ಪ್ರವಾಸ ಕಥನಗಳು ಸಂಶೋಧನೆಗೆ ಸಹಾಯಕವಾಗಲಿ: ಮಾಚಕನೂರ
ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 4
ಎಲ್ಲ ರೀತಿಯ ಸಂಶೋಧನಾ ಅಧ್ಯಯನಗಳಿಗೆ ಮಾರ್ಗದರ್ಶನ ಮಾಡುವಲ್ಲಿ ಪ್ರವಾಸ ಕಥನಗಳು ಅಧ್ಯಯನ ಆಕರ ಗ್ರಂಥಗಳಾಗಿ ಹೊರಬರಬೇಕು ಎಂದು ಲೇಖಕ ಮತ್ತು ನಿವೃತ್ತ ಕೆಎಎಸ್ ಅಧಿಕಾರಿ ವೆಂಕಟೇಶ ಮಾಚಕನೂರ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಲಾ ಸಂಗಮ ಸಂಸ್ಥೆ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕವಿಯಿತ್ರಿ ವಿದ್ಯಾ ಕುಂದರಗಿ ಅವರ ಈಜಿಪ್ತ ಪ್ರವಾಸ ಕಥನ 'ನೈಲ್ ನದಿಯ ಮಡಿಲಲ್ಲಿ' ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಒಂದು ನಿರ್ದಿಷ್ಟ ಪ್ರದೇಶ, ಸಂಸ್ಕೃತಿ, ಇತಿಹಾಸ, ಪರಂಪರೆ, ಜನಾಂಗ, ಶಿಕ್ಷಣ, ಧರ್ಮ, ರಾಜಕೀಯ, ಜನಜೀವನ ಸೇರಿದಂತೆ ಹತ್ತು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವಲ್ಲಿ ಪ್ರವಾಸ ಕಥನಗಳು ವಾಸ್ತವದ ನೆಲೆಯಲ್ಲಿ ವ್ಯಾಪಕ ಆಕರಗಳನ್ನು ಒದಗಿಸಿಕೊಡಬೇಕು. ಈ ನಿಟ್ಟಿನಲ್ಲಿ ವಿದ್ಯಾ ಕುಂದರಗಿಯವರ ಪ್ರವಾಸ ಕಥನವು ಅನೇಕ ಆಕರಗಳಿಂದ ತುಂಬಿಕೊಂಡಿದೆ ಎಂದು ಹೇಳಿದರು.
ಕೃತಿ ಪರಿಚಯ ಮಾಡಿದ ಕಥೆಗಾರ ಮಹಾಂತೇಶ ನವಲಕಲ್ ಹಾಗೂ ಲೇಖಕ ಪ್ರವರ ಕುಂ.ವೀ. ಮಾತನಾಡಿ, ನೈಲ್ ನದಿಯ ನಾಗರಿಕತೆ, ಈಜಿಪ್ತ ಇತಿಹಾಸ, ಟರ್ಕಿ ಕ್ರಾಂತಿ, ಅಲ್ಲಿಯ ಹೋರಾಟದ ಹೆಜ್ಜೆಗಳು, ಗುಲಾಮಗಿರಿ ಸಹಿಸದ ಮನೋಪ್ರವೃತ್ತಿ, ಈಜಿಪ್ತ ಮಮ್ಮಿಗಳ ಕುರಿತ ವೈಜ್ಞಾನಿಕ ಅಧ್ಯಯನ, ಸೂರ್ಯ ದೇವರ ಉಪಾಸನಾ ಕ್ರಮಗಳು, ಈಜಿಪ್ತ ಮ್ಯೂಸಿಯಂ ಅವಲೋಕನ ಸೇರಿದಂತೆ ಅನೇಕ ಸಂಗತಿಗಳ ಬಗೆಗೆ ತಮ್ಮೊಳಗಿನ ಜ್ಞಾನವನ್ನು ಸಂದರ್ಭಕ್ಕೆ ತಕ್ಕಂತೆ ಅನ್ವಯಗೊಳಿಸುವ ವಿಧಾನ ಕೃತಿಯಲ್ಲಿ ಬಹು ಸೊಗಸಾಗಿ ಮೂಡಿ ಬಂದಿದ್ದು, ಅದು ಓದುಗರಿಗೆ ಮೆಚ್ಚುಗೆಯಾಗುತ್ತದೆ ಎಂದು ತಿಳಿಸಿದರು.
