ಧಾರವಾಡ

ಧಾರವಾಡದಲ್ಲಿ ಇಂದಿನಿಂದ ಸಂಗೀತೋತ್ಸವ

Published On :

ಧಾರವಾಡ: ಸಿತಾರ ರತ್ನ ರಹಿಮತ್ ಖಾನ್‌ರ 59ನೇ ಪುಣ್ಯತಿಥಿ ಅಂಗವಾಗಿ ಧಾರವಾಡದ ಸೃಜನಾ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರದಲ್ಲಿ ಸಿತಾರ್ ರತ್ನ ಸಮಿತಿಯು ಡಿ. 6, 7 ಹಾಗೂ 8 ರಂದು ದೇಶದ ಖ್ಯಾತ ಕಲಾವಿದರಿಂದ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಿದೆ.
ಧಾರವಾಡದ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರ ಪ್ರತಿಷ್ಠಾನ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನವದೆಹಲಿಯ ಸಂಗೀತ ನಾಟಕ ಅಕ್ಯಾಡೆಮಿ, ಮುಂಬೈನ ಜಿ.ಆರ್. ಕುಲಕರ್ಣಿ, ಧಾರವಾಡದ ಭಾರತೀಯ ಸಂಗೀತ ವಿದ್ಯಾಲಯ ಅವರ ಪ್ರಾಯೋಜಕತ್ವದಲ್ಲಿ ಈ ಸಂಗೀತೋತ್ಸವ ನಡೆಯಲಿದೆ.
ಡಾ. ಸುಧಾಂಶು ಕುಲಕರ್ಣಿ, ಗುರುಪ್ರಸಾದ ಹೆಗಡೆ (ಸಂವಾದಿನಿ), ರವೀಂದ್ರ ಯಾವಗಲ್, ರಾಜೇಂದ್ರ ನಾಕೋಡ, ಶ್ರೀಧರ ಮಾಂಡ್ರೆ, ಪ್ರಸೂನ್ ಚಟರ್ಜಿ (ತಬಲಾ) ಸಹ ಕಲಾವಿದರಾಗಿ ಪಾಲ್ಗೊಳ್ಳಲಿದ್ದಾರೆ.
ಇತ್ತೀಚೆಗೆ ನಿಧನರಾದ ಸಿತಾರ ಮಾಂತ್ರಿಕ ಪಂ. ರವಿಶಂಕರ ಹಾಗೂ ಗಾನ ದಿಗ್ಗಜ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರಿಗೆ ಸಂಗೀತೋತ್ಸವವನ್ನು ಸಮರ್ಪಿಸಿದೆ.
ಡಿ. 6 ರಂದು ಸಂಜೆ 5.45ಕ್ಕೆ ಸಂಗೀತೋತ್ಸವದ ಪ್ರಥಮ ದಿನದಂದು ಪಣಜಿಯ ಛೋಟೆ ರಹಿಮತ್ ಖಾನರ ಅವರ ಸಿತಾರ ವಾದನ ಹಾಗೂ ಪುಣೆಯ ಮಂಜರಿ ಕರ್ವೇ ಆಳೆಗಾಂವಕರ ಅವರಿಂದ ಗಾನ ಸುಧೆ ಹರಿದು ಬರಲಿದೆ.
1. ಛೋಟೆ ರೆಹಮತ್ ಖಾನ್, ಪಣಜಿ - ಸಿತಾರ ವಾದನ: ಧಾರವಾಡದಲ್ಲಿ ಜನಿಸಿದ ಉ. ಛೋಟೆ ರೆಹಮತ್ ಖಾನ್ ಅವರದು ಪಾರಂಪರಿಕ ಸಿತಾರ ವಾದಕರ ಮನೆತನ.  ಬಾಲ್ಯದಿಂದಲೇ ಸಿತಾರ್ ವಾದನದ ಪರಿಸರದಲ್ಲಿ ಬೆಳೆದ ಛೋಟೆ ಖಾನ್ ಅವರಿಗೆ ಸಹಜವಾಗಿ ಸಂಗೀತ ಓತಪ್ರೋತ. ತಮ್ಮ 8ನೇ ವಯಸ್ಸಿನಿಂದಲೇ ಸಿತಾರ ವಾದನದ ಕಲಿಕೆ ಪ್ರಾರಂಭ.  
