ಪ್ರಶಸ್ತಿ, ಗೌರವ ಸ್ವೀಕರಿಸುವ ಆಸಕ್ತಿ ಇಲ್ಲ
ಹುಬ್ಬಳ್ಳಿ: ಪ್ರಶಸ್ತಿ, ಗೌರವಗಳನ್ನು ಸ್ವೀಕರಿಸುವ ವೈಯಕ್ತಿಕ ಆಸಕ್ತಿ ತಮಗಿಲ್ಲ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ವಿಶ್ವೇಶ್ವರನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕನ್ನಡ ಭನವ ಕಾಮಗಾರಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕ ವಿಶ್ವವಿದ್ಯಾಲಯ ತಮ್ಮನ್ನು ಗೌರವ ಡಾಕ್ಟರೇಟ್ ನೀಡಿ ಗೌರವಿಸಲು ನಿರ್ಧರಿಸಿರುವ ಕುರಿತಂತೆ ಮಾಧ್ಯಮಗಳಿಂದ ತೂರಿ ಬಂದ ಪ್ರಶ್ನೆಯೊಂದಕ್ಕೆ ಸಿಎಂ ಶೆಟ್ಟರ್, ಈ ರೀತಿಯಾಗಿ ಪ್ರತಿಕ್ರಿಯಿಸಿದರು. ಡಾಕ್ಟರೇಟ್ ನೀಡಿ ತಮ್ಮನ್ನು ಗೌರವಿಸಲು ಕವಿವಿ ನಿರ್ಧರಿಸಿದೆ. ಆದರೆ, ಫೆ. 15ರಂದು ಹಣಕಾಸು ವಿಧೇಯಕ ಮಂಡನೆಯಾಗಲಿರುವುದರಿಂದ ಪ್ರಶಸ್ತಿಗಿಂತಲೂ ತಮಗೆ ಅಧಿವೇಶನ ಮುಖ್ಯವಾಗಿದೆ ಎಂದರು.
ಕವಿವಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ತಮ್ಮ ಮನೆ ಬಾಗಿಲಿಗೆ ತಂದುಕೊಟ್ಟಲ್ಲಿ ಸ್ವೀಕರಿಸುತ್ತೀರಾ ಎಂಬ ಮಾಧ್ಯಮದವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ಬಗ್ಗೆ ತಾವು ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಲ್ಲದೇ ಈಗಲೇ ಈ ಕುರಿತಂತೆ ಚರ್ಚಿಸುವುದಿಲ್ಲ ಎಂದು ಮುಗುಳ್ನಕ್ಕರು. ಇನ್ನೂ ಎರಡ್ಮೂರು ತಿಂಗಳಲ್ಲಿ ಕನ್ನಡಭವನ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನೂ ಸಿಎಂ ಶೆಟ್ಟರ್ ವ್ಯಕ್ತಪಡಿಸಿದರು.
ಏಪ್ರಿಲ್ ಅಧಿವೇಶನದಲ್ಲಿ ಅಧಿಸೂಚನೆ: ತಮ್ಮ ನೇತೃತ್ವದ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿನ ಪ್ರಸ್ತಾವನೆಗಳನ್ನು ತಕ್ಷಣಕ್ಕೆ ಅನುಷ್ಠಾನಕ್ಕೆ ತರಲು ಏಪ್ರಿಲ್ ತಿಂಗಳಲ್ಲಿ ನಡೆಯುವ ಅಧಿವೇಶದಲ್ಲಿ ಅಧಿಸೂಚನೆ ಪಡೆಯಲಾಗುವುದು. ಬಜೆಟ್ನ ಎಲ್ಲ ಪ್ರಸ್ತಾವನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದೆಯೂ ಬಿಜೆಪಿಯೇ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಮುಂದಿನ ಸರ್ಕಾರವೂ ನಮ್ಮದೆ ಎಂದು ವಿಶ್ವಾಸದಿಂದ ನುಡಿದರು.
