ಧಾರವಾಡ

ಸಮಗ್ರ ವಚನ ಸಾಹಿತ್ಯ ಸಂಪುಟ ರಚನೆಗೆ ರು. 60 ಲಕ್ಷ

Published On :

ಧಾರವಾಡ: ಶರಣರ ಎಲ್ಲ ವಚನಗಳ ತಿರುಳು ನಮ್ಮ ಸಂವಿಧಾನದಲ್ಲಿದೆ. ಹೀಗಾಗಿ, ಸಮಗ್ರ ವಚನ ಸಾಹಿತ್ಯ ಸಂಪುಟ ರಚಿಸುವ ಕಾರ್ಯ ಸ್ತುತ್ಯರ್ಹ. ಈ ಉದ್ದೇಶಕ್ಕಾಗಿ ಸರ್ಕಾರದಿಂದ ರು. 60 ಲಕ್ಷ ಅನುದಾನ ಒದಗಿಸುವ ಭರವಸೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ನೀಡಿದ್ದಾರೆ.
ಇಲ್ಲಿನ ಮುರುಘಾಮಠದಲ್ಲಿ ಶುಕ್ರವಾರದಿಂದ ಆರಂಭವಾದ ಮೂರು ದಿನಗಳ 11ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಮಗ್ರ ವಚನ ಸಾಹಿತ್ಯ ಸಂಪುಟ ರಚನೆಗಾಗಿ ರು. 60 ಲಕ್ಷ ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಶೀಘ್ರದಲ್ಲಿಯೇ ಈ ಅನುದಾನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ರಚಿಸಿರುವ ಪ್ರತಿಯೊಂದು ವಚನಗಳು ಸಂವಿಧಾನದಲ್ಲಿಯ ಅಂಶಗಳನ್ನು ಒಳಗೊಂಡಿದ್ದು, ಸಂವಿಧಾನವನ್ನು ಕಾನೂನಾತ್ಮಕವಾಗಿ ಜೀವನದಲ್ಲಿ ಅಳವಡಿಸಲಾಗುತ್ತಿದೆ. ಆದರೆ, ವಚನ ಸಾಹಿತ್ಯವನ್ನು ಯಾರೊಬ್ಬರೂ ತಮ್ಮ ಬದುಕಿನಲ್ಲಿ ಇಂದಿಗೂ ಅಳವಡಿಸಿಕೊಳ್ಳುತ್ತಿಲ್ಲ. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನ ಹೇಗಿರಬೇಕು ಎಂಬುದನ್ನು ವಚನಗಳು ತಿಳಿಸುತ್ತವೆ. ನಾವಿಂದು ವಚನ ಸಾಹಿತ್ಯವನ್ನು ಮೆರವಣಿಗೆ ಮಾಡುತ್ತೇವೆ. ಅದರ ಕುರಿತು ಮಾತನಾಡುತ್ತೇವೆ. ಆದರೆ, ಅವುಗಳಲ್ಲಿನ ಅಂಶವನ್ನು ಮಾತ್ರ ಜೀವನದಲ್ಲಿ ಮೈಗೂಡಿಸಿಕೊಳ್ಳುತ್ತಿಲ್ಲ ಎಂದರು.
ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮೇಳನಕ್ಕೆ ಚಾಲನೆ ನೀಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಅಜಯಕುಮಾರ ಸಿಂಗ್ ಹಾಗೂ ಸಮ್ಮೇಳನದ ಪೂರ್ವಾಧ್ಯಕ್ಷ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ ಮಾತನಾಡಿದರು. ನಾಡೋಜ ಚನ್ನವೀರ ಕಣವಿ ಪರಿಷತ್ತಿನ ಪ್ರಕಟಣೆಗಳ ಲೋಕಾರ್ಪಣೆ ಮಾಡಿದರು. ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು, ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಡಾ. ಪಾಟೀಲ ಪುಟ್ಟಪ್ಪ, ಶಾಸಕರಾದ ಬಸವರಾಜ ಹೊರಟ್ಟಿ, ವೀರಣ್ಣ ಮತ್ತಿಕಟ್ಟಿ, ವಿನಯ ಕುಲಕರ್ಣಿ, ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಪಾಲಿಕೆ ಸದಸ್ಯರಾದ ದೀಪಕ ಚಿಂಚೋರೆ, ಯಾಸೀನ ಹಾವೇರಪೇಟ, ಶಂಭು ಹೆಗಡಾಳ ಇದ್ದರು.
