ಹೈಪೀಠ ಸ್ಥಾಪನೆಗೆ ಸಮಾಜ ಸ್ಪಂದನೆ
ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಬರೀ ವಕೀಲ ಸಮುದಾಯ ಮಾತ್ರವಲ್ಲ ಸಂಘ-ಸಂಸ್ಥೆಗಳು, ಕಾರ್ಮಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಲಾವಿದರು, ಮಾಧ್ಯಮ, ರಾಜಕೀಯ ಪಕ್ಷಗಳು, ರಾಜಕಾರಣಿಗಳು ಹಾಗೂ ಪೊಲೀಸರು ಸೇರಿದಂತೆ ಇಡೀ ಸಮಾಜ ಸ್ಪಂದಿಸಿದೆ ಎಂದು ಹಿರಿಯ ವಕೀಲ ಹಾಗೂ ವಿದ್ಯಾವರ್ಧಕ ಸಂಘದ ಕಾನೂನು ಮಂಟಪದ ಸಂಚಾಲಕ ಬಸವಪ್ರಭು ಹೊಸಕೇರಿ ಹೇಳಿದರು.
ಹೈಕೋರ್ಟ್ ಸಂಚಾರಿ ಪೀಠ ಕಾಯಂ ಪೀಠವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಎಂ. ಚಂದ್ರಶೇಖರ, ಎನ್.ಕೆ. ಜೈನ್, ಸಿರಿಯಾಕ ಜೋಸೆಫ್, ನಾಗಮೋಹನದಾಸ, ಎಸ್.ಆರ್. ಬನ್ನೂರಮಠ ಅವರಂತಹ ಹಲವರು ಹೈಕೋರ್ಟ್ ಪೀಠ ಸ್ಥಾಪನೆಗೆ ಸ್ಪಂದಿಸಿದ್ದು, ಅವರನ್ನು ಸ್ಮರಿಸಲೇಬೇಕೆಂದು ಹೇಳಿದರು.
ಪೀಠದ ಕನಸು ನನಸಾಗುವಷ್ಟರಲ್ಲಿ ಅನೇಕ ತೊಡಕಗಳು ಎದುರಾಗುತ್ತಿದ್ದವು. 1980, 1990 ಹಾಗೂ 1996ರಲ್ಲಿ ಮೂರು ಹಂತದಲ್ಲಿ ಕಳೆದು ಹೋಗುತ್ತಿರುವ ಜೀವ ಮತ್ತೇ ಪಡೆದುಕೊಂಡು 1996ರ ನಂತರ ಮನವಿ, ಬೇಡಿಕೆ ಸಲ್ಲಿಸುವುದು ಕಡಿಮೆಯಾಗಿ ನಿಶ್ಚಿತ ಚಳವಳಿಯಾಗಿ ಹೋರಾಟ ಪರಿವರ್ತನೆಗೊಂಡಿತು. ಬಿ.ಡಿ. ಹಿರೇಮಠ ಆಮರಣ ಉಪವಾಸ ಕೈಗೊಂಡರು. 63 ಹೋರಾಟಗಾರರು ಬಳ್ಳಾರಿ ಜೈಲುವಾಸ ಅನುಭವಿಸಿದರು. ಹಲವು ಘಟ್ಟ ದಾಟಿ 2004ರಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ಕೆ. ಜೈನ್ ಒಂದು ಹಂತದಲ್ಲಿ ಪೀಠ ನೀಡಲು ಒಪ್ಪಿಗೆ ನೀಡಿದರು. ಆಗ ಪೀಠದ ಖಾತ್ರಿ ಆಯಿತು. 2008ರಲ್ಲಿ ಪೀಠ ಉದ್ಘಾಟನೆಯೂ ಆಯಿತು ಎಂದು ಹೈಕೋರ್ಟ್ ಪೀಠದ ಸುದೀರ್ಘ ದಾರಿ ವಿವರಿಸಿದರು.
ಬಳ್ಳಾರಿ ಜೈಲುವಾಸ ಕುರಿತು ಅಭಿಪ್ರಾಯ ಹಂಚಿಕೊಂಡ ಹೋರಾಟಗಾರ ಮೋಹನ ನಾಗಮ್ಮನವರ, ಹೈಕೋರ್ಟ್ ಪೀಠದ ಹೋರಾಟ ಹತ್ತಿಕ್ಕಲು ಸರ್ಕಾರ ಬಳ್ಳಾರಿ ಜೈಲಿಗೆ ಅಟ್ಟಿತು. ಆದರೂ ನಮ್ಮ ಹೋರಾಟ ಮಾತ್ರ ನಿಲ್ಲಲಿಲ್ಲ. ಅದರ ಪರಿಣಾಮವಾಗಿ ಪೀಠ ಬಂದಿತು. ಒಟ್ಟಿನಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಸ್ವಾಭಿಮಾನಕ್ಕೆ ಈ ಹೋರಾಟ ಬಲ ತಂದುಕೊಟ್ಟಿತು. ಇದೊಂದು ಮೈಲುಗಲ್ಲು ಎಂದು ಭಾವುಕರಾಗಿ ನುಡಿದರು. ಹೋರಾಟಗಾರ, ವಕೀಲ ಸಿ.ಎಸ್. ನೇಗಿನಹಾಳ, ತಾವು ಜೈಲಿನಲ್ಲಿ ಅನುಭವಿಸಿದ ಸುಖ-ದುಃಖಗಳನ್ನು ಹಂಚಿಕೊಂಡರು.
ಪೀಠಕ್ಕಾಗಿ ಹೋರಾಟ ನಡೆಸಿದವರನ್ನು ಗೌರವಿಸಲಾಯಿತು. ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಬಿ.ವಿ. ಗುಂಜೆಟ್ಟಿ, ಬಿ.ಡಿ. ಹಿರೇಮಠ, ಶಾಸಕ ಎನ್.ಎಚ್. ಕೋನರೆಡ್ಡಿ, ಜಿ.ಜಿ. ದೊಡವಾಡ, ಸಿ.ಯು. ಬೆಳ್ಳಕ್ಕಿ, ಶಿವಣ್ಣ ಬೆಲ್ಲದ, ಶಂಕರ ಹಲಗತ್ತಿ, ಶಂಕರ ಹಲಗತ್ತಿ, ಶಂಕರ ಕುಂಬಿ, ವಿಶ್ವೇಶ್ವರಿ ಹಿರೇಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

