ಧಾರವಾಡ

ಜಿ.ಎಸ್. ಶಿವರುದ್ರಪ್ಪ ನಿಧನ: ಶ್ರದ್ಧಾಂಜಲಿ

Published On :

ಅಣ್ಣಿಗೇರಿ: ರಾಷ್ಟಕವಿ ಕುವೆಂಪು ಅವರ ಆತ್ಮೀಯ ಶಿಷ್ಯರಾದ ಜಿ.ಎಸ್. ಶಿವರುದ್ರಪ್ಪ ಗುರುವಿನ ನಂತರ ರಾಷ್ಟ್ರಕವಿಯಾದರು. ಕವಿಯ ಆದರ್ಶ ಬದುಕು ಎಲ್ಲರಿಗೂ ದಾರಿ ದೀಪವಾಗಬೇಕು ಎಂದು ಸ್ಥಳೀಯ ಎನ್.ಎಸ್. ಹೂಗಾರ ಸಮೂಹ ಶಿಕ್ಷಣ ಸಂಸ್ಥೆ ಆಯೋಜಿಸಿದ್ಧ ಶ್ರದ್ಧಾಂಜಲಿ ಸಭೆಯಲ್ಲಿ  ಪ್ರಾಚಾರ್ಯ ಎಸ್.ಎಸ್. ಹರ್ಲಾಪುರ ಹೇಳಿದರು.
ಉಪನ್ಯಾಸಕ ಬಿ.ಎಸ್. ನಲವಡಿ, ಪ್ರಧಾನ ಗುರುಮಾತೆ ಫರೀದಾ ತಹಸೀಲ್ದಾರ್, ದೇವಮ್ಮ ಕುರಬರ ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪನವರ ಜೀವನ, ಸಾಹಿತ್ಯ ಕ್ಷೇತ್ರದ ಸೇವೆ ಕುರಿತು ಮಾತನಾಡಿದರು.
ರೇಣುಕಾ ಬಡಿಗೇರ ಜಿ.ಎಸ್. ಶಿವರುದ್ರಪ್ಪನವರ 'ಎದೆ ತುಂಬಿ ಹಾಡಿದೆನು' ಕವನ ಹಾಡಿದರು. ಸಮಾರಂಭದಲ್ಲಿ ಮಾನ ಆಚರಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎನ್.ಎಸ್. ಹೂಗಾರ ಸಮೂಹ ಶಿಕ್ಷಣ ಸಂಸ್ಥೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜಿಎಸ್ಸೆಸ್ ಕನ್ನಡದ ಮೇರು ಕವಿ
ಹುಬ್ಬಳ್ಳಿ: ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ನಿಧನರಾದ ಹಿನ್ನೆಲೆಯಲ್ಲಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸಂತಾಪ ಸೂಚಕ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಶಿವರುದ್ರಪ್ಪ ಕಠೋರ ಸತ್ಯವನ್ನು ಮೆದುದನಿಯಲ್ಲಿ ಹೇಳಿದ ಕನ್ನಡದ ಮೇರು ಕವಿ. ಅವರ ಕಾವ್ಯಗಳು ಮನಮುಟ್ಟುವಂತಿವೆ. ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಸದಾನಂದ ಡಂಗನವರ, ಉಮೇಶ ಉಪ್ಪಾರ, ಲಕ್ಷ್ಮೀ ಬಾರಕೇರ, ಸಿದ್ದಪ್ಪ, ಈರಣ್ಣ ಹರಿಜನ, ಸಂಗೀತಾ, ಸರಸ್ವತಿ ತೇರದಾಳ, ಗಣೇಶ ಯರಕೇರಿ ಮತ್ತಿತರರು ಶಿವರುದ್ರಪ್ಪ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.
ರಜೆ ನೀಡದ ಶಾಲೆಗಳ ಶಿಕ್ಷಕರ ಬಂಧಿಸಿ
ಧಾರವಾಡ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನದ ನಿಮಿತ್ತ ಸರ್ಕಾರ ರಾಜ್ಯಾದ್ಯಂತ ಒಂದು ದಿನ ಸರ್ಕಾರಿ ರಜೆ ಘೋಷಿಸಿದ್ದರೂ ಕೆಲ ಖಾಸಗಿ ಶಾಲಾ- ಕಾಲೇಜುಗಳು ರಜೆ ನೀಡದೆ ಅವಮಾನವೆಸಗಿರುವ ಆಡಳಿತ ಮಂಡಳಿ ಹಾಗೂ ಶಿಕ್ಷಕರನ್ನು ಬಂಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕದ ಶಿವಸೋಮಣ್ಣ ನಿಟ್ಟೂರ ಒತ್ತಾಯಿಸಿದ್ದಾರೆ.