12ನೇ ಶತಮಾನದಲ್ಲಿ ಬಸವಣ್ಣನವರು ರಚಿಸಿರುವ ಪ್ರತಿಯೊಂದು ವಚನಗಳು ಸಂವಿಧಾನದಲ್ಲಿಯ ಅಂಶಗಳನ್ನು ಒಳಗೊಂಡಿದ್ದು, ಸಂವಿಧಾನವನ್ನು ಕಾನೂನಾತ್ಮಕವಾಗಿ ಜೀವನದಲ್ಲಿ ಅಳವಡಿಸಲಾಗುತ್ತಿದೆ. ಆದರೆ, ವಚನ ಸಾಹಿತ್ಯವನ್ನು ಯಾರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿಲ್ಲ.
- ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ
ಶರಣ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಧಾರವಾಡ: ಮುರುಘಾಮಠದ ಆವರಣದಲ್ಲಿ ಮೂರು ದಿನಗಳು ನಡೆಯುವ 11ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳು ಉದ್ಘಾಟಿಸಿದರು. ಹಿರಿಯ ವಿದ್ವಾಂಸ ಉತ್ತರ ಪ್ರದೇಶ ಮೂಲಕ ಅಜಯಕುಮಾರ ಸಿಂಗ್ ಅವರ ಸರ್ವಾಧ್ಯಕ್ಷರಾಗಿರುವ ಈ ಸಮ್ಮೇಳನ ಯಶಸ್ವಿಯಾಗಿ ಆರಂಭವಾಗಿದ್ದು, ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಗೊ.ರು. ಚನ್ನಬಸಪ್ಪ, ಸಚಿವ ಎಚ್.ಕೆ. ಪಾಟೀಲ, ಶಾಸಕ ವಿನಯ ಕುಲಕರ್ಣಿ ಮತ್ತಿತರರು ಇದ್ದರು. 1ನೇ ಚಿಂತನಗೋಷ್ಠಿಯಲ್ಲಿ ಭಕ್ತಿ ಚಳವಳಿ-ವ್ಯವಸ್ಥೆಗೆ ಪ್ರತಿಭಟನೆ ಕುರಿತು ಬೆಂಗಳೂರಿನ ಡಾ. ಬಸವರಾಜ ಕಲ್ಗುಡಿ, ಹಾಸನದ ಜ.ಹೊ. ನಾರಾಯಣಸ್ವಾಮಿ ಮಾತನಾಡಿದರು. ಗುರು ಸಮಾವೇಶದಲ್ಲಿ ಸಮಾಜ ಸೇವೆಯಲ್ಲಿ ಮಠಗಳ ಕುರಿತು ಸಾಣೆಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಸ್ವಾಮಿ ವಿಷಯ ಮಂಡಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮ್ಮೇಳನದಲ್ಲಿ ಇಂದೇನು?
ಸಮ್ಮೇಳನದ ಅಂಗವಾಗಿ ಶನಿವಾರ ಬೆಳಿಗ್ಗೆ 9ಕ್ಕೆ ವಚನ ಸಾಹಿತ್ಯ-ಪರ್ಯಾಯ ಸಂಸ್ಕೃತಿ ಕುರಿತ ಚಿಂತನ ಗೋಷ್ಠಿ ನಡೆಯಲಿದೆ. ಡಾ. ಸಿ. ವೀರಣ್ಣ ಅಧ್ಯಕ್ಷತೆ ವಹಿಸುತ್ತಾರೆ. ಡಾ. ರಂಜಾನ ದರ್ಗಾ, ಪ್ರೊ. ಎ.ಎಲ್. ನಾಗಭೂಷಣಸ್ವಾಮಿ ಹಾಗೂ ಡಾ. ಎಸ್.ಜಿ. ಸಿದ್ದರಾಮಯ್ಯ ಭಾಗವಹಿಸುತ್ತಾರೆ. ಬೆಳಗ್ಗೆ 11ಕ್ಕೆ ಪ್ರಜಾಪ್ರಭತ್ವದಲ್ಲಿ ಧರ್ಮದ ಸ್ಥಾನ, ಮಧ್ಯಾಹ್ನ 3ಕ್ಕೆ ಮಹಿಳೆಯರು-ಸಾಮಾಜಿಕ ಸಮಾನತೆ ಕುರಿತು ಸಂವಾದ ಗೋಷ್ಠಿ ನಡೆಯಲಿದೆ. ಸಂಜೆ 5ಕ್ಕೆ ಶೂನ್ಯ ಸಂಪಾದನೆ-ಒಂದು ವಿವೇಚನೆ ಕುರಿತು ಡಾ. ಬಸವರಾಜ ಸಬರದ ವಿಶೇಷ ಉಪನ್ಯಾಸ ನೀಡಲಿದ್ದಾರೆ. ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.