ಧಾರವಾಡ

ಸೋನಾ ಮಸೂರಿ ಬಿಡಿ, ಜವಾರಿ ಅಕ್ಕಿ ರುಚಿ ನೋಡಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 29
ಸದಾ ಪಾಲಿಶ್ ಅಕ್ಕಿ ತಿಂದು ಬೇಸರವೇ? ಜವಾರಿ ಅಕ್ಕಿ ತಿಂದು ಆರೋಗ್ಯದಿಂದಿರಲು ಆಸಕ್ತಿಯೇ? ಅಕ್ಕಿಗೊಂದು, ಅವಲಕ್ಕಿಗೊಂದು, ಸುವಾಸನೆಗೆ ಮತ್ತೊಂದು. ರೊಟ್ಟಿಗೆ ಒಂದು, ಚಕ್ಕುಲಿಗೊಂದು...
ಹೀಗೆ ತರಹೇವಾರಿ ಬಣ್ಣದ, ಔಷಧಿ ಗುಣವುಳ್ಳ ಅಕ್ಕಿ ತಳಿಗಳು ನಿಮಗೆ ಬೇಕಿದ್ದರೆ ಬನ್ನಿ ನಗರದ ಗಾಂಧಿ ಪ್ರತಿಷ್ಠಾನ ಕೇಂದ್ರಕ್ಕೆ.
ಗ್ರೀನ್ ಫೌಂಡೇಶನ್, ಬೆಳಗಾವಿ ಗುಂಡೇನಟ್ಟಿಯ ಸಿದ್ಧಾರೂಢ ಸಾವಯವ ಕೃಷಿಕರ ಬಳಗ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಜವಾರಿ ಅಕ್ಕಿ ಮೇಳದಲ್ಲಿ ಸಾವಯವ ಕೃಷಿಯಲ್ಲಿ ಬೆಳೆದ ದೇಸಿ ಬತ್ತದ ತಳಿಗಳು ಕೈ ಬೀಸಿ ಕರೆಯುತ್ತಿವೆ.
ಮಧುಮೇಹ ತಡೆಯಲು ರಕ್ತಸಾಳಿ, ಕೆಂಪು ಅಸುಡಿ ಹಾಗೂ ಔಷಧಿ ಗುಣ ಹೊಂದಿರುವ ಪಂಚರತ್ನ ಮತ್ತು ಕಾಗಿಸಾಳಿ, ಬೆಳಗಾವಿ ಬಾಸುಮತಿ, ಕುಂಕುಮಸಾಳಿ, ಅಂಬೆಮೋರೆ, ರಾಜಮುಡಿ ಹೀಗೆ ತರಹೇವಾರಿ ಜವಾರಿ ತಳಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದ್ದು, ಸೋಮವಾರ ಸಂಜೆವರೆಗೂ ಈ ಮೇಳ ನಡೆಯಲಿದೆ.
ಭಾನುವಾರ ಕೃಷಿ ವಿವಿ ಪ್ರಭಾರಿ ಕುಲಪತಿ ಡಾ. ವಿಜಯಕುಮಾರ ಈ ಮೇಳ ಉದ್ಘಾಟಿಸಿ, ತೆಳ್ಳಗೆ, ಬೆಳ್ಳಗಿರುವ ಸೋನಾ ಮಸೂರಿ ಅಕ್ಕಿಯ ಮೇಲಿನ ಮೋಹ ತೊರೆದು ಆರೋಗ್ಯಕ್ಕೆ ಉತ್ತಮವಾದ ಜವಾರಿ ತಳಿಯ ಅಕ್ಕಿಯನ್ನು ಆಹಾರ ಪದ್ಧತಿಯಲ್ಲಿ ಬಳಸಬೇಕಿದೆ. ಅಕ್ಕಿಯ ಬಣ್ಣ ನೋಡಿ ಗುಣಮಟ್ಟ ಅಳೆಯದೇ ಅದರ ಗುಣ, ರುಚಿ ಗಮನಿಸಬೇಕು. ಸೋನಾ ಮಸೂರಿ ಅಕ್ಕಿಗೆ ಮಾತ್ರ ಇಷ್ಟು ದಿನ ಬೆಲೆ ಇತ್ತು. ಆದರೆ, ಇನ್ಮುಂದೆ ಹಾಗಿಲ್ಲ. ರಾಜ್ಯ ಸರ್ಕಾರ ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಜವಾರಿ ಅಕ್ಕಿ ತಳಿಗಳಿಗೂ ಬೇಡಿಕೆ ಬಂದೊದಗಿದೆ. ಕಡಿಮೆ ಬೆಲೆ ಇರುವ ಅಕ್ಕಿಯನ್ನೇ ಸರ್ಕಾರ ಹುಡುಕುತ್ತಿದ್ದು, ರೈತರು ಹಲವಾರು ಜವಾರಿ ತಳಿಗಳನ್ನು ಬೆಳೆಯುವ ಮೂಲಕ ತಮ್ಮ ಲಾಭದೊಂದಿಗೆ ಆರೋಗ್ಯಕ್ಕೆ ಉತ್ತಮ ಅಕ್ಕಿಯನ್ನು ನೀಡಬೇಕೆಂದರು.
