ಧಾರವಾಡ

ರಿಕ್ರಿಯೇಶನ್ ಕ್ಲಬ್: ಶೆಟ್ಟರ್‌ಗೆ ಪಾಪು ಪತ್ರ

Published On :

ಹುಬ್ಬಳ್ಳಿ: ರಿಕ್ರಿಯೇಶನ್ ಕ್ಲಬ್ ಕುರಿತು ಸ್ಪಷ್ಟ ನಿಲುವು ಪ್ರಕಟಿಸುವಂತೆ ಗುರುವಾರ ಬೆಳಗಿನವರೆಗೆ ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನ ಬಚಾವೋ ನೀಡಿದ್ದ ಗಡುವಿಗೆ ಯಾವುದೇ ಪ್ರತಿಕ್ರಿಯೆ ನೀಡದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಪತ್ರ ಬರೆದಿರುವ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಶೆಟ್ಟರ್ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನವನ್ನು ಸಾರ್ವಜನಿಕರ ಬಳಕೆಗೆ ಬಿಟ್ಟುಕೊಡುವ ಬದಲು ಈ ವಿವಾದದಲ್ಲಿ ತಮ್ಮ ಪಾತ್ರ ಇಲ್ಲವೆನ್ನುವ ಮೂಲಕ ಶೆಟ್ಟರ್ ರಾಜಕಾರಣ ಮಾಡುತ್ತಿದ್ದಾರೆ. ಮೈದಾನ ಸಾರ್ವಜನಿಕರ ಬಳಕೆಗೆ ಮುಕ್ತವಾಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲವೆಂದು ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭ ಡಾ. ಪಾಟೀಲ ಪುಟ್ಟಪ್ಪ ಅವರ ಮನೆಯಲ್ಲಿ ನಡೆದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ಚರ್ಚಿಸಲಾಯಿತು. ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನ ಅತಿಕ್ರಮಣ ತೆರವಿಗೆ ಒತ್ತಾಯಿಸಿ ಆ. 27ರಂದು ತಹಸೀಲ್ದಾರ್ ಕಚೇರಿ ಎದುರು ಹಾಗೂ ಸೆ. 1ರಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರ ಮನೆ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಸಿ.ಬಿ.ಎಲ್. ಹೆಗಡೆ, ವೆಂಕಟೇಶ ಸವದತ್ತಿ, ಶರದ ಭಗತ್, ಮನೋಜ ಹಾನಗಲ್, ಎಸ್.ಎಸ್. ಪಾಟೀಲ, ಶೀಲಾ ಮಿರ್ಜಿ, ಎ.ಎನ್. ಮಡಿವಾಳರ, ಅಮೃತ ಇಜಾರಿ, ಗಂಗಾಧರ ಬಡಿಗೇರ, ಗೋಪಾಲ ಕುಲಕರ್ಣಿ, ಶೈಲೇಂದ್ರ ಪಾಟೀಲ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ರಿಕ್ರಿಯೇಶನ್ ಕ್ಲಬ್: ಅಧಿಕಾರಿಗಳೂ ಶಾಮೀಲು
ಧಾರವಾಡ: ದಿನದಿಂದ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಿರುವ ಹುಬ್ಬಳ್ಳಿಯ ರಿಕ್ರಿಯೇಶನ್ ಕ್ಲಬ್ ವಿವಾದದಲ್ಲಿ ಬರಿ ರಾಜಕಾರಣಿಗಳು ಮಾತ್ರವಲ್ಲ ಅಧಿಕಾರಿಗಳಳೂ ಶಾಮೀಲಾಗಿದ್ದಾರೆಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಆರ್‌ಟಿಐ ಮೂಲಕ ಈ ಕುರಿತಾಗಿ ದಾಖಲೆ ಪಡೆದುಕೊಂಡು ಸಂಪೂರ್ಣ ಅಧ್ಯಯನ ಮಾಡಿಯೇ ಪಾಪು ಅವರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದೇನೆ. 1915ರಲ್ಲಿ ಮುಂಬೈ ಸರ್ಕಾರ ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆಂದು ಜಿಮಖಾನ್ ಅಸೋಶಿಯೇಶನ್‌ಗೆ ನೀಡಿತ್ತು. ಆ ಉದ್ದೇಶಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಪಚಾರ ಎಸಗಿದ್ದಾರೆ. 2008ರಲ್ಲಿ ಆಡಳಿತಕ್ಕೆ ಬಂದ ಬಿಜೆಪಿ ಮುಖಂಡರು, ಕೆಲ ವ್ಯಾಪಾರಸ್ಥರು  ಪಿತೂರಿ ಮಾಡಿ ಜಾಗ ಕಬಳಿಸಿದ್ದಾರೆ. ಈ ಭೂ ಕಬಳಿಕೆಯಲ್ಲಿ ಬರೀ ಮಾಜಿ ಸಿಎಂ ಜಗದೀಶ ಶೆಟ್ಟರ್ ಇಲ್ಲ. ಆಗಿನ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ, ಹುಡಾ ಅಧ್ಯಕ್ಷ, ಆಯುಕ್ತರೂ ಇದ್ದಾರೆ ಎಂದು ದಾಖಲೆಗಳಿಂದ ತಿಳಿದು ಬರುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.