ಧಾರವಾಡ

ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 16
'ಗ್ರಾಮ ಪಂಚಾಯಿತಿ ಕಾಂಗ್ರೆಸ್ ಕನಸಿನ ಕೂಸು. ಪಂಚಾಯತ್‌ರಾಜ್ ಸಬಲೀಕರಣಗೊಳಿಸುವ ಕಾರ್ಯ ಮಾಡಿದ್ದೇ ಕಾಂಗ್ರೆಸ್. ಗ್ರಾಪಂ, ತಾಪಂ ಹಾಗೂ ಜಿಪಂಗಳಿಗೆ ಮೀಸಲಾತಿ ತರುವ ಮೂಲಕ ಎಲ್ಲ ವರ್ಗದ ಜನರಿಗೆ ಅಧಿಕಾರ ಕನಸು ನನಸಾಗಿದ್ದೇ ಕಾಂಗ್ರೆಸ್‌ನಿಂದ.
ಬಿಜೆಪಿಗೆ ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಮತ ಕೇಳುವ ನೈತಿಕ ಹಕ್ಕು ಇಲ್ಲ. ಬೇಲೂರು ಘೋಷಣೆ ಮೂಲಕ ಕಾಂಗ್ರೆಸ್ ಅಧಿಕಾರ ವಿಕೇಂದ್ರೀಕರಣದ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ನಾಂದಿ ಹಾಡಿತು. ಪಂಚಾಯತ್‌ರಾಜ್ ಸಬಲೀಕರಣದಲ್ಲಿ ಕಾಂಗ್ರೆಸ್ ಪಾತ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಅಧಿಕಾರ ವೈಖರಿಯಿಂದಾಗಿ ಲೋಕಸಭೆ ಮತ್ತು ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ಖಚಿತ.'
-ಇದು ವಾರ್ತಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರೂ ಆಗಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ವಿಶ್ವಾಸ. 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪಂಚಾಯತ್‌ರಾಜ್ ಬಲವರ್ಧನೆಗೆ ಕಾಂಗ್ರೆಸ್‌ನ ಪಾತ್ರ ಹಾಗೂ ಈಗಲೂ ಗ್ರಾಪಂ ಅಭಿವೃದ್ಧಿಗೆ ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಸಚಿವ ಲಾಡ್ ವಿವರಿಸಿದರು.  
ಕನಸಿನ ಕೂಸು: ಪಂಚಾಯತ್‌ರಾಜ್ ವ್ಯವಸ್ಥೆ ಅಭಿವೃದ್ಧಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಕನಸು. ಈ ಕನಸಿನ ಪ್ರತಿಫಲವೇ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಅಭಿಯಾನ ಯೋಜನೆ ಜಾರಿಗೊಂಡಿದ್ದು. ಈ ಯೋಜನೆ ಮೂಲಕ ಪ್ರತಿಯೊಬ್ಬ ಗ್ರಾಮಸ್ಥನಿಗೆ 100 ದಿನದ ಉದ್ಯೋಗ ದೊರಕಿತು. ಮೊದಲು ಗ್ರಾಪಂಗೆ ರು. 1 ಲಕ್ಷ ಮಾತ್ರ ಅನುದಾನ ಇತ್ತು. ಇದೀಗ ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಕೋಟ್ಯಂತರ ರುಪಾಯಿ ವಿಶೇಷ ಅನುದಾನ ಹರಿದುಬರುತ್ತಿದೆ.
ಗ್ರಾಮ ಅಭಿವೃದ್ಧಿಗೆ ವೇಗ: ಬೇಲೂರು ಘೋಷಣೆ ಮೂಲಕ 26 ವಿವಿಧ ಇಲಾಖೆಗಳು ಗ್ರಾಪಂ ಅಡಿಯಲ್ಲಿ ಕಾರ್ಯನಿರ್ವಹಿಸುವಂತಾಯಿತು. ಇದರಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಸೌಕರ್ಯಗಳು ದೊರೆತವು. ಇದೀಗ ರಾಜ್ಯ ಸರ್ಕಾರ ಗ್ರಾಪಂಗಳ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡುತ್ತಿದೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅವರು ಗ್ರಾಮಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಗ್ರಾಮ ಸಭೆಗಳು ಕಡ್ಡಾಯವಾಗಿ ನಡೆಯಬೇಕೆಂಬ ಉದ್ದೇಶದಿಂದ ಗ್ರಾಮ ಸಭೆಗಳಲ್ಲಿ ಪಾಲ್ಗೊಳ್ಳದ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಕಠಿಣ ಕ್ರಮದ ಭೀತಿಯಿಂದ ಗ್ರಾಮ ಸಭೆಗಳು ಕಡ್ಡಾಯವಾಗಿ ನಡೆಯುತ್ತವೆ. ಗ್ರಾಮಗಳಲ್ಲಿ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯುತ್ತದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮಾತ್ರ ಗ್ರಾಪಂಗಳಿಗೆ ಎಳ್ಳಷ್ಟೂ ಕೊಡುಗೆ ನೀಡಿಲ್ಲ.