ಪ್ರತಿ ತಳಿಗೂ ವಿಶೇಷ ಗುಣ: ಚಿಂತಕ ಪ್ರಕಾಶ ಭಟ್ ಮಾತನಾಡಿ, ಪ್ರತಿ ಅಕ್ಕಿಯ ತಳಿಗಳಿಗೆ ತನ್ನದೆಯಾದ ಗುಣವಿರುತ್ತದೆ. ಈ ಹಿಂದೆ ಬಾಣಂತಿಯರಿಗೆ ಪ್ರತ್ಯೇಕ ಅಕ್ಕಿಯ ಅನ್ನ ಹಾಗೆಯೇ, ಬೀಗರಿಗೆ, ಅನಾರೋಗ್ಯ ಪೀಡಿತರಿಗೆ ಪ್ರತ್ಯೇಕ ಅಕ್ಕಿ ತಳಿ ಇತ್ತು. ಅಲ್ಲದೆ, ಕೀಟಬಾಧೆ ತಾಳುವ ಅಕ್ಕಿ, ಹೆಚ್ಚು ಕುದಿಸುವ, ಕಡಿಮೆ ಕುದಿಸುವ ಹೀಗೆ ಸಾವಿರಾರು ಅಕ್ಕಿ ತಳಿಗಳಿದ್ದವು. ಇದೀಗ ಅವುಗಳಲ್ಲಿ ನೂರಾರು ಉಳಿದಿವೆ. ಗುಂಡೇನಟ್ಟಿಯ ಸಿದ್ಧಾರೂಢ ಸಾವಯವ ಕೃಷಿಕರ ಬಳಗ ನಶಿಸಿ ಹೋಗುತ್ತಿರುವ ಅಕ್ಕಿ ತಳಿಗಳನ್ನು ಅಭಿವೃದ್ಧಿ ಪಡಿಸಿ ಮತ್ತೆ ಪ್ರಚಾರಕ್ಕೆ ತಂದಿದ್ದು ಶ್ಲಾಘನೀಯ ಎಂದರು.
ಬತ್ತದ ತಳಿ ಸಂಶೋಧಕ ಡಾ. ಹನುಮನಟ್ಟಿ, ಬತ್ತ ಅಥವಾ ಅಕ್ಕಿ ಒಂದು ಆಹಾರವಲ್ಲ. ಅದೊಂದು ಜೀವನ. ಕೃಷಿ ಆರಂಭವಾದಾಗಿನಿಂದ ಬತ್ತ ಬೆಳೆಯಲಾಗುತ್ತಿದ್ದು, ಪ್ರಪಂಚದ ಶೇ. 50ಕ್ಕಿಂತ ಹೆಚ್ಚು ಜನ ಅಕ್ಕಿಯನ್ನು ಆಹಾರವಾಗಿ ಬಳಸುತ್ತಿದ್ದಾರೆ. ಬತ್ತದ ತಳಿಯಷ್ಟು ಬೇರೆ ಯಾವ ಆಹಾರ ಪದಾರ್ಥಗಳಿಲ್ಲ. ಇತ್ತೀಚೆಗೆ ರೈತರು ಅನಿವಾರ್ಯವಾಗಿ ವಾಣಿಜ್ಯ ಬೆಳೆಗಳತ್ತ ವಾಲುತ್ತಿದ್ದು, ಬತ್ತದ ಅನೇಕ ತಳಿಗಳನ್ನು ಮರೆತು ಬಿಟ್ಟಿದ್ದಾರೆ. ಬತ್ತವನ್ನು ಸಹ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ ಎಂದರು.
ಗುಂಡೇನಟ್ಟಿ ಸಿದ್ಧಾರೂಢ ಸಾವಯವ ಕೃಷಿಕರ ಬಳಗದ ಮುಖ್ಯಸ್ಥ ಶಂಕರ, ಕಾರ್ಯದರ್ಶಿ ಆನಂದ ತೇಗೂರ, ಭೀಮಣ್ಣ ಕಿಲಾರಿ, ಡಾ. ರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.