ಜಿಎಸ್ಸೆಸ್ ನಿಧನ: ಗಣ್ಯರು, ಸಾಹಿತಿ, ಕಲಾವಿದರ ಸಂತಾಪ
ಕಲಘಟಗಿ: ದೇಶ ಕಂಡ ವೈಚಾರಿಕ ಚಿಂತನೆಯ ಕವಿ, ಸಾಹಿತಿ ಡಾ. ಜಿ.ಎಸ್. ಶಿವರುದ್ರಪ್ಪನವರ ನಿಧನಕ್ಕೆ ತಾಲೂಕಿನ ಗಣ್ಯರು, ಸಾಹಿತಿಗಳು ಹಾಗೂ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ. ಕ್ರೆಡಲ್ ಮಾಜಿ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಸಾಹಿತಿಗಳಾದ ಎಂ.ಎಂ. ಪುರದನಗೌಡರ, ಎ.ಬಿ. ಅರ್ಕಸಾಲಿ, ವೈ.ಬಿ. ಭಗವತಿ, ಪ್ರಭು ರಂಗಾಪುರ, ಮಲ್ಲಯ್ಯ ಗೋಡಿಮನಿ, ಎಂ.ಆರ್. ತೋಟಗಂಟಿ, ಪರಮಾನಂದ ವಡೆಯರ್, ಕೆ.ಬಿ. ಪಾಟೀಲ ಕುಲಕರ್ಣಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೇಕಾರ, ನ್ಯಾಯವಾದಿ ಕೆ.ಬಿ. ಗುಡಿಹಾಳ, ಬಿ.ವಿ. ಪಾಟೀಲ, ಉಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಅನಿಲ ಪಮ್ಮಾರ, ಅಶೋಕ ಲಮಾಣಿ, ಎಂ.ಎಸ್. ಧನಿಗೊಂಡ ಮುಂತಾದವರು ಸಂತಾಪ ಸೂಚಿಸಿದ್ದಾರೆ.
ವಾಜಪೇಯಿ ಜನ್ಮದಿನ: ಬೃಹತ್ ರಕ್ತದಾನ ಶಿಬಿರ
ಹುಬ್ಬಳ್ಳಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 89ನೇ ಜನ್ಮ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಹು-ಧಾ ಮಹಾನಗರ ಜಿಲ್ಲಾ ಘಟಕ ಡಿ. 25ರಂದು ಬೆಳಗ್ಗೆ 10ಕ್ಕೆ ದೇಶಪಾಂಡೆನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹಾಗೂ ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಲಿದ್ದಾರೆ. ಶಿಬಿರದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡಲಿದ್ದಾರೆ. ಅಲ್ಲದೇ, ಮಹಾನಗರದ ಎಲ್ಲ ವಾರ್ಡ್‌ಗಳಲ್ಲಿ ಉಚಿತ ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ ಶಿಬಿರಗಳೂ ನಡೆಯಲಿವೆ. ಮಹಿಳಾ ಮೋರ್ಚಾದ ವತಿಯಿಂದ ಹೆಣ್ಣು ಮಕ್ಕಳಿಗಾಗಿ ರಂಗೋಲಿ ಹಾಗೂ ಮೇಹಂದಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಯುವ ಮೋರ್ಚಾ ವತಿಯಿಂದ ವಿವಿಧ ಶಾಲೆಗಳಲ್ಲಿ ಉಚಿತ ನೋಟ್‌ಬುಕ್ ವಿತರಿಸಲಾಗುವುದು ಎಂದೂ ಜಿಲ್ಲಾ ವಕ್ತಾರ ಶ್ರೀನಿವಾಸ ಶಾಸ್ತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಮಲಮಗಳು ನಾಟಕ ಪ್ರದರ್ಶನ