ಕಟ್ಟುನಿಟ್ಟಿನ ಕ್ರಮ: ಸರ್ಕಾರ ಕೋಟ್ಯಂತರ ಅನುದಾನದಲ್ಲಿ ರಾಜ್ಯಾದ್ಯಂತ ಸಾಕಷ್ಟು ಗುಣಮಟ್ಟದ ಕಾಮಗಾರಿಗಳು ನಡೆದಿವೆ. ಕೆಲವಷ್ಟು ಕಾಮಗಾರಿಗಳು ಕಳಪೆಯಾಗಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಯಾವ್ಯಾವ ಕಾಮಗಾರಿಗಳು ಕಳಪೆಯಾಗಿವೆ ಎಂಬುದನ್ನು ಪರಿಶೀಲನೆ ನಡೆಸಿ ಅಂತಹ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗುತ್ತಿಗೆದಾರರ ನಿರ್ಲಕ್ಷ್ಯ: ವಿಶ್ವೇಶ್ವರನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕನ್ನಡ ಭನವ ಹಾಗೂ ನ್ಯೂ ಕಾಟನ್ ಮಾರ್ಕೆಟ್ನಲ್ಲಿ ನಿರ್ಮಾಣಗೊಳ್ಳುತ್ತಿರುವ 'ಕನ್ವೆನ್ಶನಲ್ ಹಾಲ್' ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ನಿರ್ಲಕ್ಷ್ಯವೇ ಮುಖ್ಯ ಕಾರಣವಾಗಿದೆ ಎಂದ ಸಿಎಂ, ಅಂತಹ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಕನ್ವೆನ್ಶನಲ್ ಹಾಲ್ ಮಾರ್ಚ್ 15ರೊಳಗಾಗಿ ಉದ್ಘಾಟನೆಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹುದ್ದೆ ನಿಭಾಯಿಸಿದ್ದೇನೆ: ತಾವು ಮಂಡಿಸಿರುವ ಬಜೆಟ್ಗೆ ಸಂಬಂಧಿಸಿದಂತೆ ಯಾರೊಂದಿಗೂ ಸವಾಲು ಹಾಕಿರಲಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದ ಸಿಎಂ ಶೆಟ್ಟರ್, ಮುಖ್ಯಮಂತ್ರಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದೇನೆ. ಉತ್ತಮ ಬಜೆಟ್ ನೀಡಿದ ಸಂತೃಪ್ತಿ ತಮಗಿದೆ. ತಮ್ಮ ಆಯವ್ಯಯಕ್ಕೆ ನಾಡಿನ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲಿದೆ ಎಂದು ಪುನರುಚ್ಚರಿಸಿದ ಅವರು, ಬಜೆಟ್ಗೆ ನಾಡಿನ ಜನತೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ನೀರಾವರಿ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿಗೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ ಎಂದರು.
ಆಜ್ಞೆ ಪಾಲಿಸಬೇಕಾದ ಅನಿವಾರ್ಯತೆ: ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಹರಿಬಿಡುವ ಮನಸ್ಸು ತಮಗೂ ಇಲ್ಲ. ಆದರೆ, ಸರ್ವೋಚ್ಚ ನ್ಯಾಯಾಲಯದ ಆಜ್ಞೆ ಪಾಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಭಾರವಾದ ಮನಸ್ಸಿನಿಂದ ನೀರು ಬಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ತಮಿಳುನಾಡಿಗೆ ನೀರು ಬಿಡುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಜನತೆಗೆ ಏಪ್ರಿಲ್-ಮೇ ತಿಂಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಲಿದೆ ಎಂಬ ವಾಸ್ತವಿಕತೆಯ ಪ್ರಜ್ಞೆ ಸರ್ಕಾರಕ್ಕಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪುನರ್ ಪರಿಶೀಲನಾ ಅರ್ಜಿ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಇತ್ತೀಚಿಗಷ್ಟೇ ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಲಾಗಿದೆ ಎಂದ ಅವರು, ಸರ್ವ ಪಕ್ಷಗಳ ಸದಸ್ಯರೂ 2011 ಜನಗಣತಿ ಆಧಾರದಂತೆಯೇ ಚುನಾವಣೆ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು. 2011ರ ಜನಗಣತಿಯಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದರಿಂದ ಆಗುವ ಸಾಧ್ಯಾಸಾಧ್ಯತೆಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೂ ಮನವರಿಕೆ ಮಾಡಿಕೊಡಲಾಗುವುದು ಎಂದೂ ಸಿಎಂ ಶೆಟ್ಟರ್ ತಿಳಿಸಿದರು. ಸಂಸದ ಪ್ರಹ್ಲಾದ ಜೋಶಿ, ಶಾಸಕ ವೀರಭದ್ರಪ್ಪ ಹಾಲಹರವಿ, ಬಿಜೆಪಿ ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

