೇಮಠ ಪ್ರಶ್ನಿಸಿದ್ದಾರೆ.

ನಾಳೆ ಆರೋಗ್ಯ ತಪಾಸಣೆ
ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಶಿರೂರ ಪಾರ್ಕ್‌ನಲ್ಲಿರುವ ಸ್ಪರ್ಶ ಆಯುರ್ವೇದ ಮತ್ತು ಪಂಚಕರ್ಮ ಆಸ್ಪತ್ರೆ ವತಿಯಿಂದ ಆ. 18ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ನಡೆಯಲಿರುವ ಶಿಬಿರದಲ್ಲಿ ಅಲರ್ಜಿ, ದಮ್ಮು ಮತ್ತು ಶ್ವಾಸ ಸಂಬಂಧಿ ಕಾಯಿಲೆಗಳು, ಬೆನ್ನು ಹುರಿತೊಂದರೆ, ಗಂಟು ಬಾವು, ಸಂಧಿ ನೋವು, ಮಧುಮೇಹ, ಮೂಲವ್ಯಾದಿ, ಫಿಸ್ತುಲಾ, ಫಿಶರ್, ಗುದಗತ ವ್ಯಾದಿಗಳು, ಕೂದಲು ಉದುರುವಿಕೆ, ಮೊಡವೆ, ಸ್ತ್ರೀ ಸಂಬಂಧಿತ ರೋಗಗಳು ಸೇರಿದಂತೆ ವಿವಿಧ ರೋಗಗಳ ಬಗ್ಗೆ ತಪಾಸಣೆ ಮಾಡಲಾಗುವುದು.  ಡಾ. ವಸಂತ ಪಾಟೀಲ ಹಾಗೂ ಡಾ. ಸ್ಮಿತಾ ಅಂಗಡಿಕಿ ಆರೋಗ್ಯ ತಪಾಸಣೆ ಮಾಡುವರು. ಮಾಹಿತಿಗೆ ಸ್ಪರ್ಶ ಆಯುರ್ವೇದ ಮತ್ತು ಪಂಚಕರ್ಮ ಆಸ್ಪತ್ರೆ, ಪುಗಶ್ರೀ ಬಿಲ್ಡಿಂಗ್, ಸಿದ್ದೇಶ್ವರ ಪಾರ್ಕ್ ಹತ್ತಿರ, ಶಿರೂರ ಪಾರ್ಕ್ 2ನೇ ಹಂತ, ವಿದ್ಯಾನಗರ, ಹುಬ್ಬಳ್ಳಿ (ಮೊ: 92412 03043) ಸಂಪರ್ಕಿಸಲು ಕೋರಲಾಗಿದೆ.

ಟೆಂಟ್ ಮಕ್ಕಳಿಗೆ ಆರೋಗ್ಯ ಉಚಿತ ತಪಾಸಣೆ
ಧಾರವಾಡ: ಇಲ್ಲಿನ ವಿದ್ಯಾಗಿರಿ ರಸ್ತೆ ಬಳಿ ಟೆಂಟ್ ಹಾಕಿರುವ ಅಲೆಮಾರಿ ಜನರಿಗೆ ಹಾಗೂ ಮಕ್ಕಳಿಗೆ ಆ. 17ರಂದು ಬೆಳಗ್ಗೆ 9.30ಕ್ಕೆ ವಿಶೇಷ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜೆಎಸ್ಸೆಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಯುವ ರೆಡ್‌ಕ್ರಾಸ್ ಹಾಗೂ ಬಾಲ ನಂದನ ಟ್ರಸ್ಟ್ ಆಶ್ರಯದಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ. ಡಾ. ವಿ.ಬಿ. ಕರ್ಪೂರಿಮಠ ನೇತೃತ್ವದಲ್ಲಿ ಜರುಗಲಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಬಿ. ಉಷಾ, ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರಡ್ಡಿ, ರಘುನಾಥ ಲಕ್ಕಣ್ಣವರ, ಉದಯ ದೇಸಾಯಿ, ಬಾಲನಂದ ಟ್ರಸ್ಟ್ ಅಧ್ಯಕ್ಷೆ ಪ್ರೀತಿ ಎನ್.ಕೆ. ಭಾಗವಹಿಸಲಿದ್ದಾರೆ. ಪ್ರಾಚಾರ್ಯ ಡಾ. ಅಜಿತ ಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ದೇಶ ಭಕ್ತಿಗೀತೆ ಸ್ಪರ್ಧೆ
ಧಾರವಾಡ: ಅಕ್ಕನ ಬಳಗದ ವತಿಯಿಂದ ಇಲ್ಲಿನ ಡಿಸಿ ಕಾಂಪೌಂಡ್ ಬಳಿಯ ಅಕ್ಕನ ಬಳಗದಲ್ಲಿ ಆ. 19ರಂದು ಮಧ್ಯಾಹ್ನ 3ಕ್ಕೆ ಮಹಿಳಾ ಮಂಡಳದ ಸದಸ್ಯರಿಗೆ ದೇಶ ಭಕ್ತಿಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು ಮಾಹಿತಿಗೆ ಮೊ. ಸಂಖ್ಯೆ 99458-03875ಗೆ ಸಂಪಕಿಸಬಹುದು.

