ಇಂದು ಬೃಹತ್ ಹೋರಾಟ
ಹೊನ್ನಾವರ: ದಾಖಲೆಯ ಮಳೆಯಿಂದಾಗಿ ಬೆಳೆಹಾನಿಗೊಳಗಾದ ಕೃಷಿಕರ ಮತ್ತು ಅಡಿಕೆಗೆ ತಗುಲಿದ ಕೊಳೆರೋಗದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅಡಿಕೆ ಬೆಳೆಗಾರರು ಮತ್ತು ಕೃಷಿಕರ ಪರ ಆ. 22ರಂದು ಬೆಳಗ್ಗೆ 10 ಗಂಟೆಗೆ ಹೊನ್ನಾವರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಹೊನ್ನಾವರ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿನೋದ ನಾಯ್ಕ ತಿಳಿಸಿದ್ದಾರೆ. ಬೆಳೆಗಾರರ ತೀವ್ರ ಸಂಕಷ್ಟದ ಸ್ಥಿತಿಯ ಕುರಿತು ಸರ್ಕಾರದ ಗಮನ ಸೆಳೆಯಲಿರುವ ಈ ಹೋರಾಟದಲ್ಲಿ ತಾಲೂಕಿನ ಎಲ್ಲ ರೈತರು, ಬೆಳೆಗಾರರು ಪಾಲ್ಗೊಳ್ಳುವಂತೆ ಅವರು ವಿನಂತಿಸಿದ್ದಾರೆ.
ಬಳ್ಳಾರಿ: 25ರಂದು ನೌಕಾಪಡೆಯ ಸಮಾವೇಶ
ಬಳ್ಳಾರಿ: ಕಾರವಾರದ ಐಎನ್ಎಸ್ ಕದಂಬ ನವಲ್ಬೇಸ್ ಇವರು ಗದಗ್ನಲ್ಲಿರುವ ಈಶ್ವರ ದೇವಸ್ಥಾನ ಬಡಾವಣೆ (ರಾಜೀವಗಾಂಧಿ ನಗರ)ಯಲ್ಲಿ ಆ. 25ರಂದು ಬೆಳಗ್ಗೆ 10 ಗಂಟೆಗೆ ನೌಕಾಪಡೆಯ ಮಾಜಿ ಸೈನಿಕ, ಅವಲಂಬಿತರ ಸಮಾವೇಶ ನಡೆಸಲಿದ್ದಾರೆ. ಬಳ್ಳಾರಿ, ಗದಗ ಹಾಗೂ ಕೊಪ್ಪಳ ಜಿಲ್ಲೆಯ ನೌಕಾಪಡೆಯ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ಈ ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-88192618, 0836-2440176ಗೆ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಕೃಷಿ ಪ್ರಶಸ್ತಿಗೆ ಅರ್ಜಿ
ಬಳ್ಳಾರಿ: ಕೃಷಿ ಇಲಾಖೆಯು ಜಿಲ್ಲೆಯ ರೈತರಿಗೆ ಮುಂಗಾರು ಹಂಗಾಮಿನ ಕೃಷಿ ಪ್ರಶಸ್ತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಸಲುವಾಗಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ವಿವಿಧ ಹಂತಗಳಲ್ಲಿ ಆಯ್ಕೆ ಮಾಡಲಾದ ಬೆಳೆಗಳಲ್ಲಿ ಬೆಳೆ ಸ್ಪರ್ಧೆ ನಡೆಸಿ ಪ್ರತಿ ಬೆಳೆಗೂ ಮೂರು ಬಹುಮಾನಗಳನ್ನು ನೀಡಲಾಗುವುದು. ಪ್ರಶಸ್ತಿಯನ್ನು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೀಡಲಾಗುವುದು. ಜಿಲ್ಲೆಯಿಂದ ಮುಂಗಾರು ಹಂಗಾಮಿನಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಬೆಳೆ ಸ್ಪರ್ಧೆಗೆ ಭತ್ತ, ಮುಂಗಾರು ಜೋಳ (ಮಳೆಯಾಶ್ರಿತ), ಶೇಂಗಾ (ಮಳೆಯಾಶ್ರಿತ) ಬೆಳೆಗಾಗಿ ಅರ್ಜಿ ಸಲ್ಲಿಸಬಹುದು. ತಾಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಬಳ್ಳಾರಿ, ಸಿರುಗುಪ್ಪ ಮತ್ತು ಹೊಸಪೇಟೆ ತಾಲೂಕುಗಳಲ್ಲಿ ಭತ್ತದ ಬೆಳೆಗೆ ಸಂಡೂರು, ಹಗರಿಬೊಮ್ಮನಹಳ್ಳಿ ಮತ್ತು ಹಡಗಲಿ ತಾಲೂಕುಗಳಲ್ಲಿ ಮುಂಗಾರು ಜೋಳ (ಮಳೆಯಾಶ್ರಿತ)ದ ಬೆಳೆಗೆ, ಕೂಡ್ಲಿಗಿ ತಾಲೂಕಿನಲ್ಲಿ ಶೇಂಗಾ (ಮಳೆಯಾಶ್ರಿತ) ಬೆಳೆಗೆ, ರೈತರು ಅರ್ಜಿ ಸಲ್ಲಿಸಬಹುದು. ರಾಜ್ಯ ಮಟ್ಟದ ಸ್ಪರ್ಧೆಗಾಗಿ ಅರ್ಜಿ ಸಲ್ಲಿಸಲು ಸಾಮಾನ್ಯ ರೈತರಿಗೆ ರು. 300, ಜಿಲ್ಲಾ ಮಟ್ಟಕ್ಕೆ ರು. 150 ಹಾಗೂ ತಾಲೂಕು ಮಟ್ಟಕ್ಕೆ ರು. 100 ಶುಲ್ಕ ನಿಗದಿಪಡಿಸಲಾಗಿದೆ. ಅದೇ ರೀತಿ ಪ.ಜಾತಿ, ಪಂಗಡದ ರೈತರಿಗೆ ರಾಜ್ಯ ಮಟ್ಟದ ಸ್ಪರ್ಧೆಗೆ ರು. 75, ಜಿಲ್ಲಾ ಮಟ್ಟಕ್ಕೆ ರು. 40 ಹಾಗೂ ತಾಲೂಕು ಮಟ್ಟಕ್ಕೆ ರು. 25 ಪ್ರವೇಶ ಶುಲ್ಕ ಪಾವತಿಸಬೇಕು. ಆಸಕ್ತ ರೈತರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆ. 31ರೊಳಗಾಗಿ ಸಂಬಂಧಿಸಿದ ರೈತಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಕೆ. ರಾಮಪ್ಪ ತಿಳಿಸಿದ್ದಾರೆ.
ಕೊಪ್ಪಳ: ಶಿಕ್ಷಕರ ದಿನಾಚರಣೆಗೆ ಸಾಲುಮರದ ತಿಮ್ಮಕ್ಕಗೆ ಆಹ್ವಾನ
ಕೊಪ್ಪಳ: ಸೆಪ್ಟೆಂಬರ್ 5ರಂದು ನಗರದ ಸಾಹಿತ್ಯ ಭವನದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಗೆ ಖ್ಯಾತ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರನ್ನು ಆಹ್ವಾನಿಸಲಾಗಿದೆ ಎಂದು ಶಿಕ್ಷಕರ ಕಲಾವೃಂದ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕನವರು ತಾಲೂಕಿನ ವಿವಿಧ ಶಾಲೆಗಳಲ್ಲಿ ಗಿಡ ನೆಡಲಿದ್ದಾರೆ ಮತ್ತು ಮಕ್ಕಳೊಂದಿಗೆ ಪರಿಸರದ ಕುರಿತು ಸಂವಾದ ನಡೆಸಲಿದ್ದಾರೆ. ಬಳಿಕ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾಲುಮರದ ತಿಮ್ಮಕ್ಕನವರಿಗೆ ಗೌರವ ಧನ ನೀಡಲು ಶಿಕ್ಷಕರ ಕಲಾವೃಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂಬ ಐತಿಹಾಸಿಕ ನಾಟಕವನ್ನು ಪ್ರದಶಿಸಲಿದೆ. ಈ ಬಾರಿ ಪರಿಸರ ಜಾಗೃತಿ ಮೂಡಿಸುವ ಜೊತೆಗೆ ತಿಮ್ಮಕ್ಕನವರಿಗೆ ಸೂಕ್ತ ಗೌರವ ಧನ ನೀಡಲು ತೀರ್ಮಾನಿಸಲಾಗಿದೆ. ಆದ್ದರಿಂದ ಸಾರ್ವಜನಿಕರೂ ಸಹಾಯ ಧನ ನೀಡಬಹುದು. ಸಹಾಯ ಮಾಡಲಿಚ್ಛಿಸುವವರು ಶಿಕ್ಷಕರ ಪತ್ತಿನ ಸಂಘದಲ್ಲಿ ಇಲ್ಲವೆ ಸೆ. 5ರಂದು ಖುದ್ದಾಗಿ ನೀಡಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಪ್ರಾಣೇಶ ಪೂಜಾರ-9902893671, ಸುರೇಶ ಅರಕೇರಿ-9902131908ಗೆ ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