ಧಾರವಾಡ: ಇಲ್ಲಿನ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಗದಗ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ನಾಟ್ಯ ಸಂಘ ಡಿ. 25ರಂದು ಮಧ್ಯಾಹ್ನ 3ಕ್ಕೆ ಮಲಮಗಳು ನಾಟಕ ಪ್ರದರ್ಶನವಾಗಲಿದೆ. ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ ಉದ್ಘಾಟಿಸುವರು. ಅತಿಥಿಗಳಾಗಿ ಪಾಲಿಕೆ ಸದಸ್ಯ ಸುಭಾಸ ಶಿಂಧೆ, ದೀಪಕ ಚಿಂಚೋರೆ, ಸುನೀಲ ಪಾಟೀಲ, ಶ್ರೀಧರ ಫಂಜಿಕರ, ಬಿ.ಐ. ಈಳಗೇರ, ಎಸ್.ಎಸ್. ಚಿಕ್ಕಮಠ, ಗುರುರಾಜ ಹುಣಸಿಮರದ ಭಾಗವಹಿಸಲಿದ್ದಾರೆ. ಸಾಹಿತಿ ಮೋಹನ ನಾಗಮ್ಮನವರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
25ರಂದು ಆಡಿಶಿಯನ್
ಹುಬ್ಬಳ್ಳಿ: ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಶನ್ ಆಶ್ರಯದಲ್ಲಿ ನಡೆಯುತ್ತಿರುವ ಜ್ಯೂನಿಯರ್ ವೈಸ್ ಆಫ್ ನಾರ್ಥ್ ಕರ್ನಾಟಕ ಮತ್ತು ಸೀನಿಯರ್ ವೈಸ್ ಆಫ್ ನಾರ್ಥ್ ಕರ್ನಾಟಕದ 2ನೇ ಸುತ್ತಿನ ಆಡಿಶಿಯನ್ ಡಿ. 25ರಂದು ನಡೆಯಲಿದೆ. ಅಂದು ಸಂಜೆ 4.30ಕ್ಕೆ ಚಿತ್ರಗೀತೆಗಳ ಹಾಡುವ ಸ್ಪರ್ಧೆಯನ್ನು ಬಾಲಿವುಡ್ ಚಿತ್ರ ನಿರ್ಮಾಪಕ ಮಹೇಶ ತಲಕಾಡ ಚಾಲನೆ ನೀಡುವರು. ಪಂ. ಮಣಿಪ್ರಸಾದ, ವಿಜಯಾ ಜಾಧವ, ಜಗನ್ನಾಥ ಚಾಟ್ನಿ ಅತಿಥಿಯಾಗಿ ಪಾಲ್ಗೊಳ್ಳುವರು. ಅವಿಭಜಿತ ಧಾರವಾಡ ಜಿಲ್ಲೆಯವರನ್ನು ಹೊರತಾಗಿ ಉತ್ತರ ಕರ್ನಾಟಕದ ಇನ್ನಿತರ ಜಿಲ್ಲೆಯ 70 ಗಾಯಕರು ಆಡಿಶನ್ ನೀಡಲಿದ್ದಾರೆ. ಮನಮೋಹಕ ನೃತ್ಯ ಕೂಡ ಪ್ರಸ್ತುತ ಪಡಿಸಲಿದ್ದಾರೆ. ಭಾರತೀಯ ಚಿತ್ರರಂಗದ ಶತಮಾನೋತ್ಸವ ಆಚರಣೆಯ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಮನೋಜ ಹಾನಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೈ ಕಾರ್ಯಕಾರಿಣಿ ಸಭೆ
ಹುಬ್ಬಳ್ಳಿ: ಗಿರಣಿಚಾಳದ ಕಾಂಗ್ರೆಸ್ ಜನಸಂಪರ್ಕ ಕಾರ್ಯಾಲಯದಲ್ಲಿ ಡಿ. 26ರಂದು ಸಂಜೆ 5 ಗಂಟೆಗೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎ. ಎಂ. ಹಿಂಡಸಗೇರಿ ಅಧ್ಯಕ್ಷತೆ ವಹಿಸುವರು. ಬ್ಲಾಕ್ ವ್ಯಾಪ್ತಿಗೆ ಒಳಪಡುವ ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಿರೇಮನಿ ತಿಳಿಸಿದ್ದಾರೆ.