ಉಚಿತ ಉದ್ಯೋಗಾವಕಾಶ
ಹುಬ್ಬಳ್ಳಿ: ನಗರದ ಐಟಿ ಪಾರ್ಕ್‌ನಲ್ಲಿರುವ ಟ್ರಿಯಾ ಸಲೂಷನ್ಸ್ ವತಿಯಿಂದ ಆ. 17ರಂದು ಉಚಿತ ಉದ್ಯೋಗ ಅವಕಾಶ ಏರ್ಪಡಿಸಲಾಗಿದೆ. ಬಿಪಿಓ ಕಂಪನಿಯ ವಾಯಿಸ್ ಪ್ರೊಸೆಸ್ ಕಸ್ಟಮರ್ ಕೇರ್ ಆಫೀಸರ್ ಹುದ್ದೆಗಾಗಿ ಉದ್ಯೋಗಾವಕಾಶ ಏರ್ಪಡಿಸಿದ್ದು, ಪಿಯುಸಿ ಹಾಗೂ ಪದವಿ ಪೂರ್ಣಗೊಳಿಸಿದ ಇಂಗ್ಲಿಷ್, ಹಿಂದಿ ಭಾಷೆ ಮಾತನಾಡಬಲ್ಲ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದು. ಮಾಹಿತಿಗೆ ಟ್ರಿಯಾ ಸಲೂಷನ್ಸ್, ಐಟಿ ಪಾರ್ಕ್, ಪಾಸ್‌ಪೋರ್ಟ್ ಆಫೀಸ್ ಎದುರು, 4ನೇ ಮಳಿಗೆ, ಇ ಬ್ಲಾಕ್, ಹುಬ್ಬಳ್ಳಿ (ಮೊ: 87923 85484) ಸಂಪರ್ಕಿಸಲು ಕೋರಲಾಗಿದೆ.

ಧಾರ್ಮಿಕ ಉಪನ್ಯಾಸ
ಧಾರವಾಡ:  ಇಲ್ಲಿನ ದಿಗಂಬರ ಜೈನ ಟ್ರಸ್ಟ್, ಜೈನ ಮಿಲನ್, ಸಮ್ಯಕ್ ಪ್ರಜ್ಞಾ ಮಹಿಳಾ ಮಂಡಳ, ಸನ್ಮತಿ ಸೇವಾ ಸಮಾಜ ಹಾಗೂ ಪೆರ್ಮಾಣು ಪ್ರತಿಷ್ಠಾನ ಜಂಟಿಯಾಗಿ ಆ. 17 ಸಂಜೆ 6ಕ್ಕೆ ಸನ್ಮತಿ ಜಿನಮಂದಿರದಲ್ಲಿ ಬಾಲಬ್ರಹ್ಮಚಾರಿ ಸೋಮದೇವ ಸೂರಿ ಬೈಯಾಜಿ ಚಾತುರ್ಮಾಸದ ನಿಮಿತ್ತ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಡಾ. ಜಿನದತ್ತ ಹಡಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳಿಗಾಗಿ ಕ್ವಿಜ್
ಹುಬ್ಬಳ್ಳಿ: ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಟಾಟಾ ಕನ್ಸಲ್ಟೆನ್ಸಿ (ಟಿಸಿಎಸ್) ಸಹಭಾಗಿತ್ವದಲ್ಲಿ 8ರಿಂದ12ನೇ ತರಗತಿವರೆಗಿನ ಗ್ರಾಮೀಣ ಮಕ್ಕಳಿಗಾಗಿ ರಾಷ್ಟ್ರಮಟ್ಟದ ಕ್ವಿಜ್ ಆಯೋಜಿಸಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಐಟಿ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತು ಜಗತ್ತಿನ ತಂತ್ರಜ್ಞಾನ ಅಭಿವೃದ್ಧಿ ಕುರಿತ ಜ್ಞಾನವೃದ್ಧಿಗಾಗಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಕರ್ನಾಟಕದಲ್ಲಿ ಮೊದಲನೇ ಸುತ್ತು ಆ. 30ರಂದು ನಡೆಯಲಿದೆ. ಜಿಲ್ಲಾಮಟ್ಟದ ಸ್ಪರ್ಧೆ ಸೆ. 12ರಂದು ಜರುಗಲಿದೆ. ಶಾಲೆಗಳು ಡಿಡಿಪಿಐ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು. ವಲಯ ಮಟ್ಟದ ಸ್ಪರ್ಧೆಗಳು ಅ. 8ರಂದು ಧಾರವಾಡದಲ್ಲಿ, 11ರಂದು ಮೈಸೂರಿನಲ್ಲಿ ಹಾಗೂ 23ರಂದು ತುಮಕೂರಿನಲ್ಲಿ ನಡೆಯಲಿವೆ. ಮೈಸೂರು ವಲಯ ಫೈನಲ್ ಮತ್ತು ಕರ್ನಾಟಕ ರಾಜ್ಯ ಫೈನಲ್ ಅ. 23ರಂದು ತುಮಕೂರಿನಲ್ಲಿ ಜರುಗಲಿದೆ. ಪ್ರವೇಶಕ್ಕೆ ಯಾವುದೇ ಶುಲ್ಕವಿಲ್ಲ. ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಗುಲ್ಬರ್ಗ ನಗರಗಳ ನಗರ ಪಾಲಿಕೆ ವ್ಯಾಪ್ತಿಯ ಶಾಲೆ/ಪಿಯು ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ವಿಜೇತರಿಗೆ ಟಾಟಾ ಕನ್ಸಲ್ಟನ್ಸಿಯಿಂದ ಬಹುಮಾನವಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಧಾರವಾಡ: ಮಹಿಳೆಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರತ್ನವ್ವ ಮಲ್ಲಪ್ಪ ಯಳ್ಳೂರ(35) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಾಕೆ. ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಈಕೆ ನಿನ್ನೆ ರಾತ್ರಿ ವಿಷ ಸೇವಿಸಿದ್ದಳು. ತೀವ್ರ ಅಸ್ವಸ್ಥಳಾದ ಈಕೆಯನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.