2. ಮಂಜರಿ ಕರ್ವೇ ಅಳೆಗಾಂವಕರ, ಪುಣೆ- ಗಾಯನ: ಸುಮಧುರ ಕಂಠದ ಪುಣೆಯ ಮಂಜಿರಿ ಕರ್ವೇ ಅಳೆಗಾಂವಕರ ಅವರದು ಸಂಗೀತಗಾರರ ಮನೆತನದ ಹಿನ್ನೆಲೆಯುಳ್ಳವರು. ತಂದೆ ಮೋಹನರಾವ್ ಕರ್ವೇ ಅತ್ಯುತ್ತಮ ಗಾಯಕರು. ದಿಗ್ಗಜ ಪಂ. ರಾಮಕೃಷ್ಣಬುವಾ ವಝೆ ಅವರ ಶಿಷ್ಯರು. ಡಿ. 7ರ ಸಂಗೀತೋತ್ಸವದ ದ್ವಿತೀಯ ದಿನದಂದು ಸಂಜೆ 5.45ಕ್ಕೆ ಮುಂಬೈನ ಸಂದೀಪ ಮತ್ತು ಸಂಗೀತ ಮಿಶ್ರಾ ಸಹೋದರರಿಂದ ದ್ವಂದ್ವ ಸಾರಂಗಿ ವಾದನ ಹಾಗೂ ನಾಸಿಕ್‌ನ ಪ್ರಸಾದ ಖಾಪರ್ಡೆ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
3. ಮುಂಬೈನ ಸಂದೀಪ ಹಾಗೂ ಸಂಗೀತ ಮಿಶ್ರಾ ಅವರಿಂದ ದ್ವಂದ್ವ ಸಾರಂಗಿ ವಾದನ: ಬನಾರಸ್‌ನ ಸಾರಂಗಿ ಘರಾಣೆಯ ಮಿಶ್ರಾ ಸಹೋದರರು ಪಾರಂಪರಿಕ ಸಂಗೀತಗಾರರ ಮನೆತನದ ಹಿನ್ನೆಲೆಯುಳ್ಳವರು.
4. ಪ್ರಸಾದ ಖಾಪರ್ಡೆ, ನಾಸಿಕ-ಗಾಯನ: ವಿದರ್ಭದ ಗಟಾಂಜಿ ಪುಟ್ಟ ಗ್ರಾಮದವರಾದ ಪ್ರಸಾದ ಖಾಪರ್ಡೆ ಅವರದು ಸಂಗೀತ ಕಲೋಪಾಸಕರ ಮನೆತನ. ಪಂ. ಬಾಲೇರಾವ್, ಪಂ. ಡಿ.ವಿ. ಪಣಕೆ, ವಿದುಷಿ ಸುಮನ್‌ತಾಯಿ ಚೌಧರಿ ಅವರಲ್ಲಿ ಸಂಗೀತಾಭ್ಯಾಸಗೈದ ಪ್ರಸಾದ ಅವರು ಅಮರಾವತಿ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಡಿ. 8ರ ಸಂಗೀತೋತ್ಸವದ ಮೂರನೇ ದಿನ ಭಾನುವಾರ ಬೆಳಗ್ಗೆ 9.45ಕ್ಕೆ ಬೆಂಗಳೂರಿನ ಪ್ರವೀಣ ಗೋಡಖಿಂಡಿ ಅವರ ಬಾನ್ಸುರಿ ಹಾಗೂ ಸಂಜೆ 5.45ಕ್ಕೆ ಮುಂಬೈನ ಶಾಲ್ಮಲಿ ಜೋಶಿ ಅವರ ಗಾಯನ ಮತ್ತು ಕೊಲ್ಕತಾದ ದೇಬೋಶಿಶ್ ಭಟ್ಟಾಚಾರ್ಯ ಅವರಿಂದ ಗಿಟಾರ್ ವಾದನದ ನಿನಾದ ರಿಂಗಣಿಸಲಿದೆ.