ದ್ವಾದಶ ರಂಗಪ್ರವೇಶ ಸಮಾರೋಪ ಕಾರ್ಯಕ್ರಮ
ಧಾರವಾಡ: ಉಪಾಧ್ಯೆ ನೃತ್ಯ ವಿಹಾರ ವತಿಯಿಂದ ಇಲ್ಲಿನ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಡಿ. 27ರಂದು ಬೆಳಗ್ಗೆ 10.30ಕ್ಕೆ 59ನೇ ಸಂಗೀತ- ನೃತ್ಯೋತ್ಸವ ಮತ್ತು ಅಂದು ಸಂಜೆ 5ಕ್ಕೆ ದ್ವಾದಶ ರಂಗಪ್ರವೇಶ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಸಮೀರ ಶುಕ್ಲಾ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡ ಅಧ್ಯಕ್ಷತೆ ವಹಿಸುವರು. ಡಾ. ಸೌಭಾಗ್ಯ ಕುಲಕರ್ಣಿ, ಕೃಷ್ಣ ಜೋಶಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಗುರುರಾಜ ಹುಣಸಿಮರದ ಉದ್ಘಾಟಿಸುವರು. ಶಾಸಕ ಅರವಿಂದ ಬೆಲ್ಲದ, ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಭಾಗವಹಿಸಲಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಜಾನನ ಮಹಾಲೆ ಅವರನ್ನು ಸನ್ಮಾನಿಸಲಾಗುವುದು.
ಪ್ರವಚನ, ಉಪನ್ಯಾಸ
ಧಾರವಾಡ: ಗುರುದೇವ ಆತ್ಮಾನಂದರ 31ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಇಲ್ಲಿನ ಬಾರಾಕೊಟ್ರಿ ರಸ್ತೆಯ ಬಳಿಯ ರಾಘವೇಂದ್ರ ನಗರದಲ್ಲಿನ ಗುರುದೇವ ಆತ್ಮಾನಂದ ಆಶ್ರಮದಲ್ಲಿ ಡಿ. 27ರಿಂದ 29ರ ವರೆಗೆ ಪ್ರತಿನಿತ್ಯ ಸಂಜೆ 6ಕ್ಕೆ ಅಧ್ಯಾತ್ಮ ಪ್ರವಚನ ಮತ್ತು ಉಪನ್ಯಾಸ ನಡೆಯಲಿದೆ. ಸುರೇಬಾನ ಮನಿಹಾಳದ ಸಮರ್ಥ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು. ಸಂಸದ ಪ್ರಹ್ಲಾದ ಜೋಶಿ ಅತಿಥಿಗಳಾಗಿ ಭಾಗವಹಿಸಲಿದ್ದು, ಪ್ರೊ. ಎನ್.ಎ. ಮೂಲಿಮನಿ ಉಪನ್ಯಾಸ ನೀಡುವರು.
ಪಂ. ಶ್ರೀಕಂಠಶಾಸ್ತ್ರಿ ಪುತ್ಥಳಿ ಅನಾವರಣ 28ಕ್ಕೆ
ನವಲಗುಂದ: ತಾಲೂಕಿನ ನಲವಡಿಯಲ್ಲಿ ಡಿ. 28ರಂದು ಸಂಜೆ 5ಕ್ಕೆ ಕರ್ನಾಟಕ ಕವಿಚಂದ್ರ ಪಂ. ಶ್ರೀಕಂಠಶಾಸ್ತ್ರಿಗಳ 47ನೇ ಪುಣ್ಯಸ್ಮರಣೆ ಹಾಗೂ ಪುತ್ಥಳಿ ಅನಾವರಣ ಸಮಾರಂಭ ನಡೆಯಲಿದೆ. ಗದಗ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಮೂರ್ತಿ ಅನಾವರಣಗೊಳಿಸುವರು. ಪ್ರತಿಷ್ಠಾನದ ಅಧ್ಯಕ್ಷ ವೇಮನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಸಂಸದ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕ ಎನ್.ಎಚ್. ಕೋನರಡ್ಡಿ, ಕವಿವಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಬಿ.ಸಿ. ಜವಳಿ ಉಪನ್ಯಾಸ ನೀಡುವರು. ಅತಿಥಿಗಳಾಗಿ ನಾಗರಾಜ ಛಬ್ಬಿ, ಶಂಕರ ಪಾಟೀಲ ಮುನೇನಕೊಪ್ಪ, ಸುರೇಶ ಗಾಣಗೇರ, ಬಿ.ಡಿ. ಹಿರೇಗೌಡರ, ವಿ.ಡಿ. ಅಂದಾನಿಗೌಡರ, ಸಿ.ಎಸ್. ಹೊಸಮಠ ಸೇರಿದಂತೆ ಮತ್ತಿತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.