ಕೆರೆಗಳ ನುಂಗುತ್ತಿರುವ ನಗರೀಕರಣ: ಮೈಗೂರ ಬೇಸರ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 1
ಕೆರೆಗಳಿಂದಲೇ ಆವೃತ್ತವಾಗಿ, ಸದಾ ಹಸಿರಿನಿಂದ ಕಂಗೊಳಿಸಿದ್ದ ಧಾರವಾಡ ಸದ್ಯ ಕಾಂಕ್ರೀಟ್ ಕೇರಿಗಳಿಂದ ಭರ್ತಿಯಾಗುತ್ತಿದೆ ಎಂದು ರಾಜೀವ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಾಗೂ ಪರಿಸರವಾದಿ ಮುಕುಂದ ಮೈಗೂರ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ನವಲೂರು ಕೆರೆ ಆವರಣದಲ್ಲಿ ಶುಕ್ರವಾರ ಗ್ರೀನ್ ಆರ್ಮಿ ಹಾಗೂ ನಿರತ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತರಿಭೂಮಿ ವಿಶ್ವ ದಿನಾಚರಣೆ (ಫೆ.2) ಮುನ್ನಾದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಗರಗಳನ್ನು ವಿಸ್ತರಿಸುವ ಹೆಬ್ಬಯಕೆ ಇರುವ ಸಂಸ್ಥೆಗಳು ಇಲ್ಲಿನ ಕೆಂಪಗೇರಿ, ಹಾಲಗೇರಿ, ಕೊಪ್ಪದಕೆರೆ, ಹಿರೇಕೆರೆ, ಸಾಧನಕೆರೆ, ಕೆಲಗೇರೆ, ಎಮ್ಮಿಕೆರೆ ಎಲ್ಲವೂ ಕೇರಿಗಳಾಗಿ ಪರಿವರ್ತಿತವಾಗಿವೆ. ಅವುಗಳ ತರಿ ಭೂಮಿಯನ್ನು ಒಡೆದು, ನೀರನ್ನು ಬಸಿದು, ಕೆರೆಯ ಅಂಗಳಗಳನ್ನು ನಿವೇಶನಗಳನ್ನಾಗಿಸುವ ಕನಸು ನನಸಾಗಿದೆ. ಉದ್ದಿಮೆದಾರರಿಗೆ ಕೆರೆ-ಕುಂಟೆ, ಕಾಲುವೆ-ಹರಿ-ತೊರೆಗಳನ್ನು ಕಸ, ತ್ಯಾಜ್ಯ, ಹೊಲಸಿನಿಂದ ತುಂಬಿ ಕಾರ್ಖಾನೆಗಳನ್ನು ಎಬ್ಬಿಸುವ ಅದಮ್ಯ ಬಯಕೆ ಉಂಟಾಗಿದೆ ಎಂದರು. ಕ್ರಿಯಾಶೀಲ ಗೆಳೆಯರು ಬಳಗದ 35ಕ್ಕೂ ಹೆಚ್ಚು ಮಕ್ಕಳಿಗೆ ತರಿ ಭೂಮಿಯ ತಿಳಿವಳಿಕೆ ಮೂಡಿಸಿದ ಪತ್ರಕರ್ತ ಹರ್ಷವರ್ಧನ ಶೀಲವಂತ, 1990 ರಿಂದ 1993ರ ವರೆಗೆ ಸುಮಾರು ಮೂರು ವರ್ಷಗಳ ವರೆಗೆ ನಡೆದ ಗಣತಿಯಿಂದ 26 ದೇಶಗಳ 1319 ತರಿ ಭೂಮಿಗಳ ಸ್ಥಿತಿಗತಿಯ ಬಗ್ಗೆ ಸಾಕಷ್ಟು ನಿಖರವಾದ ಮಾಹಿತಿ ದೊರಕಿದೆ. ಯಾವುದೇ ತರಿಭೂಮಿ 20 ಸಾವಿರಕ್ಕೂ ಹೆಚ್ಚಿನ ಜಲಪಕ್ಷಿಗಳಿಗೆ ಆಸರೆ ಒದಗಿಸಿ ಪೋಷಿಸಿದರೆ ಅಂತಹ ತರಿಭೂಮಿಗೆ ಅಂತಾರಾಷ್ಟ್ರೀಯ ಮನ್ನಣೆ, ನೆರವು ದೊರಕುತ್ತದೆ. ಸ್ಥಳೀಯರಾದ ನಾವು ಮನಸ್ಸು ಮಾಡಬೇಕು. ಕಣ್ಮರೆ ಅಂಚಿನಲ್ಲಿರುವ 64 ಪ್ರಭೇದಗಳಿಗೆ ಸೇರಿದ ನೀರ್ಕೋಳಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 31 ಪ್ರಜಾತಿಯ ನೀರ್ಕೋಳಿಗಳು ಭಾರತದ ತರಿಭೂಮಿಗಳಲ್ಲಿ ಕಾಣಸಿಗುತ್ತವೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರೀನ್ ಆರ್ಮಿ ಮುಖ್ಯಸ್ಥ ಪ್ರಕಾಶ ಗೌಡರ, ಜಿಲ್ಲೆಯ ಕೆರೆಗಳಲ್ಲಿ ಅಪಾರ ಹೂಳಿದೆ. ಕೈಗಾರಿಕೆಗಳ ಕಲ್ಮಶ, ಒತ್ತುವರಿ, ಪಕ್ಷಿಗಳ ನಿರಂತರ ಬೇಟೆ. ವೈವಿಧ್ಯಮಯ ಜೀವರಾಶಿಯ ಬದಲಿಗೆ ದುರ್ವಾಸನೆ ಬೀರುವ, ಕೊಳೆತ ವಸ್ತುಗಳನ್ನು ಒಳಗೊಂಡ, ಸುತ್ತಮುತ್ತಲಿನ ಜೀವಿಗಳಿಗೆ ಮಾರಕವಾದ ನೊರೆತುಂಬಿದ ಹೊಲಸೇ ಇದೆ. ನಮ್ಮ ತರಿಭೂಮಿಯ ಹದಗೆಡುತ್ತಿರುವ ಪರಿಸ್ಥಿತಿಯನ್ನು ಸ್ಪಷ್ಟವಾಗಿ ನೀರ್ಕೋಳಿಗಳು ತೋರಿಸುತ್ತಿವೆ ಎಂದರು. ಪಾಲಿಕೆ ಸದಸ್ಯ ಶಿವಣ್ಣ ಬಡವಣ್ಣವರ್ ಅಧ್ಯಕ್ಷತೆ ವಹಿಸಿದ್ದರು. ನಿರತ ಸೇವಾ ಸಂಸ್ಥೆಯ ಅಧ್ಯಕ್ಷ ಅಸ್ಲಂಜಾನ್ ಅಬ್ಬೀಹಾಳ, ಅಲ್ಲಾಬಕ್ಷ ಅಬ್ಬೀಹಾಳ, ವನ್ಯಜೀವಿ ಛಾಯಾಗ್ರಾಹಕ ಅನೀಲಕುಮಾರ ಕಿತ್ತೂರು, ಸಂತೋಷ ಆನಿಶೆಟ್ಟರ್ ಇದ್ದರು. ನಂದೀಶ ಕಡಕೋಳ ನಿರೂಪಿಸಿದರು. ಅನೀಲ ಅಲ್ಲೊಳ್ಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