ಡಿಡಿಪಿಐ ಡಾ.ಬಿ.ಕೆ.ಎಸ್. ವರ್ಧನ್ ಮಾತನಾಡಿ, ಸ್ತ್ರೀವಾದಿ ಚಿಂತನೆ, ಸ್ವಾತಂತ್ರ್ಯದ ಹಸಿವು, ಹೇಳುವ ವಿಷಯಗಳ ಬಗ್ಗೆ ನಿಖರತೆ, ಸಮಾಜಮುಖಿ ದೃಷ್ಟಿಕೋನ, ಮಾನವ ಹಕ್ಕುಗಳ ಉಳಿವಿಗೆ ಅಲ್ಲಲ್ಲಿ ಸ್ಪಷ್ಟ ಅಭಿಪ್ರಾಯಗಳು ಕೃತಿ ಓದಿಸಿಕೊಂಡು ಹೋಗುತ್ತವೆ ಎಂದರು.
ಕೃತಿಯ ಲೇಖಕಿ ವಿದ್ಯಾ ಕುಂದರಗಿ ಮಾತನಾಡಿ, ಪ್ರವಾಸದ ಉದ್ದಕ್ಕೂ ಅನುಭವಿಸಿದ ವಿಭಿನ್ನ ನೆಲೆಗಳ ಸಂಗತಿಗಳ ಅವಲೋಕನದ ಅನುಭವ ಹಂಚಿಕೊಂಡರು. ಅಧ್ಯಕ್ಷತೆವಹಿಸಿದ್ದ ಸಾಹಿತಿ ಮೋಹನ ನಾಗಮ್ಮನವರ ಮಾತನಾಡಿ, ಒಳಗಣ್ಣಿನಿಂದ ಪ್ರವಾಸದಲ್ಲಿ ಕಂಡ ಚಿತ್ರಣಗಳನ್ನು ಸ್ವದೇಶಿ ಪ್ರಜ್ಞೆಯ ನೆಲೆಯಲ್ಲಿ ಅವಲೋಕಿಸುವ, ಬೆರಗನ್ನು ಆಸ್ವಾಧಿಸುವ, ಅಮರತ್ವದ ಕಲ್ಪನೆಯಲ್ಲಿ ತೇಲುವ, ಮೌಢ್ಯ ಮರೆತು ವೈಜ್ಞಾನಿಕ ಅನ್ವೇಷಣೆಗೆ ತೆರೆದುಕೊಳ್ಳುವ ಅನೇಕ ಸಂಗತಿಗಳನ್ನು ಈ ಕೃತಿ ಒಳಗೊಂಡಿದೆ ಎಂದರು. ಪ್ರೊ. ಶಿವಶಂಕರ ಹಿರೇಮಠ, ಕವಿ ಮೋಹನ ಚೆನ್ನಿ, ಶಿಕ್ಷಣ ಇಲಾಖೆಯ ಅಧಿಕಾರಿ ಗಿರೀಶ ಪದಕಿ, ಆರ್.ಎಚ್. ಶಿವಳ್ಳಿ, ಅರ್ಜುನ ಕಂಬೋಗಿ, ಎನ್.ಎಂ. ಶಿವಳ್ಳಿ, ಎಂ.ಎ. ಕುಲಕರ್ಣಿ, ಡಾ.ಆರ್.ಬಿ. ಸಾಗರ, ಡಾ. ಬಿ.ಜಿ. ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.ಗುರು ಹಿರೇಮಠ ಸ್ವಾಗತಿಸಿದರು. ಗುರುಮೂರ್ತಿ ಯರಗಂಬಳಿಮಠ ನಿರೂಪಿಸಿದರು. ಪ್ರಭು ಹಂಚಿನಾಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