ದೋಸ್ತಿ ನಾಚಿಕೆಗೇಡು: ಇದೀಗ ಬಿಜೆಪಿ, ಕೆಜೆಪಿ ಹಾಗೂ ಜೆಡಿಎಸ್ ಈ ಉಪ ಚುನಾವಣೆಯಲ್ಲಿ ಒಂದಾಗಿ ಕಾಂಗ್ರೆಸ್ ವಿರುದ್ಧ ಕಣಕ್ಕಿಳಿದಿದ್ದಾರೆ. ಸದಾ ಕಚ್ಚಾಡುವ ಈ ಪಕ್ಷಗಳು ಇದೀಗ ಒಂದಾಗಿರುವುದು ನಾಚಿಕೆಗೇಡು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎಲ್ಲರೂ ಒಂದಾಗಿದ್ದಾರೆ ಇದರಿಂದ ಏನೂ ಸಾಧಿಸಲಾಗದು.
ಚುನಾವಣೆ ಮುಗಿದ ನಂತರ ಈ ಪಕ್ಷಗಳಲ್ಲಿನ ಕಚ್ಚಾಟ ಮತ್ತೆ ಪ್ರಾರಂಭಗೊಳ್ಳುತ್ತದೆ. ಈ ಪಕ್ಷಗಳು ರಾಜಕೀಯ ಮಾಡುವುದು ರಾಜಕೀಯ ಉದ್ದೇಶಕ್ಕೆ ಮಾತ್ರ. ಆದರೆ, ಕಾಂಗ್ರೆಸ್‌ನ ರಾಜಕಾರಣದ ಹಿಂದೆ ಅಭಿವೃದ್ಧಿಯ ಮಂತ್ರ ಅಡಗಿದೆ. ಕಾಂಗ್ರೆಸ್ ಆಡಳಿತ ಇರುವ ಸ್ಥಳೀಯ ಸಂಸ್ಥೆಗಳು, ರಾಜ್ಯ ಹಾಗೂ ದೇಶ ಅಭಿವೃದ್ಧಿ ಪಥ ನಿರ್ಮಾಣಗೊಳ್ಳುತ್ತದೆ. ಇನ್ನುಳಿದ ಪಕ್ಷಗಳು ಇರುವ ಆಡಳಿತದಲ್ಲಿ ಸದಾ ಭ್ರಷ್ಟಾಚಾರ, ಕಚ್ಚಾಟ ಸಾಮಾನ್ಯ. ಇದೆಲ್ಲ ರಾಜ್ಯದ ಜನತೆ ಗಮನಿಸುತ್ತ ಬಂದಿದ್ದಾರೆ.
ಗೆದ್ದೇ ಗೆಲ್ತೇವೆ: ಜನ ಬದಲಾವಣೆ ಬಯಸಿ ಬಿಜೆಪಿಗೆ ಅಧಿಕಾರ ಕೊಟ್ಟರು. ಆದರೆ, ಅಧಿಕಾರ ರುಚಿ ಅನುಭವಿಸಿದ ಬಿಜೆಪಿ ನಾಯಕರು ಅಭಿವೃದ್ಧಿ ಬದಿಗೊತ್ತಿ ಸ್ವಾರ್ಥ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರದಂತಹ ಹೀನ ಕೃತ್ಯಕ್ಕೆ ಕೈಹಾಕಿದರು. 5 ವರ್ಷದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಇವರ ಕಾಲದಲ್ಲಿ ನೋಡುವಂತಾಯಿತು. ಇಂಥ ಲಜ್ಜೆಗೆಟ್ಟ ಸರ್ಕಾರ ರಾಜ್ಯದಲ್ಲಿ ಕಾಣುವ ದೌರ್ಭಾಗ್ಯ ಒದಗಿ ಬಂತು. ಕರ್ನಾಟಕವನ್ನು ನಂಬರ್ 1 ಭ್ರಷ್ಟ ರಾಜ್ಯ ಎಂಬ ಹಣೆಪಟ್ಟಿ ಕಟ್ಟಿದರು. ಇದರ ಪರಿಣಾಮವನ್ನೂ ಬಿಜೆಪಿಗರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದರು. ಈಗ ಬಿಜೆಪಿ, ಕೆಜೆಪಿ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಇವರೇನೇ ಕಸರತ್ತು ಮಾಡಿದರೂ ಕಾಂಗ್ರೆಸ್ ಮಣಿಸಲು ಸಾಧ್ಯವಿಲ್ಲ. ಉಪಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೇವೆ ಎಂದು ಲಾಡ್ ವಿಶ್ವಾಸ ವ್ಯಕ್ತಪಡಿಸಿದರು.

-ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.