ಧಾರವಾಡ

16ರಿಂದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ

Published On :

ಹುಬ್ಬಳ್ಳಿ:  ಗೋಪನಕೊಪ್ಪದ ಶ್ರೀ ಗುರುಸಿದ್ದೇಶ್ವರ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಫೆ. 16 ಮತ್ತು 17ರಂದು ಗೋಪನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಜಯ ಸೂರ್ಯವಂಶಿ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಗುರುಸಿದ್ದೇಶ್ವರ ಸ್ಫೋರ್ಟ್ಸ್ ಕ್ಲಬ್ ಎರಡು ವರ್ಷಗಳಿಂದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸುತ್ತಿದೆ. ಒಂದು ಕಾಲದಲ್ಲಿ ಅರವತ್ತಕ್ಕೂ ಹೆಚ್ಚು ಕಬಡ್ಡಿ ತಂಡಗಳು ಹುಬ್ಬಳ್ಳಿ ನಗರದಲ್ಲಿದ್ದವು. ಇಂದು ಕೇವಲ ಮೂರು ತಂಡಗಳು ಮಾತ್ರ ನಗರದಲ್ಲಿ ಸಕ್ರಿಯವಾಗಿವೆ. ಫೆ. 16ರಿಂದ ಎರಡು ದಿನ ನಡೆಯಲಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 30-35ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇಲ್ಲಿಯವರೆಗೆ 20 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ ಎಂದು ತಿಳಿಸಿದರು.
50 ಕಿ.ಮೀ.ಗಿಂತ ಹೆಚ್ಚು ದೂರದಿಂದ ಆಗಮಿಸುವ ತಂಡಗಳಿಗೆ ಒಂದು ಬದಿಯ ರೇಲ್ವೆ ಪ್ರಯಾಣ ದರ ನೀಡಲಾಗುವುದು. ರೇಲ್ವೆ ಸೌಲಭ್ಯವಿಲ್ಲದ ಸ್ಥಳಗಳಿಂದ ಆಗಮಿಸುವ ತಂಡಗಳಿಗೆ ಬಸ್ ಪ್ರಯಾಣ ದರ ನೀಡಲಾಗುವುದು. ಆಗಮಿಸುವ ಕಬಡ್ಡಿ ಪಟುಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಅಂದು ಸಂಜೆ 4ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹು-ಧಾ ಮಹಾನಗರ ಪಾಲಿಕೆ ಸದಸ್ಯ ಪಿ.ಕೆ. ರಾಯನಗೌಡ್ರ ಅಧ್ಯಕ್ಷತೆ ವಹಿಸುವರು. ಕಲಘಟಗಿ ಶಾಸಕ ಅನಿಲ ಲಾಡ್ ಕಬಡ್ಡಿ ಟೂರ್ನಮೆಂಟ್ ಉದ್ಘಾಟಿಸುವರು ಎಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರು. 30 ಸಾವಿರ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರು. 20 ಸಾವಿರ ಮತ್ತು ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರು. 10 ಸಾವಿರ ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು.
ಜೊತೆಗೆ ವೈಯಕ್ತಿಕ ಸಾಧನೆ ತೋರಿದ ಉತ್ತಮ ಹಿಡಿತಗಾರ, ದಾಳಿಗಾರ ಮತ್ತು ಸರಣಿ ಪುರುಷ ಪ್ರಶಸ್ತಿ ಮತ್ತು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್.ಸಿ. ಶಿವಳ್ಳಿ, ನಾಗರಾಜ ಬನ್ನೂರ, ಗುರುನಾಥ ಉಣಕಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.