ಧಾರವಾಡ

ಹುಬ್ಬಳ್ಳಿಯಲ್ಲಿ ದಾಖಲೆ ವೀರನ ಪ್ರದರ್ಶನ

Published On :

ಹುಬ್ಬಳ್ಳಿ: ಕಣ್ಣುಮುಚ್ಚಿ ತೆಗೆಯುತ್ತಿದ್ದಂತೆ ಬಾಯಿಯಿಂದ ತೆಂಗಿನಕಾಯಿ ಸಿಪ್ಪೆ ಸುಲಿದ, ಕಿವಿಗೆ ಹಗ್ಗ ಕಟ್ಟಿಕೊಂಡು ಕಾರು ಎಳೆದ, ಹಲ್ಲಲ್ಲಿ ಸೈಕಲ್ ಕಚ್ಚಿಕೊಂಡು ತೆಂಗಿನಮರ ಏರಿದ...!!
ಇಂಥ ರೋಮಾಂಚನಕಾರಿ ಸಾಹಸಗಳನ್ನು ಪ್ರದರ್ಶಿಸಿ ಗಿನ್ನಿಸ್ ಹಾಗೂ ಲಿಮ್ಕಾ ದಾಖಲೆ ರಚಿಸಿರುವುದು ಚನ್ನುಟ್ಟಣದ 34ರ ಹರೆಯದ ಗೌತಮ್ ವರ್ಮಾ. ಈತನ ಇಂಥ ಹಲವಾರು ಸಾಹಸ ದೃಶ್ಯಗಳು ಡಿ. 13ರಂದು ಸಂಜೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಹಾಗೂ ಡಿ. 23ರಂದು ಬೆಳಗಾವಿಯಲ್ಲಿ ಪ್ರದರ್ಶನಗೊಳ್ಳಲಿವೆ.
ಬೆಂಗಳೂರಿನ ಪ್ರೆಸ್‌ಕ್ಲಬ್ ಬಳಿ 51 ತೆಂಗಿನಕಾಯಿಗಳ ಸಿಪ್ಪೆಯನ್ನು 38 ನಿಮಿಷದಲ್ಲಿ ಸುಲಿದು 2001ರಲ್ಲಿ ಗಿನ್ನಿಸ್ ದಾಖಲೆ ಬರೆದ ಗೌತಮ್, 2002ರಲ್ಲಿ ತಮ್ಮ ಕಿವಿಗೆ ಹಗ್ಗದಿಂದ ಕಾರು ಕಟ್ಟಿ 2.18 ನಿಮಿಷಗಳಲ್ಲಿ 157 ಮೀಟರ್ ಉದ್ದ ಎಳೆಯುವ ಮೂಲಕ ಎರಡನೇ ಬಾರಿ ಗಿನ್ನಿಸ್ ದಾಖಲೆ ರಚಿಸಿದ್ದಾರೆ. 2004ರಲ್ಲಿ ಹಲ್ಲಿನಲ್ಲಿ ಸೈಕಲ್ ಕಚ್ಚಿಕೊಂಡು 40 ಅಡಿ ಎತ್ತರದ ತೆಂಗಿನಮರ ಏರಿ ಲಿಮ್ಕಾ ದಾಖಲೆ ರಚಿಸಿದ್ದಾರೆ.  ಅರ್ಧ ತಾಸಿನವರೆಗೆ ಬೈಕ್ ಹ್ಯಾಂಡಲ್ ಹಿಡಿಯದೇ ಬೈಕ್ ಮೇಲೆ ಹಲವಾರು ಆಸನ ಹಾಕುವ ಜೊತೆಗೆ ಅಲ್ಲಿಯೇ ಬಟ್ಟೆ ಬದಲಾಯಿಸುವ, ಸ್ನಾನ ಮಾಡುವ ಸಾಹಸಗಳನ್ನೂ ಗೌತಮ್ ಪ್ರದರ್ಶಿಸಿದ್ದಾರೆ. ತಮ್ಮ ಬಾಯಲ್ಲಿ ಮೂರು ನಿಮಿಷಗಳವರೆಗೆ 300 ಸ್ಟ್ರಾಗಳನ್ನಿಟ್ಟುಕೊಂಡು ದಾಖಲೆ ನಿರ್ಮಿಸಿದ್ದಾರೆ. 80 ಕೆಜಿ ಅಕ್ಕಿ ಮೂಟೆಯನ್ನು ಬಾಯಿಯಿಂದ ಮೇಲಕ್ಕೆತ್ತಿದ್ದಾರೆ. ಅಮೆರಿಕ, ಜಪಾನ್, ಥೈಲ್ಯಾಂಡ್, ಸಿಂಗಾಪುರ, ಸ್ವಿಜರ್‌ಲ್ಯಾಂಡ್, ದುಬೈ ಸೇರಿದಂತೆ ಹಲವಾರು ದೇಶಗಳಲ್ಲಿ ಸಾಹಸ ಪ್ರದರ್ಶಿಸಿ ಜನತೆಯ ಮೆಚ್ಚುಗೆಗೆ ಪಾತ್ರರಾಗಿರುವ ಗೌತಮ್, ರಾಜ್ಯ ಹಾಗೂ ದೇಶದ ವಿವಿಧೆಡೆಯೂ ತಮ್ಮ ಸಾಹಸ ಪ್ರದರ್ಶಿಸಿದ್ದಾರೆ.  