5. ಪ್ರವೀಣ ಗೋಡಖಿಂಡಿ, ಬೆಂಗಳೂರು - ಬಾನ್ಸುರಿ ವಾದನ: ಸಂಗೀತಗಾರರ ಮನೆತನದಲ್ಲಿ ಜನಿಸಿದ ಪ್ರವೀಣ ಗೋಡಖಿಂಡಿ, ಬಾನ್ಸುರಿ ವಾದನದ ದೈತ್ಯ ಪ್ರತಿಭೆ. ತಮ್ಮ 3ನೇ ವರ್ಷದಿಂದಲೇ ಬಾನ್ಸುರಿಯೊಂದಿಗೆ ಅವಿನಾಭಾವ ಸಂಬಂಧವಿರಿಸಿಕೊಂಡಿರುವ ಪ್ರವೀಣಗೆ ಖ್ಯಾತ ಗಾಯಕ ಹಾಗೂ ಬಾನ್ಸುರಿ ವಾದಕರಾದ ತಂದೆ ಪಂ. ವೆಂಕಟೇಶ ಗೋಡಖಿಂಡಿ ಅವರು ಏಕೈಕ ಗುರು.
6. ಶಾಲ್ಮಲಿ ಜೋಶಿ, ಮುಂಬೈ-ಗಾಯನ
ಸುಮಧುರ ಕಂಠದ ಮುಂಬೈನ ಶಾಲ್ಮಲಿ ಜೋಶಿ ಅವರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು. ತಾಯಿ ಮಾಧುರಿ ಕುಲಕರ್ಣಿ ಸಂಗೀತ ಕಲಿಕೆಗೆ ಶ್ರೀಕಾರ ಹಾಕಿದಾಗ ಶಾಲ್ಮಲಿ ಅವರಿಗೆ ಮೂರು ವರ್ಷ. ಸುಮಾರು 15 ವರ್ಷಗಳ ಸಂಗೀತಾಧ್ಯಯನಗೈದ ಶಾಲ್ಮಲಿ, ಗ್ವಾಲಿಯರ್, ಕಿರಾನಾ ಹಾಗೂ ಜೈಪುರ-ಅತ್ರೌಲಿ ಘರಾಣೆಯ ವೈಶಿಷ್ಟ್ಯಗಳನ್ನು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡರು.
7. ದೇಬಶಿಶ್ ಭಟ್ಟಾಚಾರ್ಯ, ಕೋಲ್ಕತ್ತಾ- ಗಿಟಾರ್ ವಾದನ: ಸಂಗೀತಗಾರರ ಮನೆತನದ ಹಿನ್ನೆಲೆಯುಳ್ಳ ದೇಬಶಿಶ್ ಭಟ್ಟಾಚಾರ್ಯ ಅವರು ದೇಶದ ಉದಯೋನ್ಮುಖ ಗಿಟಾರ್ ವಾದಕರು. ಕೋಲ್ಕತ್ತಾ ಆಕಾಶವಾಣಿಯಿಂದ ದೇಬಶಿಶ್ ಅವರ ಕಾರ್ಯಕ್ರಮ ಬಿತ್ತರಗೊಂಡಾಗ ಕೇವಲ ನಾಲ್ಕು ವರ್ಷ. ಫರೂಕಾಬಾದ್ ಘರಾಣೆಯ ತಬಲಾ ದಿಗ್ಗಜ ಉ. ಕರಾಮತುಲ್ಲಾ ಖಾನರಿಂದ ಸೈ ಎನಿಸಿಕೊಂಡ ಸ್ಲೈಡ್ ಗಿಟಾರ್ ಪ್ರತಿಭೆ ದೇಬ ಶಿಶ್ ಭಟ್ಟಾಚಾರ್ಯ. ದೇಬಶಿಶ್ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ, ಭಾರತ ಸರ್ಕಾರದ ಪ್ರಸಾರ ಭಾರತಿಯಿಂದ ಉಚ್ಚ ಮಟ್ಟದ ಕಲಾವಿದ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.