ಯಾವುದೇ ಕಷ್ಟದ ಸಾಹಸವಿದ್ದರೂ ಕ್ಷಣಾರ್ಧದಲ್ಲಿ ಸಿದ್ಧಗೊಳ್ಳುವ ಗೌತಮ್ 1995ರಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ನಡೆದ ಘಟನೆ ಈ ಎಲ್ಲ ಸಾಧನೆಗೆ ಪ್ರೇರಣೆಯಂತೆ. ಆಗ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಯಲ್ಲಿದ್ದಾಗ ಸ್ನೇಹಿತರ ಪ್ರೋತ್ಸಾಹದಂತೆ ತೆಂಗಿನಕಾಯಿ ಸಿಪ್ಪೆಯನ್ನು ಗೌತಮ್ ಹಲ್ಲಿನಿಂದ ಕಿತ್ತಿದ್ದ. ಆ ಸಂದರ್ಭದಲ್ಲಿ ಸ್ನೇಹಿತರು ಹಾಗೂ ಸಾರ್ವಜನಿಕರಿಂದ ದೊರೆತ ಪ್ರೋತ್ಸಾಹ ಈ ಎಲ್ಲ ಸಾಧನೆಗೆ ಮೂಲಕ ಕಾರಣವಂತೆ.
ರಾಜ್ಯಮಟ್ಟದ ಕುಸ್ತಿಪಟುವೂ ಆಗಿರುವ ಗೌತಮ್, ಬಿಡದಿ ಬಳಿಯ ಗೊಲ್ಲಹಳ್ಳಿ ಎಂಬಲ್ಲಿ ಬಡ ಮಕ್ಕಳಿಗಾಗಿ ಉಚಿತ ಶಾಲೆಯನ್ನೂ ನಡೆಸುತ್ತಿದ್ದಾರೆ. ಇಬ್ಬರು ಯುವಕರನ್ನು ದತ್ತು ಪಡೆದು ಅವರ ಶಿಕ್ಷಣ ವೆಚ್ಚ ನಿಭಾಯಿಸುತ್ತಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ವರನಟ ದಿ. ಡಾ. ರಾಜಕುಮಾರ ಸೇರಿದಂತೆ ಹಲವಾರು ಗಣ್ಯರು ಈತನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿ. 13ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಗೌತಮ್ ಅವರ ಸಾಹಸ ಪ್ರದರ್ಶನ ಕಾರ್ಯಕ್ರಮದಲ್ಲಿ ನಟಿ ಹಾಗೂ ಸಂಸದೆ ರಮ್ಯಾ ಹಾಗೂ ಡಿ. 23ರ ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪೂನಮ್ ಪಾಂಡೆ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕೇರಳದಲ್ಲಿ ಜಾರ್ಜ್ ಎಂಬುವವರು 5 ನಿಮಿಷದಲ್ಲಿ ಮೂರು ತೆಂಗಿನಕಾಯಿ ಸುಲಿದು ಜಾಗತಿಕ ದಾಖಲೆ ರಚಿಸಿದ್ದರು. ನಾನು  3 ನಿಮಿಷದಲ್ಲಿ 3 ತೆಂಗಿನಕಾಯಿ ಸಿಪ್ಪೆ ಸುಲಿಯುವ ಮೂಲಕ ಅವರ ದಾಖಲೆ ಹಿಂದಿಕ್ಕಿದೆ. ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸ ಇಂಥ ಸಾಹಸಕ್ಕೆ ಮೂಲ ಕಾರಣ.
 ಗೌತಮ್ ವರ್ಮಾ



-ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.